ಕನ್ನಡಪ್ರಭ ವಾರ್ತೆ ಬೆಳಗಾವಿ
ನರ್ಸಿಂಗ್ ಎಂದರೆ ಕೇವಲ ಒಂದು ಉದ್ಯೋಗವಲ್ಲ, ಅದು ಒಂದು ಸೇವಾ ಧರ್ಮ. ನರ್ಸ್ ಗಳು ಹೃದಯ ಶ್ರೀಮಂತರು. ಅವರ ಒಂದು ನಗು, ಒಂದು ಧೈರ್ಯದ ಮಾತು, ಒಂದು ಮಮತೆಯ ಸ್ಪರ್ಶ ರೋಗಿಗೆ ಅರ್ಧ ಔಷಧಿಯಂತೆ ಕೆಲಸ ಮಾಡುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದ್ದಾರೆ.ಶನಿವಾರ ಬೆಳಗಾವಿಯ ಬಿಮ್ಸ್ (BIMS) ಕಟ್ಟಡದ ಹೊಸ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸರ್ಕಾರಿ ನರ್ಸಿಂಗ್ ಶಾಲೆಯ 109ನೇ ಬ್ಯಾಚ್ ವಿದ್ಯಾರ್ಥಿಗಳ ಪ್ರೇರಣಾ ಜ್ಯೋತಿ- 2026 ದೀಪ ಬೆಳಗುವ ಮತ್ತು ಪ್ರಮಾಣ ವಚನ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಒಳ್ಳೆಯ ವೃತ್ತಿಯನ್ನು ಆಯ್ದುಕೊಂಡಿದ್ದೀರಿ. ಉತ್ತಮ ರೀತಿಯಲ್ಲಿ ಕಲಿತು, ಒಳ್ಳೆಯ ರೀತಿಯಲ್ಲಿ ಕೆಲಸ ಮಾಡಿ, ಒಬ್ಬ ಸಹೋದರಿಯಾಗಿ, ಒಬ್ಬ ತಾಯಿಯಾಗಿ, ಒಬ್ಬ ಮಗಳಾಗಿ ಜೀವನ ಪೂರ್ತಿ ಸೇವೆ ಮಾಡಿ. ನರ್ಸ್‌ಗಳು ನೀಡುವ ಸೇವೆ ಕೇವಲ ಒಬ್ಬ ವ್ಯಕ್ತಿಗೆ ಅಲ್ಲ, ಒಂದು ಕುಟುಂಬಕ್ಕೆ, ಒಂದು ಸಮಾಜಕ್ಕೆ. ಒಬ್ಬ ವೈದ್ಯರು ರೋಗಿಗೆ ಚಿಕಿತ್ಸೆ ಕೊಡಬಹುದು. ಆದರೆ, ಒಬ್ಬ ನರ್ಸ್ ರೋಗಿಯ ಮನಸ್ಸನ್ನು ಗುಣಪಡಿಸುತ್ತಾಳೆ. ವೈದ್ಯ ಕೆಲವೇ ನಿಮಿಷ ಬಂದು ಚಿಕಿತ್ಸೆ ನೀಡಿ ಹೋಗಬಹುದು. ಆದರೆ, ನರ್ಸ್ ರೋಗಿಯ ಜೊತೆಗೆ ಇದ್ದು ಧೈರ್ಯ ತುಂಬುತ್ತಾಳೆ, ಇಡೀ ಕುಟುಂಬಕ್ಕೆ ಸಾಂತ್ವನದ ಮಾತುಗಳನ್ನಾಡುತ್ತಾಳೆ. ಅವಳ ಮಾತೇ ರೋಗಿಯನ್ನು ಅರ್ಧ ಗುಣಪಡಿಸುತ್ತದೆ. ಅವರ ನಿಸ್ವಾರ್ಥ ಸೇವೆಗೆ ಬೆಲೆ ಕಟ್ಟಲಾಗದು ಎಂದು ಹೇಳಿದರು.