ಜನಸಾಮಾನ್ಯ ಸಾಧಕರು, ಸಂಗೀತ ಸ್ವಾದ, ಪ್ರಕೃತಿ ಸಂಸ್ಕೃತಿ ಗೋಷ್ಠಿ
ದೇಸೀ ದನದ ಹಾಲು, ಗೋಮೂತ್ರ ಹಾಗೂ ಸೆಗಣಿ ಎಲ್ಲವೂ ಆರೋಗ್ಯಕ್ಕೂ, ಕೃಷಿಗೂ, ಆದಾಯಕ್ಕೂ ಪೂರಕವಾಗಿವೆ. ದೇಸೀ ಗವ್ಯ ಉತ್ಪನ್ನ ಹಾಗೂ ಗೋ ಆಧಾರಿತ ಕೃಷಿಯಿಂದ ಯಶಸ್ಸನ್ನು ಕಂಡುಕೊಂಡಿದ್ದೇನೆ ಎಂದು ನಾಗರಾಜ ಪೈ ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ವಿದ್ಯಾಸಂಸ್ಥೆಗಳ ಸಂಯೋಜನೆಯಲ್ಲಿ ಭ್ರಮರ ಇಂಚರ ನುಡಿಹಬ್ಬದಲ್ಲಿ ಜನಸಾಮಾನ್ಯ ಸಾಧಕರು ಗೋಷ್ಠಿಯಲ್ಲಿ ತನ್ನ ಯಶಸ್ಸಿನ ಕುರಿತು ಅವರು ಮಾತನಾಡಿದರು.ಲಕ್ಷಾಂತರ ಗಿಡಗಳನ್ನು ಹಂಚಿ, ನೆಟ್ಟಿರುವ ಪರಿಸರ ಪ್ರೇಮಿ ಮಾಧವ ಉಳ್ಳಾಲ್ ಮಾತನಾಡಿ, ಗಿಡಗಳನ್ನು ನೆಟ್ಟು ಮರಗಳನ್ನಾಗಿಸಿ ಪರಿಸರವನ್ನು ತಂಪಾಗಿಸಿಡೋಣ. ವಿಶ್ವದ ಎಲ್ಲ ದೇಶಗಳೂ ಇವತ್ತು ಭೂಮಿಯ ಬಿಸಿ, ಹವಾಮಾನದ ಬದಲಾವಣೆ ಬಗ್ಗೆ ಚಿಂತಿಸುವಂತಾಗಿದೆ. ಈ ಬಗ್ಗೆ ಜಾಗೃತಿ ಬೇಕು ಎಂದು ಹೇಳಿದರು.
ವಿಕಲಾಂಗೆ ಆದರೂ ಕಲಾಕೃತಿಗಳ ಮೂಲಕ ಸಾಧನೆಗೈದ ಸುಮಂಗಳಾ ಪಂಜಿಮಾರು, ಖ್ಯಾತ ಟ್ಯೂಬರ್ ಯಾಸೀರ್ ಯಾಚಿ ಮಾತನಾಡಿದರು.
ನುಡಿಹಬ್ಬದಲ್ಲಿ ಸಂಗೀತ ಸ್ವಾದ ಗೋಷ್ಟಿಯಲ್ಲಿ ವಿದ್ವಾಂಸ ಅರವಿಂದ ಹೆಬ್ಬಾರ್ ಮಾತನಾಡಿದರು.
ನುಡಿಹಬ್ಬದಲ್ಲಿ ಪ್ರಕೃತಿ ಸಂಸ್ಕೃತಿ ಬಗ್ಗೆ ಮಾತನಾಡಿದ ಉರಗತಜ್ಞ, ಸಾಹಿತಿ ಗುರುರಾಜ ಸನಿಲ್, 30-40 ಪ್ರಬೇಧಗಳಿರುವ ಗಿಡಗಳು, ಆಯುರ್ವೇದ ಗಿಡಗಳು, ಹಾವುಗಳು, ಪಕ್ಷಿಗಳು, ಪ್ರಾಣಿಗಳು ಇರುವ ನೈಸರ್ಗಿಕ ನಾಗಬನಗಳನ್ನು ಉಳಿಸುವ ಪ್ರಯತ್ನ ಮಾಡೋಣ. ಪಶ್ಚಿಮ ಘಟ್ಟದ ಒಂದು ತುಣುಕು ನಮ್ಮ ಒಂದು ನಾಗಬನ, ದೇವರಕಾಡುಗಳಲ್ಲಿ ಇದೆ. ಇದನ್ನು ಉಳಿಸಬೇಕಾಗಿದೆ. ಪ್ರಕೃತಿಯನ್ನು ಉಳಿಸಿದಾಗ ಜೀವಿಗಳು ಅಲ್ಲೇ ಇರುತ್ತವೆ. ನಾಗಾರಾಧನೆ ಮಾಡೋಣ. ಆದರೆ ಮೂಢನಂಬಿಕೆ ಬೇಡ ಎಂದು ಹೇಳಿದರು.