ಬಿಡದಿ ಟೌನ್‌ಶಿಪ್‌: ಇನ್ಮುಂದೆ ನನ್ನ, ಎಚ್ಡಿಕೆ ಹೋರಾಟ

KannadaprabhaNewsNetwork |  
Published : May 28, 2026, 01:15 AM IST
27ಕೆಆರ್ ಎಂಎನ್ 17,18.ಜೆಪಿಜಿನಿಖಿಲ್ ಕುಮಾರಸ್ವಾಮಿ ರೈತರ ಅಹವಾಲು ಆಲಿಸುತ್ತಿರುವುದು. | Kannada Prabha

ಸಾರಾಂಶ

ರಾಮನಗರ: ಮಣ್ಣಿನಮಗ ಎಚ್.ಡಿ.ಕುಮಾರಸ್ವಾಮಿ ಅವರ ಮಗನಾಗಿ, ನಾನು ನಿಮಗೆ ಮಾತು ನೀಡುತ್ತಿದ್ದೇನೆ. ಇಂದಿನಿಂದ ಇದು ನಿಮ್ಮ ಹೋರಾಟ ಮಾತ್ರವಲ್ಲ ನನ್ನ ಮತ್ತು ಕುಮಾರಸ್ವಾಮಿರವರ ಹೋರಾಟ. ಸರ್ಕಾರ ತಂದೊಡ್ಡಿರುವ ಸಮಸ್ಯೆಗೆ ತಾರ್ಕಿಕ ಅಂತ್ಯ ಕಾಣಿಸುವುದೇ ನನ್ನ ಗುರಿ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ರೈತರಿಗೆ ಆಶ್ವಾಸನೆ ನೀಡಿದರು

ರಾಮನಗರ: ಮಣ್ಣಿನಮಗ ಎಚ್.ಡಿ.ಕುಮಾರಸ್ವಾಮಿ ಅವರ ಮಗನಾಗಿ, ನಾನು ನಿಮಗೆ ಮಾತು ನೀಡುತ್ತಿದ್ದೇನೆ. ಇಂದಿನಿಂದ ಇದು ನಿಮ್ಮ ಹೋರಾಟ ಮಾತ್ರವಲ್ಲ ನನ್ನ ಮತ್ತು ಕುಮಾರಸ್ವಾಮಿರವರ ಹೋರಾಟ. ಸರ್ಕಾರ ತಂದೊಡ್ಡಿರುವ ಸಮಸ್ಯೆಗೆ ತಾರ್ಕಿಕ ಅಂತ್ಯ ಕಾಣಿಸುವುದೇ ನನ್ನ ಗುರಿ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ರೈತರಿಗೆ ಆಶ್ವಾಸನೆ ನೀಡಿದರು.

ಬಿಡದಿ ಟೌನ್ ಶಿಪ್ ಯೋಜನೆಗೆ ಭೂಮಿ ಸ್ವಾಧೀನ ಪಡಿಸಿಕೊಳ್ಳುವ ಗ್ರಾಮಗಳಿಗೆ ಭೇಟಿ ನೀಡಿ ರಿಯಾಲಿಟಿ ಚೆಕ್ ಡೆಸುವುದಕ್ಕೂ ಮುನ್ನ ಬೈರಮಂಗಲ ವೃತ್ತದಲ್ಲಿ ಧರಣಿ ನಿರತ ರೈತರನ್ನು ಉದ್ದೇಶಿಸಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ರೈತರನ್ನು ವಿಶ್ವಾಸಕ್ಕೆ ಪಡೆಯದೆ ಒಕ್ಕಲೆಬ್ಬಿಸಲು ಹೊಂಚು ಹಾಕುತ್ತಿರುವ ಸರ್ಕಾರದ ವಿರುದ್ಧ ನೀವು ನಡೆಸುತ್ತಿರುವ ಹೋರಾಟದಲ್ಲಿ ನಾನೂ ಭಾಗಿಯಾಗುತ್ತೇನೆ ಎಂದು ಧೈರ್ಯ ತುಂಬಿದರು.

