ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ತಾಲೂಕಿನ ಕೋರವಾರ ಗ್ರಾಮದಲ್ಲಿ ಶುಕ್ರವಾರ ಸುಮಾರು 387 ಲಕ್ಷ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಗ್ರಾಮದ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇನೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ದುಡಿಯುವುದರ ಜತೆಗೆ ಎಲ್ಲಾ ವರ್ಗದ ಜನರಿಗೆ ಪ್ರಾಮಾಣಿಕವಾಗಿ ಸರ್ಕಾರಿ ಸೌಲತ್ತುಗಳನ್ನು ತಲುಪಿಸಲು ಬದ್ಧನಾಗಿದ್ದೇನೆ. ಸರ್ಕಾರದ ಅನುದಾನದ ಕೊರತೆಯಲ್ಲಿ ಗ್ರಾಮದಲ್ಲಿ ಸುಮಾರು 100ಲಕ್ಷ ರೂ, ವೆಚ್ಚದ ಸಿ.ಸಿ.ರಸ್ತೆ, ವಿವಿಧ ಯೋಜನೆಗಳ ಅಡಿಯಲ್ಲಿ ಕೈಲಾಸ ಮಠ, ಮಾಂತೇಶ್ವರ ಮಠ, ಬೀರಲಿಂಗೇಶ್ವರ ದೇವಸ್ಥಾನದ ಸಮುದಾಯ ಭವನ ಸೇರಿ ಸುಮಾರು 20 ಲಕ್ಷ ರೂ ವೆಚ್ಚದಲ್ಲಿ ಸಮುದಾಯ ಭವನಗಳ ನಿರ್ಮಾಣ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡದ ಕಾಮಗಾರಿಗೆ ಸುಮಾರು 266 ಲಕ್ಷ ರೂ ಅನುದಾನವನ್ನು ನೀಡುವ ಮೂಲಕ ಗ್ರಾಮದ ಅಭಿವೃದ್ಧಿಗೆ ಇಂದು ಸುಮಾರು 387 ಲಕ್ಷ ರೂ ವೆಚ್ಚದಲ್ಲಿ ವಿವಿಧ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸುವ ಚುನಾವಣೆಯಲ್ಲಿ ಕೊಟ್ಟ ಮಾತನ್ನು ಈಡೇರಿಸಿದ್ದೇನೆ. ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆಯ ಕುರಿತು ಜಿಲ್ಲಾಧಿಕಾರಿಗಳ ಜತೆ ಮಾತನಾಡಿದ್ದೇನೆ. ಬಹುದಿನದ ಬೇಡಿಕೆಯಾದ ಕೋರವಾರ ಗ್ರಾಮ ಹೋಬಳಿ ಕೇಂದ್ರ ಮಾಡಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆದಿದೆ, ಹೋಬಳಿ ಕೇಂದ್ರ ಮಾಡಲು ಬದ್ಧ ಎಂದರು.
ಪ್ರಮುಖರಾದ ಶೇಖರಗೌಡ ಪಾಟೀಲ ಹಾಗೂ ಎಂ.ಡಿ ವನಹಳ್ಳಿ ಮಾತನಾಡಿ, ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದ್ದ ನಮ್ಮ ಗ್ರಾಮಕ್ಕೆ ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಅವರು, ವಿರೋಧ ಪಕ್ಷದಲ್ಲಿದ್ದರೂ ಸಾಕಷ್ಟು ಅನುದಾನ ನೀಡುವ ಮೂಲಕ ಗ್ರಾಮದ ಪ್ರಗತಿಗೆ ಶ್ರಮಿಸುತ್ತಿರುವುದು ಸಂತಸ ತಂದಿದೆ ಎಂದರು.ಕಾರ್ಯಕ್ರಮದ ಸಾನ್ನಿಧ್ಯವನ್ನು ಸ್ಥಳೀಯ ಮಠದ ಕಾಶೀಲಿಂಗ ಮಹಾರಾಜರು ವಹಿಸಿದ್ದರು.
---------------