ಬಳ್ಳಾರಿಯಲ್ಲಿ ಒಣ ಮೆಣಸಿನಕಾಯಿ ಮಾರುಕಟ್ಟೆ ಸ್ಥಾಪನೆ ಯಾವಾಗ?

KannadaprabhaNewsNetwork |  
Published : Jun 29, 2025, 01:32 AM IST
28 ಬಿಆರ್‌ವೈ 2 | Kannada Prabha

ಸಾರಾಂಶ

ಬೆಳೆಗಾರರ ಹಿತ ಕಾಯಲು ಸ್ಥಳೀಯವಾಗಿಯೇ ಒಣ ಮೆಣಸಿನಕಾಯಿ ಮಾರುಕಟ್ಟೆ ಸ್ಥಾಪಿಸಬೇಕು ಎಂಬ ರೈತರು ಹಾಗೂ ರೈತ ಸಂಘಟನೆಗಳ ಕೂಗಿಗೆ ಇನ್ನೂ ಬಲ ಬಂದಿಲ್ಲ.

ಒಂದೆಡೆ ಬೆಲೆ ಕುಸಿತ ಮತ್ತೊಂದೆಡೆ ಸಂಚಾರ ವೆಚ್ಚ ಭರಿಸಲಾಗದ ಸ್ಥಿತಿಯಲ್ಲಿ ಬೆಳೆಗಾರರು

ಮಂಜುನಾಥ ಕೆ.ಎಂ

ಕನ್ನಡಪ್ರಭ ವಾರ್ತೆ ಬಳ್ಳಾರಿಗಣಿನಾಡು ಖ್ಯಾತಿಯ ಬಳ್ಳಾರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಒಣ ಮೆಣಸಿನಕಾಯಿ ಬೆಳೆಯಲಾಗುತ್ತಿದೆ. ಜಿಲ್ಲೆಯಲ್ಲಿ ಬೆಳೆದ ಒಣ ಮೆಣಸಿನಕಾಯಿ ದೇಶದ ನಾನಾ ರಾಜ್ಯಗಳಿಗೆ ರಫ್ತಾಗುತ್ತದೆ. ಆದರೆ, ಬೆಳೆಗಾರರ ಹಿತ ಕಾಯಲು ಸ್ಥಳೀಯವಾಗಿಯೇ ಒಣ ಮೆಣಸಿನಕಾಯಿ ಮಾರುಕಟ್ಟೆ ಸ್ಥಾಪಿಸಬೇಕು ಎಂಬ ರೈತರು ಹಾಗೂ ರೈತ ಸಂಘಟನೆಗಳ ಕೂಗಿಗೆ ಇನ್ನೂ ಬಲ ಬಂದಿಲ್ಲ!

ರೈತರು ಬೆಳೆದ ಒಣ ಮೆಣಸಿನಕಾಯಿಗೆ ಮಾರುಕಟ್ಟೆ ವ್ಯವಸ್ಥೆಯಿಲ್ಲದೆ ದೂರದ ಹಾವೇರಿ ಜಿಲ್ಲೆಯ ಬ್ಯಾಡಗಿ ಪ್ರದೇಶಕ್ಕೆ ತೆರಳಿ ಮಾರಾಟ ಮಾಡಿಕೊಂಡು ಬರುವ ಪರಿಸ್ಥಿತಿ ನಿರ್ಮಾಣವಾಗಿದ್ದು ಒಂದೆಡೆ ಬೆಲೆ ಕುಸಿತ ಮತ್ತೊಂದೆಡೆ ಸಂಚಾರ ವೆಚ್ಚ ಭರಿಸಲಾಗದ ಸ್ಥಿತಿಯಲ್ಲಿ ಬೆಳೆಗಾರರು ಒದ್ದಾಡುತ್ತಿದ್ದಾರೆ.ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಮಾರುಕಟ್ಟೆ ಸ್ಥಾಪಿಸಲು 2022ರ ಸೆ.29ರಂದು ಕೃಷಿ ಇಲಾಖೆ ಅಧಿಸೂಚನೆ ಹೊರಡಿಸಿ, ಟೆಂಡರ್ ಕರೆದರೂ ಯಾರೂ ಭಾಗವಹಿಸದಿರುವುದು ಮಾರುಕಟ್ಟೆ ಸ್ಥಾಪನೆಯ ಉದ್ದೇಶ ವಿಮುಖಗೊಂಡಂತಾಗಿದೆ. ರಾಜ್ಯ ಸರ್ಕಾರವೇ ಸ್ವಂತ ಅನುದಾನದಿಂದ ಮಾರುಕಟ್ಟೆ ನಿರ್ಮಾಣ ಮಾಡಬೇಕು ಎಂದು ರೈತ ಸಂಘಟನೆಗಳು ಹತ್ತಾರು ಬಾರಿ ಹೋರಾಟ ನಡಸಿದರೂ ರಾಜ್ಯ ಸರ್ಕಾರ ಕಿವಿಗೊಡದೆ ಮೌನ ವಹಿಸಿರುವುದು ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.