ಅಧಿಕಾರ ನೀವು ನೀಡಿರುವ ಭಿಕ್ಷೆ :

ಮಹಾನ್ ವ್ಯಕ್ತಿಗಳು (ಡಿ.ಕೆ.ಶಿವಕುಮಾರ್) ಕುಳಿತಿರುವ ಕುರ್ಚಿ ನೀವು ನೀಡಿರುವ ಭಿಕ್ಷೆ. ಅದನ್ನು ಮರೆತರೆ ಯಾರೂ ಕೂಡ ರಾಜಕೀಯದಲ್ಲಿ ಮುಂದುವರಿಯಲು ಅಸಾಧ್ಯ. ನಿಮ್ಮ ಜಮೀನು ಕಸಿಯಲು ಬಂದಿರುವವರು ಇದನ್ಮು ಅರ್ಥ ಮಾಡಿಕೊಳ್ಳಬೇಕು. ನಿವು ಏಕಾಂಗಿಯಲ್ಲ ನಿಮ್ಮ ಹಿಂದೆ ಇಡೀ ಕನ್ನಡ ನಾಡಿನ ಏಳು ಕೋಟಿ ಜನ ಇದ್ದಾರೆ. ನೀವು ಯಾವುದೇ ಕಾರಣಕ್ಕೂ ಧೈರ್ಯಗೆಡಬೇಡಿ ಎಂದು ಹೇಳಿದರು.

ಈ ತಿಂಗಳ ಅಂತ್ಯಕ್ಕೆ ಅಂತಿಮ ಅಧಿಸೂಚನೆಗೆ ಸಿದ್ಧತೆ ನಡೆದಿದೆ, ರೈತರು ಯಾವುದೇ ಕಾರಣಕ್ಕೂ ಧೃತಿಗೆಡಬೇಡಿ, ಎಂತಹ ಸನ್ನಿವೇಶ ಬಂದರೂ ನಾನು, ನಮ್ಮ ಕುಟುಂಬ ನಿಮ್ಮ ಜತೆಗೆ ಸದಾ ಕಾಲ ಇರುತ್ತೇವೆ. ರಾಜ್ಯದ ಒಬ್ಬ ಪ್ರಜೆಯಾಗಿ, ಒಬ್ಬ ಕನ್ನಡಿಗನಾಗಿ, ಈ ಜಿಲ್ಲೆಯ ಮತದಾರನಾಗಿ ನಾನು ನಿಮ್ಮೊಡನಿರುತ್ತೇನೆ ಎಂದು ಭರವಸೆ ನೀಡಿದರು.

ಸ್ವಾಭಿಮಾನದ ಹೋರಾಟ :

ಭೂ ಸ್ವಾಧೀನ ವಿರೋಧಿಸಿ 2 ಗ್ರಾಮ ಪಂಚಾಯಿತಿ ವ್ಯಾಪ್ತಿಯ 26 ಗ್ರಾಮಗಳ ಜನರು ಕಳೆದ 436 ದಿನಗಳಿಂದ ಹೋರಾಟ ಮಾಡುತ್ತಿದ್ದೀರಿ. ಇದು ಕೇವಲ ಭೂಮಿ ಉಳಿಸಿಕೊಳ್ಳುವ ಹೋರಾಟ ಮಾತ್ರವಲ್ಲ. ಇದು ರೈತರ ಸ್ವಾಭಿಮಾನದ ಹೋರಾಟ. ರಾಜ್ಯ ಸರ್ಕಾರ ನಿಮ್ಮ ಮೇಲೆ ಮಾಡುತ್ತಿರುವ ದಬ್ಬಾಳಿಕೆ ಹಾಗೂ ಸರ್ಕಾರದ ವಿರುದ್ಧ ರೈತರು ಮಾಡುತ್ತಿರುವ ಹೋರಾಟಕ್ಕೆ ಬೆಂಬಲ ನೀಡುವ ಜತೆಗೆ ದಪ್ಪ ಚರ್ಮದ ಸರ್ಕಾರವನ್ನು ಎಚ್ಚರಿಸಲು ನಾನಿಲ್ಲಿಗೆ ಬಂದಿದ್ದೇನೆ ಎಂದರು.

