ಕನ್ನಡಪ್ರಭ ವಾರ್ತೆ ಕಲಬುರಗಿ ಬಚಾವತ್ ಐತೀರ್ಪನ್ನೆಲ್ಲ ಸಾರಾಸಾಗಾಟಾಗಿ ಉಲ್ಲಂಘನೆ ಮಾಡುತ್ತ ಕಳೆದ 3 ದಶಕದಿಂದ ಭೀಮಾನದಿಯಲ್ಲಿ ತನಗೆ ಹಂಚಿಕೆಯಾದ 95 ಟಿಎಂಸಿಗಿಂತ ಹೆಚ್ಚಿನ ನೀರನ್ನು ಹಾಡುಹಗಲೇ ಮಹಾರಾಷ್ಟ್ರ ಸರ್ಕಾರ ಕೊಳ್ಳೆ ಹೊಡೆಯುತ್ತಿದ್ದರೂ ಕರ್ನಾಟಕದ ಜನನಾಯಕರು, ಇಲ್ಲಿನ ಸರ್ಕಾರಗಳು ಈ ಬಗ್ಗೆ ಪ್ರಶ್ನಿಸದೆ ಮೌನವಾಗಿರುವುದು ಯಾಕೆ? ಎಂದು ಹೋರಾಟಗಾರ ಪಂಚಪ್ಪ ಕಲಬುರಗಿ ಪ್ರಶ್ನಿಸಿದರು.ಭೀಮಾ ತೀರ ಅಫಜಲ್ಪೂರದಲ್ಲಿ ಸ್ವಾಭಿಮಾನಿ ಕಬ್ಬು ಬೆಳೆಗಾರರ ಸಂಘ, ಭೀಮಾ ನದಿ ಶಾಶ್ವತ ಪರಿಹಾರ ಸಮಿತಿ ನೇತೃತ್ವದಲ್ಲಿ ಸೋಮವಾರ ನಡೆದ ಭೀಮಾ ನದಿ ನೀರಿನ 15 ಟಿಎಂಸಿ ನೀರನ್ನು ಮಹಾರಾಷ್ಟ್ರದಿಂದ ಪಡೆಯುವ ಕುರಿತ ಹಾಗೂ ಕಬ್ಬು ಬೆಳೆಗಾರ ಸಮಸ್ಯೆ, ಸವಾಲುಗಳ ಕುರಿತ ರೈತರ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ರಾಜ್ಯದ ಶೇ.56 ರಷ್ಟು ಭೌಗೋಳಿಕ ಪ್ರದೇಶ ವ್ಯಾಪಿಸಿರುವ ಕೃಷ್ಣಾ ಕೊಳ್ಳಕ್ಕೆ ಸರ್ಕಾರಗಳು ಪ್ರಾಮುಖ್ಯತೆಯನ್ನೇ ನೀಡಲಿಲ್ಲ, ರಾಜ್ಯದ ಶೇ.18 ಭೌಗೋಳಿಕ ವ್ಯಾಪ್ತಿಯ ಕಾವೇರಿಗೆ ತುಂಬಾ ಪ್ರಾಮುಖ್ಯತೆ ನೀಡಿದರು. ಕಾವೇರಿಗೆ ಪ್ರಾಮುಖ್ಯತೆ ನೀಡುವುದರ ಜತೆಗೆ ಕೃಷ್ಣಾ ಕೊಳ್ಳಕ್ಕೂ ನೀಡಿದ್ದರೆ ಇಂದು ಭೀಮಾ ನದಿಗೆ ಈ ದುರ್ಗತಿ ಬರುತ್ತಿರಲಿಲ್ಲ. ಶೇ. 65 ಭೂಭಾಗ ವ್ಯಾಪಿಸುವ ತಾಕತ್ತಿರುವ ಕೃಷ್ಣಾ ಕೊಳ್ಳದ ಯೋಜನೆಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ತಾತ್ಸಾರ ಯಾಕೆ? ಎಂದು ಪ್ರಶ್ನಿಸಿದರು.ಭೀಮಾ ನೀರಿನ ಬಳಕೆ, ಮಹಾ ಅಕ್ರಮ ಪ್ರಶ್ನಿಸದ ಸರ್ಕಾರಗಳ ಅಲಕ್ಷತನ ಧೋರಣೆ ಎದ್ದುಕಾಣುತ್ತಿದೆ. ಎಲ್ಲ ಪಕ್ಷಗಳು 3 ದಶಕದಿಂದ ತಮ್ಮ ಸರ್ಕಾರವಿದ್ದಾಗ ಇದನ್ನೇ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗಳ ಪ್ರಸ್ತುತ ಭವಿಷ್ಯದ ಬೆಳವಣಿಗೆಗಳ ಕುರಿತಂತೆ ಮಹಾರಾಷ್ಟ್ರ ಸರ್ಕಾರದ ನಕಾಶೆ ಪ್ರದರ್ಶಿಸಿದ ಅವರು ರಾಜ್ಯ ಇನ್ನಾದರೂ ಎಚ್ಚೆತ್ತು ಭೀಮಾ ತೀರದಲ್ಲಿನ ಮಹಾರಾಷ್ಟ್ರ ಅಕ್ರಮ, ನೀರಿನ ಕಬಳಿಕೆ ಪ್ರಶ್ನಿಸದೆ ಹೋದಲ್ಲಿ ರಾಜ್ಯಕ್ಕೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು.*ಕಾನೂನು ಬದ್ಧವಾಗಿ ಪ್ರಶ್ನಿಸಲಿ: ಭೀಮಾ ನಮ್ಮ ಭಾಗದ ಬಹುದೊಡ್ಡ ಜೀವಜಲ. ಸರ್ಕಾರಗಳ ಅವಗಣನೆಗೆ ಒಳಗಾಗಿರುವುದು ದುರಂತ. ರಾಜ್ಯ ಸರ್ಕಾರ ಭೀಮಾ ನದಿ ನೀರಿನ ಹಂಚಿಕೆ, ಮಹಾರಾಷ್ಟ್ರವು ಹೆಚ್ಚುವರಿ ನೀರನ್ನು ಹಿಡಿದಿಟ್ಟಿರುವ ಅಕ್ರಮಗಳನ್ನೆಲ್ಲ ಕಾನೂನು ಬದ್ಧವಾಗಿ ಪ್ರಶ್ನಿಸಬೇಕೆಂದು ಆಗ್ರಹಿಸಿದರು.ರಾಜ್ಯ ಭೀಮಾ ನದಿ ವಿಚಾರದಲ್ಲಿ ರೈತರ ಪರವಾಗಿ ನಿಲುವ ತಳೆಯಬೇಕು. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ಕಲಬುರಗಿ ಸಭೆಯಲ್ಲಿ ತಾವೂ ಪಾಲ್ಗೊಂಡು ಭೀಮಾ ನದಿ ನೀರಿನ ಬಳಕೆ ವಿಚಾರದಲ್ಲಿ ಅನೇಕ ಸಂಗತಿಗಳನ್ನು ಸಭೆಯ ಗಮನಕ್ಕೆ ತಂದಿದ್ದೇನೆ. ರಾಜ್ಯ ಸರ್ಕಾರ ಇನ್ನಾದರೂ ಗಮನಿಸಲಿ ಎಂದರು.
ಭೀಮಾ ತೀರದಲ್ಲಿ ಜಾಗೃತಿ ಮೂಡಲಿ: ಅಫಜಲಪುರದಲ್ಲಿ ಹುಟ್ಟಿಕೊಂಡಿರುವ ಭೀಮಾ ಶಾಶ್ವತ ಪರಿಹಾರ ಸಮೀತಿಯವರು ಭೀಮಾ ನದಿ ನೀರಿನ ವಿಚಾರದಲ್ಲಿ ನದಿಗುಂಟ ಇರುವ ಎಲ್ಲಾ ಹಳ್ಳಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ನದಿ ತೀರದ ಜನ ನೀರಿನ ಹಕ್ಕನ್ನು ಪ್ರಶ್ನಿಸಬೇಕು, ಪಾಲು ಕೇಳಬೇಕು, ಹಾಗಾದಾಗ ಮಾತ್ರ ಆಡಳಿತ ಚುರುಕಾಗಿ ಕೆಲಸ ಮಾಡುತ್ತದೆಂದು ಹೋರಾಟಗಾರ ಪಂಚಪ್ಪ ಕಲಬುರಗಿ ಸಲಹೆ ನೀಡಿದರು.ಭೀಮಾ ನೀರಿನ ಹೋರಾಟ, ಶಾಶ್ವತ ಪರಿಹಾರ ಸಮೀತಿಯ ಪರವಾಗಿ ರಮೇಶ ಪಾಟೀಲ್, ಶ್ರೀಮಂತ ಬಿರಾದಾರ್, ಸ್ವಾಭಿಮಾನಿ ಕಬ್ಬು ಬೆಳೆಗಾರರ ಸಂಘದ ರಮೇಶ ಶೆಟ್ಟಿ, ಶಿವಪುತ್ರ ಬುಲ್ರಿ, ಶಾಂತಪ್ಪ, ನಾಮದೇವ ಕಡಕೋಳ, ಕಬಬು ಬೆಳೆಗಾರರ ಸಂಘದ ಬಸವರಾಜ ಸುದ್ದಿಗೋಷ್ಠಿಯಲ್ಲಿದ್ದರು.