ಜಾಗ ಗುರುತಿಸಿದರಷ್ಟೇ:ಮೆಣಸಿನಕಾಯಿ ಬೆಳೆಯುವ ಜಿಲ್ಲೆಗಳಾದ ಹಾವೇರಿ, ಗದಗ, ರಾಯಚೂರು, ಧಾರವಾಡ ಜಿಲ್ಲೆಗಳಿಗೆ ಹೋಲಿಸಿದರೆ ಬಳ್ಳಾರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಮೆಣಸಿನಕಾಯಿ ಬೆಳೆಯಲಾಗುತ್ತಿದೆ. ರಾಜ್ಯದ ಒಟ್ಟು ಒಣ ಮೆಣಸಿನಕಾಯಿ ಬೆಳೆಯಲ್ಲಿ ಶೇ.20ರಿಂದ 22ರಷ್ಟು ಪಾಲು ಬೆಳೆ ಬಳ್ಳಾರಿ ಜಿಲ್ಲೆಯದ್ದು ಎಂಬುದು ಗಮನಾರ್ಹ. ಬಳ್ಳಾರಿ ತಾಲೂಕು, ಕಂಪ್ಲಿ ಹಾಗೂ ಕುರುಗೋಡು ತಾಲೂಕಿನಲ್ಲಿ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಿರುಗುಪ್ಪ ಹಾಗೂ ಸಂಡೂರು ತಾಲೂಕಿನ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಸಹ ಒಣ ಮೆಣಸಿನಕಾಯಿ ಬೆಳೆದು ಮಾರಾಟ ಮಾಡಲಾಗುತ್ತದೆ. 2023/24ನೇ ಸಾಲಿನಲ್ಲಿಯೇ ಜಿಲ್ಲೆಯಲ್ಲಿ 59,508 ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 1,19,155 ಟನ್ ಮೆಣಸಿನಕಾಯಿ ಬೆಳೆ ಬೆಳೆಯುತ್ತಿದೆ. ಆದರೆ, ಬೆಳೆಗಾರರಿಗೆ ಅನುಕೂಲ ಕಲ್ಪಿಸುವ ಕಾಳಜಿ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಸರ್ಕಾರದಿಂದ ಕಂಡು ಬಂದಿಲ್ಲ.