ಈ ಯೋಜನೆ ಕುಮಾರಸ್ವಾಮಿ ಅವರ ಕನಸಿನ ಕೂಸು ಎಂದು ಬಿಂಬಿಸಿ, ಅದನ್ನು ಅವರ ತಲೆಗೆ ಕಟ್ಟಲು ಈ ಯೋಜನೆಯನ್ನು ಜಾರಿಗೆ ಮುಂದಾಗಿರುವ ಜನಪ್ರತಿನಿಧಿಗಳು ಹೇಳುತ್ತಿದ್ದಾರೆ. 2006ರಲ್ಲಿ ಯೋಜನೆ ಮುಂದಾಗಿದ್ದು ನಿಜ. ಆದರೆ, ರೈತರ ಭಾವನೆಗಳಿಗೆ ಬೆಲೆ ನೀಡಿ ಯೋಜನೆಯನ್ನು ಕೈಬಿಡಲಾಗಿತ್ತು.

ಒಂದು ವೇಳೆ ಈ ಯೋಜನೆ ಮುಂದುವರಿಸಬೇಕು ಎಂಬ ದುರುದ್ದೇಶ ಕುಮಾರಸ್ವಾಮಿ ಅವರಿಗಿದ್ದಿದ್ದರೆ 2018ರಲ್ಲಿ ಎರಡನೇ ಬಾರಿಗೆ ಸಿಎಂ ಆಗಿದ್ದಾಗ ಆ ಯೋಜನೆಯನ್ನು ಮುಂದುವರಿಸುತ್ತಿದ್ದರು. ನಮ್ಮ ಕುಟುಂಬ ಮತ್ತು ಪಕ್ಷವಾಗಲೀ ಎಂದೆಂದಿಗೂ ರೈತಪರವಾಗಿಯೇ ರಾಜಕೀಯ ಮಾಡಿದ್ದೇವೆ. ರೈತರಿಗಾಗಿಯೇ ಇರುವ ಏಕೈಕ ಪಕ್ಷ ನಮ್ಮ ಜೆಡಿಎಸ್. ಹಾಗಾಗಿ ನಮ್ಮ ಪಕ್ಷದ ವಿರುದ್ಧದ ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿದರು.

ಶೋ ಕೊಡಲು ಬಂದಿಲ್ಲ :

ನಾನು ಶೋ ಕೊಟ್ಟು ಹೋಗಲು ಇಲ್ಲಿಗೆ ಬಂದಿಲ್ಲ. ಸರ್ಕಾರಕ್ಕೆ ಯೋಜನೆಯನ್ನು ಹಿಂಪಡೆಯುವ ಮನಸ್ಥಿತಿ ಇಲ್ಲ. ಇದು ನಿಮಗೂ ತಿಳಿದಿರುವ ವಿಚಾರ. ಆದರೆ, ನಾವು ಈ ನೆಲದ ಕಾನೂನಿನ ಪ್ರಕಾರವೇ ಹೋರಾಟ ಮಾಡೋಣ. ಯಾರೂ ಧೈರ್ಯಗೆಡುವುದು ಬೇಡ.

ಯಾವುದೇ ಜನಪ್ರತಿನಿಧಿಗಳಾಗಲೀ, ಸರ್ಕಾರಿ ಅಧಿಕಾರಿಗಳಾಗಲೀ ನಮ್ಮ ಗ್ರಾಮಕ್ಕೆ ಆಗಮಿಸಿ ನೀವು ಯೋಜನೆಗೆ ಜಮೀನು ನೀಡಲು ಸಿದ್ಧರಿದ್ದೀರಾ ಎಂಬುದಾಗಿ ಕೇಳಿಲ್ಲ. ಪ್ರತಿಭಟನೆ ಮಾಡುತ್ತಿರುವವರು ರೈತರೇ ಅಲ್ಲ, ಇಲ್ಲಿ ಯಾರೂ ವ್ಯವಸಾಯವನ್ನೇ ಮಾಡುತ್ತಿಲ್ಲ ಎಂಬುದಾಗಿ ಸುಳ್ಳನ್ನು ಹರಡುವ ಕೆಲಸ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ರೈತರನ್ನು ಒಕ್ಕಲೆಬ್ಬಿಸಲು ಬಿಡಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.

ಈ ಸಂದರ್ಭದಲ್ಲಿ ಮಾಜಿ‌ ಶಾಸಕ‌ ಎ.ಮಂಜುನಾಥ್, ಜೆಡಿಎಸ್ ಜಿಲ್ಲಾಧ್ಯಕ್ಷ ಜಯಮುತ್ತು,‌ ರಾಮನಗರ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಸಬ್ಬಕೆರೆ ಶಿವಲಿಂಗಪ್ಪ, ಚನ್ನಪಟ್ಟಣ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಗೋವಿಂದಳ್ಳಿ ನಾಗರಾಜು, ಬಿಡದಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ದೇವರಾಜು, ಸದಸ್ಯರಾದ ರಾಕೇಶ್, ಹರಿಪ್ರಸಾದ್, ಮುಖಂಡರಾದ ಡಾ.ಭರತ್ ಕೆಂಪಣ್ಣ, ನರಸಿಂಹಯ್ಯ, ಲಕ್ಷ್ಮೀಕಾಂತ್, ಬಿ.ಉಮೇಶ್, ಬೋರೇಗೌಡ, ಗೌಡಯ್ಯನದೊಡ್ಡಿ ಕೃಷ್ಣೇಗೌಡ, ಬೈರಮಂಗಳ ಕಂಚುಗಾರನಹಳ್ಳಿ ಭೂ ಹಿತರಕ್ಷಣಾ ಸಂಘದ ಅಧ್ಯಕ್ಷ ರಾಮಣ್ಣ, ಖಜಾಂಚಿ ನಾಗರಾಜು, ರೈತ ಮುಖಂಡರಾದ‌ ಶ್ರೀನಿವಾಸ ರೆಡ್ಡಿ, ರಾಧಾಕೃಷ್ಣ, ಅಶ್ವತ್ಥ್, ಕೃಷ್ಣ, ಜಯಮ್ಮ, ಸುಮಿತ್ರ, ಭಾಗ್ಯ ನಾಗರಾಜ್, ಮಂಜುನಾಥ್, ಹೇಮಂತ್, ಜ್ಯೋತಿ, ಚೈತ್ರಾ, ರಾಮಚಂದ್ರ, ಗಿರೀಶ ಮತ್ತಿತರರು ಇದ್ದರು.

--------------------------

...ಕೋಟ್ ...

ಯಾವುದೇ ರಾಜಕಾರಣಿ ಉನ್ನತ ಸ್ಥಾನ ಗಳಿಸಲು ಸಂಪೂರ್ಣ ಬೆಂಬಲ ನೀಡುವುದು ರಾಮನಗರ ಜಿಲ್ಲೆ ಮಾತ್ರ. ನಮ್ಮ ತಂದೆ ಕುಮಾರಸ್ವಾಮಿ ಅವರು ಕಡೆಯ ಉಸಿರಿರುವ ತನಕವೂ ನೆನಪಿಸಿಕೊಳ್ಳುತ್ತಾರೆ. ಇದನ್ನು ನಾನು ಕೇವಲ ರಾಜಕೀಯಕ್ಕೆ ಹೇಳುತ್ತಿಲ್ಲ. ನಮ್ಮ ಕುಟುಂಬದ ಮನದಾಳದ ಮಾತು. ನನಗಾಗಲೀ, ನನ್ನ ಕುಟುಂಬಕ್ಕಾಗಲೀ, ನಮ್ಮ ಪಕ್ಷಕ್ಕಾಗಲೀ ರಾಜಕೀಯ ಲಾಭ ಪಡೆಯುವ ದುರುದ್ದೇಶದಿಂದ ನಾನು ಇಲ್ಲಿಗೆ ಬಂದಿಲ್ಲ.

- ನಿಖಿಲ್ ಕುಮಾರಸ್ವಾಮಿ, ರಾಜ್ಯಾಧ್ಯಕ್ಷರು, ಜೆಡಿಎಸ್ ಯುವ ಘಟಕ.

----------------------------

...ಬಾಕ್ಸ್ ...

