ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಕೊಲ್ಹಾರಸಾಧನೆಗೆ ಬಡತನವಾಗಲಿ ಅಥವಾ ಭೌಗೋಳಿಕ ಹಿನ್ನೆಲೆಯಾಗಲಿ ಅಡ್ಡಿಯಾಗದು ಎಂಬುದನ್ನು ಕೊಲ್ಹಾರ ಭಾಗದ ತುಪ್ಪದ ಮನೆತನದ ಇಬ್ಬರು ಹೆಣ್ಣುಮಕ್ಕಳು ಸಾಬೀತುಪಡಿಸಿದ್ದಾರೆ.
ಒಂದೇ ಕುಟುಂಬದ ಸ್ಪೂರ್ತಿ ಪರಸುರಾಮ ತುಪ್ಪದ ಹಾಗೂ ತೇಜಶ್ವಿನಿ ಈರಣ್ಣ ತುಪ್ಪದ ಇಬ್ಬರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕ ಪಡೆಯುವ ಮೂಲಕ ವಿಜಯಪುರ ಜಿಲ್ಲೆಯ ಗಮನ ಸೆಳೆದಿದ್ದಾರೆ.ಬಸವನ ಬಾಗೇವಾಡಿಯ ನಿವಾಸಿ ಪರಸುರಾಮ ತುಪ್ಪದ ಅವರ ಪುತ್ರಿ, ಸ್ಪೂರ್ತಿ ಮಂಗಳೂರಿನ ಪ್ರತಿಷ್ಠಿತ ಎಕ್ಸ್‌ಪರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿನಿಯ ಪ್ರಯತ್ನದ ಫಲವಾಗಿ 600 ಅಂಕಕ್ಕೆ 574 ಅಂಕ (ಶೇ.95.67ರಷ್ಟು) ಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ವೈದ್ಯಕೀಯ ಅಥವಾ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಸಾಧನೆ ತೋರಿದ್ದಾರೆ. ಕಾಲೇಜು ಆಡಳಿತ ಮಂಡಳಿ ಹಾಗೂ ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ ವಿಜಯಪುರ ಜಿಲ್ಲೆಯ ಕೊಲ್ಹಾರ ನಿವಾಸಿ ಈರಣ್ಣ ತುಪ್ಪದ ಅವರ ಪುತ್ರಿ, ತೇಜಶ್ವಿನಿ ಬೀಳಗಿಯ ಸ್ವಾಮಿ ವಿವೇಕಾನಂದ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ 600 ಅಂಕಗಳಿಗೆ ಬರೋಬ್ಬರಿ 560 ಅಂಕ (ಶೇ.93.33ರಷ್ಟು) ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿನಿ ಗ್ರಾಮೀಣ ಭಾಗದ ಕಾಲೇಜಿನಲ್ಲಿ ಓದಿದರೂ ಪ್ರತಿಭೆಗೆ ಮಿತಿಯಿಲ್ಲ ಎಂಬುದನ್ನು ತೇಜಶ್ವಿನಿ ತೋರಿಸಿಕೊಟ್ಟಿದ್ದಾರೆ.
ಈ ಸಹೋದರಿಯರ ಸಾಧನೆಯು ಗ್ರಾಮೀಣ ಭಾಗದ ವಿದ್ಯಾರ್ಥಿನಿಯರಿಗೆ ಮತ್ತು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪ್ರೇರಣೆಯಾಗಿದೆ. ವಿಜ್ಞಾನ ಮತ್ತು ವಾಣಿಜ್ಯ ಎರಡೂ ಕ್ಷೇತ್ರಗಳಲ್ಲಿ ಇಬ್ಬರು ಸಾಧನೆ ಮಾಡಿದ್ದಾರೆ.