ಹಗರಿಬೊಮ್ಮನಹಳ್ಳಿ: ಮಾಜಿ ಕಾಂಗ್ರೆಸ್ ಶಾಸಕ ಭೀಮಾನಾಯ್ಕ ಅವರಿಂದಲೇ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರು ದುರ್ಬಳಕೆಯಾಗುತ್ತಿದೆ. ಪೊಲೀಸ್ ಇಲಾಖೆಯ ಆಯಕಟ್ಟಿನ ಸ್ಥಳಗಳಲ್ಲಿ ಭ್ರಷ್ಟ ಅಧಿಕಾರಿಗಳ ನೇಮಕ ಮಾಡುವ ಮೂಲಕ ಮಟಕಾ, ಐಪಿಎಲ್ ಬೆಟ್ಟಿಂಗ್ ಮತ್ತು ಕ್ಯಾಸಿನೋಗಳಂತಹ ಕಾಳ ದಂಧೆಕೋರರಿಗೆ ನೆರವಾಗಿದ್ದಾರೆ ಎಂದು ಶಾಸಕ ನೇಮರಾಜ್ ನಾಯ್ಕ ಆರೋಪಿಸಿದ್ದಾರೆ.
ಹ್ಯಾಬಿಟೇಟ್ ಸಂಸ್ಥೆ ಮೂಲಕ ಕೈಗೆತ್ತಿಕೊಳ್ಳಲಾಗಿರುವ ಕಾಮಗಾರಿಗಳಲ್ಲಿ ₹೧೦೦ ಕೋಟಿ ಅನುದಾನ ಲೂಟಿಯಾಗಿದೆ ಎಂದು ಆರೋಪಿಸುತ್ತಿರುವ ಭೀಮಾನಾಯ್ಕ ಒಬ್ಬ ಮಾನಸಿಕ ಅಸ್ವಸ್ಥ. ಕೇವಲ ಮೂರು ವರ್ಷಗಳಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದಿರುವ ಅಭಿವೃದ್ಧಿ ಕಂಡು ಸಹಿಸಲಾಗದೇ ನಾನು ಪರ್ಸೆಂಟೇಜ್ ವ್ಯವಹಾರ ನಡೆಸುತ್ತಿದ್ದೇನೆ ಎಂದು ಆರೋಪಿಸುವ ಬದಲು ಕಾಮಗಾರಿಗಳಲ್ಲಿ ಕಳಪೆ ಇದ್ದರೆ ತನಿಖೆ ನಡೆಸಲಿ. ಇವರದ್ದೇ ಸರ್ಕಾರ ಇದೆಯಲ್ಲ ಎಂದು ಕಾಲೆಳೆದರು.
ಹ್ಯಾಬಿಟೇಟ್ ಮೂಲಕ ನಡೆದಿರುವ ಕಾಮಗಾರಿಗಳ ಗುಣಮಟ್ಟ ಕುರಿತು ಕೆಕೆಆರ್‌ಡಿಬಿ ಕಾರ್ಯದರ್ಶಿಗಳೇ ಮೆಚ್ಚುಗೆ ಸೂಚಿಸಿದ್ದಾರೆ. ಯಾವುದೇ ತುಂಡು ಗುತ್ತಿಗೆ ಕಾಮಗಾರಿಗಳನ್ನು ನಮ್ಮ ಕಾರ್ಯಕರ್ತರು ನಿರ್ವಹಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬಿಡಿಗಾಸೂ ಒದಗಿಸುತ್ತಿಲ್ಲ ಎಂದು ಪುನರುಚ್ಛರಿಸಿದ ಅವರು, ಕೇಂದ್ರದ ಅಮೃತ್ ಯೋಜನೆ, ಡಿಎಂಎಫ್ ಹಾಗೂ ಕೆಎಂಆರ್‌ಇಸಿ ಮೂಲಕ ಅನುದಾನ ಪಡೆದು ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಹಾಳಾಗಿರುವ ರಸ್ತೆಗಳ ಸಮೀಕ್ಷೆ ನಡೆಸಿ ಅಭಿವೃದ್ಧಿಗೆ ₹೪೯ಕೋಟಿ ಅನುದಾನ ಒದಗಿಸಲಾಗಿದೆ. ನವೆಂಬರ್‌ನಲ್ಲಿ ₹೪.೩೦ಕೋಟಿ ಅನುದಾನ ಒದಗಿಸಿ ಪ್ರಾರಂಭಿಸಿದ್ದ ಜಲಾಶಯದ ಕ್ರಸ್ಟ್‌ಗೇಟ್ ಕಾಮಗಾರಿ ಅಳವಡಿಕೆ ಮುಗಿದಿದೆ. ₹೨ ಕೋಟಿ ಅನುದಾನದಲ್ಲಿ ಜಲಾಶಯದ ಎಡ, ಬಲ ದಂಡೆಗಳನ್ನು ಸುಸ್ಥಿರಗೊಳಿಸಿ ೨ ಟಿಎಂಸಿ ನೀರನ್ನು ಸಂಗ್ರಹಿಸಿ ಮುಂದಿನ ಮಳೆಗಾಲದಲ್ಲಿ ರೈತರ ಜಮೀನುಗಳಿಗೆ ನೀರುಣಿಸಲಾಗುತ್ತದೆ ಎಂದು ವಿವರಿಸಿದರು.