ದಾವಣಗೆರೆ ಹಾಗೂ ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ಪಕ್ಷದ ಮೇಲಿರುವ ತಮ್ಮ ವಿಶ್ವಾಸವನ್ನು ಜನರು ಮತ್ತೆ ಸಾಬೀತುಪಡಿಸಿದ್ದಾರೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ಬ್ಯಾಡಗಿ: ದಾವಣಗೆರೆ ಹಾಗೂ ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ಪಕ್ಷದ ಮೇಲಿರುವ ತಮ್ಮ ವಿಶ್ವಾಸವನ್ನು ಜನರು ಮತ್ತೆ ಸಾಬೀತುಪಡಿಸಿದ್ದಾರೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು. ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಎರಡು ಕ್ಷೇತ್ರಗಳ ಫಲಿತಾಂಶ ಕಾಂಗ್ರೆಸ್ ಸರ್ಕಾರದ ಜನಪರ ಆಡಳಿತಕ್ಕೆ ದೊರೆತ ಸ್ಪಷ್ಟ ಜನಾದೇಶವಾಗಿದೆ, ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಕ್ರಮಗಳು ಜನರ ಮನಸ್ಸು ಗೆದ್ದಿರುವುದರಿಂದಲೇ ಉಪಚುನಾವಣೆಯಲ್ಲಿ ಗೆಲುವು ಸಾಧ್ಯವಾಗಿದೆ ಎಂದರು.
ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರಕ್ಕೆ ಈ ಉಪಚುನಾವಣೆಗಳು ಅತ್ಯಂತ ಮಹತ್ವದ್ದಾಗಿದ್ದವು. ವಿರೋಧ ಪಕ್ಷಗಳು ಎಷ್ಟೇ ರಾಜಕೀಯ ತಂತ್ರಗಳನ್ನು ಅನುಸರಿಸಿದರೂ ಸಹ ಜನರು ಸತ್ಯಕ್ಕೆ ಬೆಂಬಲ ನೀಡಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಆಶೀರ್ವಾದ ನೀಡಿದ್ದಾರೆ ಎಂದರು.ಕಳೆದ ವಿಧಾನಸಭಾ ಚುನಾವಣೆಯಲ್ಲಿಯೇ ಜನತೆ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿದ್ದು, ಇದೀಗ ಉಪ ಚುನಾವಣೆಯಲ್ಲೂ ಅದೇ ನಂಬಿಕೆಯನ್ನು ತೋರಿಸಿದ್ದಾರೆ, ಇದು ಸರ್ಕಾರದ ಕಾರ್ಯಕ್ಷಮತೆ ಹಾಗೂ ಜನಪರ ನೀತಿಗಳೇ ಚುನಾವಣೆ ಯಶಸ್ಸಿಗೆ ಸಾಕ್ಷಿ ಎಂದರು.ಕಾಂಗ್ರೆಸ್ ಸರಕಾರ ಜನರ ಆಶೋತ್ತರಗಳಿಗೆ ತಕ್ಕಂತೆ ಕೆಲಸ ಮಾಡುತ್ತಿದೆ, ಬಡವರು, ರೈತರು, ಮಹಿಳೆಯರು ಹಾಗೂ ಯುವಕರಿಗಾಗಿ ಜಾರಿಗೆ ತಂದಿರುವ ಯೋಜನೆಗಳು ಜನಜೀವನದಲ್ಲಿ ಸಾಕಷ್ಟು ಬದಲಾವಣೆ ತಂದಿವೆ, ಮುಂದಿನ ದಿನಗಳಲ್ಲೂ ಇದೇ ವೇಗದಲ್ಲಿ ರಾಜ್ಯದಲ್ಲಿ ಸರ್ಕಾರದಿಂದ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಿದೆ. ಎರಡೂ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಮೂಲಸೌಕರ್ಯ, ಉದ್ಯೋಗಾವಕಾಶಗಳು ಹಾಗೂ ಸಾರ್ವಜನಿಕ ಸೇವೆಗೆ ಹೆಚ್ಚಿನ ಒತ್ತು ನೀಡಲಾಗುವುದು. “ಜನರ ವಿಶ್ವಾಸವೇ ನಮ್ಮ ಶಕ್ತಿ, ಅಭಿವೃದ್ಧಿಯೇ ನಮ್ಮ ಗುರಿ” ಎಂದರು.