ಡಿಕೆಶಿ ರೈತರ ಮರಣ ಶಾಸನ ಬರೆಯಲು ಹೊರಟಿದ್ದಾರೆ - ನಿಖಿಲ್ ಟೀಕೆ

ರಾಮನಗರ : ನಾನೂ ಈ ಜಿಲ್ಲೆಯ ಮಗ. ನನಗೂ ಒಂದು ಅವಕಾಶ ನೀಡಿ ಎಂದು ನೀಡಿ ಎಂದು ಗೋಗರೆದು ಜನರಿಂದ ಪೆನ್ನು ಪೇಪರ್ ಪಡೆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಮ್ಮ ರೈತರ ಮರಣ ಶಾಸನ ಬರೆಯಲು ಹೊರಟಿರುವುದು ಎಷ್ಟು ಸರಿ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರಶ್ನಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ಎರಡೇಟು ಹೊಡೆದರೂ ಯೋಜನೆ ಮಾಡಿಯೇ ತೀರುತ್ತೇವೆ ಎಂದು ಹೇಳುತ್ತಾರೆ. ರೈತರ ಕೈಯಲ್ಲಿ ಹೊಡೆಸಿಕೊಳ್ಳುವುದಿರಲಿ, ರೈತರು ಪ್ರತಿಭಟನೆಗೆ ಕುಳಿತು 435 ದಿನ ಆಯಿತು. ಒಂದು ದಿನವಾದರೂ ಸ್ಥಳಕ್ಕೆ ಬಂದು ಅವರ ಅಹವಾಲು ಏಕೆ ಕೇಳಲಿಲ್ಲ ಎಂದು ಹರಿಹಾಯ್ದರು.

ನಾವು ನಿಮ್ಮನ್ನ ಉದ್ಧಾರ ಮಾಡುತ್ತೇವೆ ಎಂದು ಸುಳ್ಳು ಹೇಳಿ, ಟೋಕನ್‌ಗಳನ್ನು ಕೊಟ್ಟು ಮತ ಪಡೆದು ಗೆದ್ದ ಸ್ಥಳೀಯ ಶಾಸಕರು ಯಾಕೆ ಬಂದು ರೈತರ ಸಮಸೆಯ ಆಲಿಸಿಲ್ಲ ಎಂದು ಪ್ರಶ್ನಿಸಿದರು. ನಾವು ಈ ಜಿಲ್ಲೆಯಲ್ಲಿ ಹುಟ್ಟದೇ ಇರಬಹುದು. ಆದರೆ, ಇದೀಗ ನಾವು ಈ ಜಿಲ್ಲೆಯವರೇ ಆಗಿದ್ದೇವೆ. ಈ ಮಣ್ಣಿನಲ್ಲಿ ನಮ್ಮ ಭಾವನೆ ಅಡಗಿದೆ ಎಂದು ನಿಖಿಲ್ ಕುಮಾರಸ್ವಾಮಿ ಭಾವುಕರಾದರು.

ಯಾರೇ ಸಿಎಂ ಆದರೂ ದುರಾಡಳಿತ ತಪ್ಪಿದಲ್ಲ :

ಯಾರೇ ಸಿಎಂ ಆದರೂ ಕಾಂಗ್ರೆಸ್ ಪಕ್ಷದವರೇ ಆಗುತ್ತಾರೆ ಎಂದು ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ನಿಖಿಲ್ ಕುಮಾರಸ್ವಾಮಿ, ಕಾಂಗ್ರೆಸ್‌ನವರಿಗೆ 136 ಶಾಸಕರ ಬೆಂಬಲ ಇದ್ದು, ಮೆಜಾರಿಟಿ ಇದೆ. ಯಾರು ಸಿಎಂ, ಯಾರು ಡಿಸಿಎಂ, ಯಾರು ಮಂತ್ರಿಗಳಾಗುತ್ತಾರೆ ಅನ್ನುವುದು ಮುಖ್ಯ ಅಲ್ಲ. ಯಾರೇ ಸಿಎಂ ಆದರೂ, ದುರಾಡಳಿತ, ಭ್ರಷ್ಟಾಚಾರ, ಲೂಟಿ, ರೈತರ ಬವಣೆ ತಪ್ಪುವುದಿಲ್ಲ ಎಂದು ಕಿಡಿ ಕಾರಿದರು.

27ಕೆಆರ್ ಎಂಎನ್ 17,18.ಜೆಪಿಜಿ

ನಿಖಿಲ್ ಕುಮಾರಸ್ವಾಮಿ ರೈತರ ಅಹವಾಲು ಆಲಿಸುತ್ತಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಲೆ ಶಿಥಿಲ ಕೊಠಡಿಗಳ ಸಮಗ್ರ ಮಾಹಿತಿ ನೀಡಿ: ಬಿಇಒ
ಸ್ವಾಯತ್ತ ಸಂಸ್ಕೃತಿಯ ದಿಕ್ಕು ತಪ್ಪಿಸುವವರ ಬಗ್ಗೆ ಎಚ್ಚರವಿರಲಿ: ಪ್ರೊ.ಎಸ್. ನಟರಾಜ ಬೂದಾಳು