ಕನ್ನಡಪ್ರಭ ವಾರ್ತೆ ಬೆಳಗಾವಿ
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಆಡಳಿತ ಮಂಡಳಿಯ ಬೆಳಗಾವಿ ತಾಲೂಕು ಘಟಕದ ಚುನಾವಣೆಗೆ ಏ.೧೧ ಮತ್ತು ೧೨ರಂದು ನಾಮಪತ್ರ ಸಲ್ಲಿಸಬಹುದಾಗಿದೆ. ಆದರೆ, ಈವರೆಗೂ ಮತದಾರರ ಪಟ್ಟಿ ಪ್ರಕಟಿಸಿಲ್ಲ. ಅಲ್ಲದೇ, ಚುನಾವಣೆ ಕಚೇರಿಗೆ ಶನಿವಾರವೂ ಬೀಗ ಜಡಿದು ಚುನಾವಣೆ ಪ್ರಕ್ರಿಯೆ ನಿಯಮಾನುಸಾರ ನಡೆಯುತ್ತಿಲ್ಲ ಎಂದು ಆರೋಪಿಸಿ ನಗರದಲ್ಲಿ ಪ್ರತಿಭಟನೆ ನಡೆಸಿದರು.ನಗರದ ಚವ್ವಾಟಗಲ್ಲಿಯಲ್ಲಿನ ಸಂಘದ ಕಚೇರಿಗೆ ಭೇಟಿ ನೀಡಿದ ಶಿಕ್ಷಕರು, ಕಚೇರಿಗೆ ಬೀಗ ಜಡಿದಿರುವುದನ್ನು ಖಂಡಿಸಿದರು. ಅಲ್ಲದೇ, ಚುನಾವಣೆ ಶಾಖೆಯಲ್ಲಿ ಅಧಿಕೃತ ಅಂತಿಮ ಮತದಾರರ ಪಟ್ಟಿ ಪ್ರಕಟಿಸದೇ, ತಾಲೂಕು ಚುನಾವಣೆಯ ವೇಳಾಪಟ್ಟಿಯನ್ನು ಅಂಟಿಸದೇ ಚುನಾವಣೆ ಸಿಬ್ಬಂದಿ ಕಳ್ಳ ದಾರಿಯಲ್ಲಿ ಚುನಾವಣೆ ನಡೆಸುತ್ತಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ಬಳಿಕ ಮಾರ್ಕೆಟ್ ಪೊಲೀಸ್ ಠಾಣೆಗೆ ತೆರಳಿದ ಶಿಕ್ಷಕರು, ನಾಮಪತ್ರ ಸಲ್ಲಿಸುವ ಅರ್ಧ ದಿನ ಕಳೆದರೂ ಕಚೇರಿಯಲ್ಲಿ ಚುನಾವಣಾಧಿಕಾರಿ ಇಲ್ಲ. ಒಟ್ಟಾರೆ ಚುನಾವಣೆ ಪ್ರಕ್ರಿಯೆ ನಿಯಮಾನುಸಾರ ನಡೆಯುತ್ತಿಲ್ಲ. ಹೀಗಾಗಿ, ಕೂಡಲೇ ಇದಕ್ಕೆ ತಡೆಯೊಡ್ಡಬೇಕು ಬೇಕು ಎಂದು ದೂರು ಅರ್ಜಿ ಸಲ್ಲಿಸಿದರು.ಶಿಕ್ಷಕರಾದ ಆನಂದಗೌಡ ಕಾದ್ರೊಳ್ಳಿ ಹಾಗೂ ಅನ್ವರ್ ಲಂಗೋಟಿ ಮಾತನಾಡಿ, ಚುನಾವಣೆ ಕಚೇರಿ ಸಮಯ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೂ ಎಂದು ನಮೂದಿಸಲಾಗಿದೆ. ಆದರೆ, ಇಲ್ಲಿ ಕಚೇರಿ ಸಮಯದಲ್ಲಿ ಯಾರೊಬ್ಬರೂ ಇಲ್ಲವಾಗಿದೆ, ಹೀಗಾದರೆ ಚುನಾವಣೆ ಪ್ರಕ್ರಿಯೆ ಹೇಗೆ ನಡೆಯುತ್ತಿದೆ ಎನ್ನುವುದನ್ನು ತೋರಿಸುತ್ತದೆ ಅಸಮಾಧಾನ ವ್ಯಕ್ತಪಡಿಸಿದರು.
ಶಿಕ್ಷಕರಾದ ಶೇಖರ್ ಕರಂಬಳ್ಕರ, ಈರಣ್ಣ ಗೂಳಪ್ಪನವರ, ರಾಜು ಲಂಬುಗೋಳ, ಅಶೀಪ್ ಅತ್ತಾರ, ಐಶ್ವರ್ಯ ಮೆನಸೆ ಹಾಗೂ ಅನುರಾಧ ತಾರೀಹಾಳ್ಕರ ಸೇರಿದಂತೆ ಹಲವರು ಇದ್ದರು.