ರೈತ ಸಂಘಟನೆಗಳ ಹೋರಾಟಕ್ಕೆ ಮಣಿದು ಮಾರುಕಟ್ಟೆ ಸ್ಥಾಪನೆಗೆ ಕೃಷಿ ಮಾರುಕಟ್ಟೆ ಇಲಾಖೆಯು ಬಳ್ಳಾರಿ ಹೊರ ವಲಯದ ಆಲದಹಳ್ಳಿಯ ಬಳಿ 23.25 ಎಕರೆ ಪ್ರದೇಶದಲ್ಲಿ ಜಾಗ ಗುರುತಿಸಲಾಗಿದೆ ಎಂಬ ಸಮಾಧಾನ ಬಿಟ್ಟರೆ, ಮಾರುಕಟ್ಟೆ ಸ್ಥಾಪನೆ ನೆಲೆಯಲ್ಲಿ ಯಾವುದೇ ಪೂರಕ ಕ್ರಮಗಳಾಗಿಲ್ಲ. ಇದು ಬೆಳೆಗಾರರಿಗೆ ನುಂಗದ ತುತ್ತಾಗಿ ಪರಿಣಮಿಸಿದ್ದು, ಮುಂದೇನು ಎಂಬ ಚಿಂತೆ ಶುರುವಾಗಿದೆ. ಬೆಳೆ ಉತ್ಪಾದನೆ ಮತ್ತು ಮಾರುಕಟ್ಟೆ ಸ್ಥಾಪನೆಗೆ ಬೇಕಾದ ಎಲ್ಲ ಸೌಕರ್ಯಗಳು ಇದ್ದರೂ ರೈತರ ಹಿತ ಕಾಯಲು ಮುಂದಾಗದ ಸರ್ಕಾರದ ನಿಷ್ಕಾಳಜಿಗೆ ರೈತರು ಹಿಡಿಶಾಪ ಹಾಕುವಂತಾಗಿದೆ.ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಅನ್ನದಾತ ಸಂರಕ್ಷಣೆ ಅಭಿಯಾನ್ ಅಡಿಯಲ್ಲಿ "ಬೆಲೆ ಕುಸಿತ ಪಾವತಿ ಯೋಜನೆ " ಬೆಂಬಲಬೆಲೆ ಘೋಷಿಸಿದೆ. ಇದರಿಂದ ರಾಜ್ಯದ ಒಣ ಮೆಣಸಿನಕಾಯಿ ಪ್ರತಿ ಕ್ವಿಂಟಲ್‌ಗೆ ₹10,600ಗಳಂತೆ ಖರೀದಿ ಮಾಡಲು ಯೋಜನೆ ಪೂರಕವಾಗಿದ್ದರೂ ಸ್ಥಳೀಯವಾಗಿ ಮಾರುಕಟ್ಟೆ ಹಾಗೂ ಅಧಿಕೃತ ಖರೀದಿದಾರರು ಇಲ್ಲದೆ ಕೇಂದ್ರದ ಮಹತ್ವದ ಯೋಜನೆಯ ಲಾಭದಿಂದ ರೈತರು ವಂಚಿತರಾಗಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 1.50 ಲಕ್ಷ ಟನ್ ದಾಸ್ತಾನು ಇದ್ದು ಕ್ವಿಂಟಲ್‌ಗೆ ₹6 ಸಾವಿರಗಳಷ್ಟಿದೆ. ಸದ್ಯದ ಈ ಬೆಲೆಗೆ ಬೆಳೆ ಮಾರಾಟ ಮಾಡಿಕೊಂಡರೆ ಬೆಳೆಗಾರರು ದೊಡ್ಡ ಪ್ರಮಾಣದ ನಷ್ಟಕ್ಕೊಳಗಾಗಲಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿರುವ 40ಕ್ಕೂ ಅಧಿಕ ಕೋಲ್ಡ್ ಸ್ಟೋರೇಜ್‌ನಲ್ಲಿ (ಶೀತಲಗೃಹ) ಇರಿಸಿಕೊಂಡು ಬೆಂಬಲ ಬೆಲೆಗಾಗಿ ಕಾಯುತ್ತಿದ್ದಾರೆ. ಮತ್ತೆ ಕೆಲವರು ಕೃಷಿ ಸಾಲ ತೀರಿಸಲು ಕಡಿಮೆ ಬೆಲೆಗೆ ಬೆಳೆ ಮಾರಿಕೊಂಡು ನಷ್ಟದ ಸುಳಿಯಲ್ಲಿ ಒದ್ದಾಡುತ್ತಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳು ಮಾರುಕಟ್ಟೆ ಸ್ಥಾಪನೆಗೆ ಆಸ್ಥೆ ವಹಿಸದೇ ಹೋದರೆ ಜಿಲ್ಲೆಯ ಬೆಳೆಗಾರರು ಮತ್ತಷ್ಟೂ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಲಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