ಅಂಡರ್ ಬ್ರಿಡ್ಜ್ ಕಾಮಗಾರಿಗೆ ಭೂಮಿಪೂಜೆ

KannadaprabhaNewsNetwork |  
Published : Jun 29, 2025, 01:32 AM IST
ಸಂಸದ ರಮೇಶ ಜಿಗಜಿಣಗಿ ಸುದ್ದಿಗೋಷ್ಠಿ | Kannada Prabha

ಸಾರಾಂಶ

ದೇಶದಲ್ಲಿ 65 ವರ್ಷಗಳ ಆಡಳಿತ ಮಾಡಿದ ಕಾಂಗ್ರೆಸ್ ಏನು ಮಾಡಿದೆ?. ಬಡತನ ನಿರ್ಮೂಲನೆ ಮಾಡುತ್ತೇವೆ ಎಂದು ದೇಶದಿಂದ ಬಡವರನ್ನೇ ಓಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ನಗರದ ಗಣೇಶ ನಗರದಲ್ಲಿ ಜುಲೈ 1ರಂದು ಅಂಡರ್ ಬ್ರಿಡ್ಜ್ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ಸಂಸದ ರಮೇಶ ಜಗಜಿಣಗಿ ತಿಳಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ 11 ವರ್ಷಗಳ ಮೋದಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಗೆ ಸಾಕಷ್ಟು ಅನುಕೂಲವಾಗಿದೆ. ಈಗ ₹66 ಕೋಟಿ ವೆಚ್ಚದಲ್ಲಿ ಈ ಕಾಮಗಾರಿ ಆರಂಭಿಸಲಾಗುವುದು. ಇದುವರೆಗೆ ಜಿಲ್ಲೆಯಲ್ಲಿ 12 ಅಂಡರ್ ಬ್ರಿಡ್ಜ್ ಹಾಗೂ 5 ಓವರ್ ಬ್ರಿಡ್ಜ್‌ಗಳ ನಿರ್ಮಾಣ ಮಾಡಲಾಗಿದ್ದು, ಒಟ್ಟು ₹191 ಕೋಟಿ ವೆಚ್ಚ ಮಾಡಲಾಗಿದೆ. ಅದೇ ರೀತಿ ಹೆದ್ದಾರಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದರು.

ದೇಶದಲ್ಲಿ 65 ವರ್ಷಗಳ ಆಡಳಿತ ಮಾಡಿದ ಕಾಂಗ್ರೆಸ್ ಏನು ಮಾಡಿದೆ?. ಬಡತನ ನಿರ್ಮೂಲನೆ ಮಾಡುತ್ತೇವೆ ಎಂದು ದೇಶದಿಂದ ಬಡವರನ್ನೇ ಓಡಿಸಿದ್ದಾರೆ. ಒಂದು ವೇಳೆ, ಆಗಿನ ಸಂದರ್ಭದಲ್ಲಿ ದೇಶಕ್ಕೆ ಮೋದಿ ಅವರಂತಹ ನಾಯಕತ್ವ ಇದ್ದಿದ್ದರೆ ಜಗತ್ತಿನ ಮೊದಲ ಸ್ಥಾನದಲ್ಲಿ ಇರುತ್ತಿತ್ತು ಎಂದರು‌. ಇದೇ ವೇಳೆ, ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆ ಮಾಡಬೇಕು ಎಂದು ನಾನು ಈಗಲೇ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಇನ್ನು ಜಿಲ್ಲೆಯಲ್ಲಿ ಕೈಗಾರಿಕೆಗಳ ರಸ್ತೆ ವ್ಯವಸ್ಥೆ ಮಾತ್ರ ಸಾಕಾಗುವುದಿಲ್ಲ‌. ಕೈಗಾರಿಕೆಗೆ ಅಗತ್ಯವಾದ ಕಚ್ಚಾ ವಸ್ತುಗಳು ಬೇಕಾಗುತ್ತದೆ. ಆದರೂ, ಈ‌ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು. ದೇಶದಲ್ಲಿ ಸಂವಿಧಾನ ಹಾಗೂ ದಲಿತರ ವಿಚಾರಕ್ಕೆ ಕೈಹಾಕಿದರೆ ಯಾವುದೇ ಸರ್ಕಾರ ಉಳಿಯುವುದಿಲ್ಲ ಎಂದರು‌.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮಾಜಿ ಶಾಸಕರಾದ ರಮೇಶ ಭೂಸನೂರ, ಅರುಣ ಶಹಾಪುರ ಮುಖಂಡರಾದ ಸಂಜಯಕುಮಾರ ಪಾಟೀಲ ಕನಮಡಿ, ಚಂದ್ರಶೇಖರ, ಈರಣ್ಣ ರಾವೂರ, ವಿಜಯ ಜೋಷಿ ಇದ್ದರು.ಬಿಜೆಪಿ ಅಧ್ಯಕ್ಷರ ಬದಲಾವಣೆ ಗೋಜಿಗೆ ಹೋಗಲ್ಲ

ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ವಿಚಾರಗಳನ್ನು ಮಾಧ್ಯಮಗಳಲ್ಲಿ ನೋಡಿದ್ದೇನಷ್ಟೇ. ನಾನು ಈ ಗೋಜಿಗೆ ಹೋಗಲ್ಲ. ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರದ ಉಸಾಬರಿಯೇ ಬೇಡ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ಪಕ್ಷದ ಕೆಲ ವಿಚಾರಗಳ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಈ ಸಂಬಂಧ ಯಾರನ್ನು ಸಂಪರ್ಕಿಸಲು ಹೋಗಿಲ್ಲ. ಬದಲಾವಣೆ ಜಂಜಾಟಕ್ಕೆ ನಾ ಹೋಗಲ್ಲ. ನಾನು ಅಷ್ಟು ದೊಡ್ಡ ಲೀಡರ್ ಅಲ್ಲ ಎಂದು ಮಾರ್ಮಿಕವಾಗಿ ನುಡಿದರು. ನಾನು ನನ್ನ ಕೆಲಸಗಳನ್ನು ಮಾಡಿಕೊಂಡು ಇರ್ತೀನಿ. ಪಕ್ಷದಲ್ಲಿ ಏನ್ ನಡೆಯುತ್ತೆ ಅನ್ನೋದರ ವಿಚಾರ ಮಾಡಲ್ಲ. ಹಿರಿಯರಿದ್ದಾರೆ, ಅವರು ಏನು ನಿರ್ಧಾರ ಮಾಡುತ್ತಾರೆ ಅದಕ್ಕೆ ಸಮ್ಮತಿ ಇದೆ. ಮಾಜಿ ಸಿಎಂ ಮಗ ಎಂದು ವಿಜಯೇಂದ್ರಗೆ ರಾಜಾಧ್ಯಕ್ಷರನ್ನಾಗಿ ಮಾಡಿದ್ದಾರೆ. ವಯಸ್ಸಿನಲ್ಲಿ ನಾನು ಅವರಗಿಂತ ದೊಡ್ಡವ. ಅಂದು ಹೈಕಮಾಂಡ್ ತೀರ್ಮಾನ ಒಪ್ಪಿದ್ದೇವೆ. ಯಾರನ್ನೇ ಮಾಡಿದರೂ ಒಕೆ ಎಂದು ತಿಳಿಸಿದರು.

ಪಕ್ಷದ ಭಿನ್ನಮತ ಶಮನಕ್ಕೆ ಹೈಕಮಾಂಡ್ ಯತ್ನ ಕುರಿತು ಮಾತನಾಡಿ, ನನಗೆ ಏನೂ ಗೊತ್ತಿಲ್ಲ. ಸುಳ್ಳು ಯಾಕೆ ಹೇಳಲಿ, ಪಕ್ಷದಲ್ಲಿನ ಜಗಳಗಳ ಬಗ್ಗೆ ನನಗೆ ಗೊತ್ತಿಲ್ಲ. ನಂದೆ ನನಗೆ ಸಾಕಾಗಿದೆ. ನಾನು ಪಕ್ಷದ ಹಿರಿಯ ಅಲ್ಲ, ಸಾಮಾನ್ಯ ಕಾರ್ಯಕರ್ತ. ನಾನು ಮಂತ್ರಿಯಾಗಿದ್ದೆ, ಹಿರಿಯ ಎಂದು ತಿಳಿದುಕೊಂಡಿಲ್ಲ. ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ ಎಂದು ವಚನ ಹೇಳಿದರು.

ಸಂವಿಧಾನ ಪೀಠಿಕೆಯಿಂದ ಜಾತ್ಯತೀತ ಮತ್ತು ಸಮಾಜವಾದಿ ತೆಗೆದುಹಾಕಬೇಕು ಎಂಬ ಆರ್‌ಎಸ್ಎಸ್ ಪ್ರಮುಖ ದತ್ತಾತ್ರೇಯ ಹೊಸಬಾಳೆ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಏನು ಹೇಳಿದ್ದಾರೆ ಎಂದು ನನಗೆ ಗೊತ್ತಿಲ್ಲ. ಆದರೆ, ಈ ವಿಷಯ ಮತ್ತು ಅವರ ಹೇಳಿಕೆ ಚರ್ಚೆ ಆಗುವುದಾದರೆ ಆಗಲಿ.‌ ನಾನೊಬ್ಬ ಏನು ಹೇಳಲು ಬರುವುದಿಲ್ಲ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