ಜ.29ರಿಂದ 9 ದಿನ ಏಳನೇ ಸಾಂಸ್ಕೃತಿಕ ಪರಿಚಯ ಸಮಾರಂಭ । ದೇಶದಲ್ಲೇ ಮೊದಲ ಬಾರಿ
ಕಾಗಿಣಾ ನದಿ ತಟದ ಸೇಡಂ ಸಮೀಪದ ಬೀರನಹಳ್ಳಿ ಕ್ರಾಸ್‌ನಲ್ಲಿ ಜ.29ರಿಂದ ಪ್ರಾರಂಭವಾಗಿ 9 ದಿನಗಳ ಕಾಲ ನಡೆಯುವ ಏಳನೆಯ ಭಾರತೀಯ ಸಂಸ್ಕೃತಿ ಉತ್ಸವ ಖಾಸಗಿ ರಂಗದ ಅತಿ ದೊಡ್ಡ ಉತ್ಸವವಾಗಿದೆ. ಇದು ಭಾರತೀಯ ಸಂಸ್ಕೃತಿಯ ಮಹೋತ್ಸವವಾಗಿ ಇತಿಹಾಸದ ಪುಟಗಳಲ್ಲಿ ದಾಖಲೆಯಾಗಲಿದೆ ಎಂದು ಉತ್ಸವದ ಪ್ರಧಾನ ಸಂಯೋಜಕ ಬಸವರಾಜ ಪಾಟೀಲ್ ಸೇಡಂ ಹೇಳಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ವಿಶೇಷ ಸಿದ್ಧತಾ ಸಭೆಯಲ್ಲಿ ಮಾತನಾಡಿ, ಸರ್ಕಾರದ ಸಹಾಯವಿಲ್ಲದೆ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ನಡೆಯುವ ಈ ರೀತಿಯ ಉತ್ಸವ ಇತಿಹಾಸದ ಪುಟಗಳಲ್ಲಿ ದಾಖಲೆಯಾಗುವಂತದ್ದು. ಆಮಂತ್ರಣ ಪತ್ರಿಕೆಯನ್ನು ನೋಡಿದ ಎಲ್ಲರೂ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ. ಶರಣರ ನೆಲ, ನವಾಝರ ಪುಣ್ಯಭೂಮಿ ಹಾಗೂ ಬುದ್ಧ ವಿಹಾರದ ಪವಿತ್ರ ತಾಣದ ಕಲಬುರಗಿ ಜಿಲ್ಲೆಯ ಹಾಗೂ ಕಲ್ಯಾಣ ನಾಡಿನ ಜನರ ನಡೆ ನುಡಿ ಪಸರಿಸಲು ಮತ್ತು ಇಲ್ಲಿನ ಜನತೆಯ ಉತ್ಕೃಷ್ಟತೆ ಕಾಪಾಡಿ, ಆನಂದವನ್ನು ಎಲ್ಲರಿಗೂ ಹಂಚುವ ಸುವರ್ಣ ಅವಕಾಶ ಈ ಉತ್ಸವದಲ್ಲಿ ಎಲ್ಲರಿಗೂ ಲಭಿಸಲಿದೆ ಎಂದು ಹೇಳಿದರು.ಭಾರತೀಯ ಸಂಸ್ಕೃತಿಯು ಅನಾವರಣಗೊಳ್ಳುವ ಪ್ರಕೃತಿ ನಗರದಲ್ಲಿ ನಡೆಯುವ ಉತ್ಸವವು ಕುಂಭಮೇಳದಂತೆ ದೇಶ ವಿದೇಶದ ಜನತೆಯ ಪಾಲ್ಗೊಳ್ಳುವಿಕೆಯಿಂದ ಅದ್ಭುತ ದಾಖಲೆಯಾಗಲಿದೆ. ಈ ಮೂಲಕ ದೇಶದ 100 ಕೋಟಿ ಜನರಿಗೆ ದೊಡ್ಡ ಸಂದೇಶ ತಲುಪುವುದು ನಿಶ್ಚಿತ. ಪ್ರತಿಯೊಬ್ಬರೂ ಕನಿಷ್ಠ ಒಂದು ದಿನವಾದರೂ ಉತ್ಸವದಲ್ಲಿ ಪಾಲ್ಗೊಳ್ಳಬೇಕು. ಉದ್ಘಾಟನೆಗೆ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆಗಮಿಸುತ್ತಿದ್ದು ಮಾನವೀಯ ಮೌಲ್ಯಗಳನ್ನು ಬಿತ್ತರಿಸಿದ ನಾನಾ ಪಾಟೇಕರ್, ಸಚಿನ್ ತೆಂಡೂಲ್ಕರ್, ರಮೇಶ್ ಅರವಿಂದ ಜೀವನ ಮೌಲ್ಯದ ಸಂದೇಶವನ್ನು ಸಾರಲಿದ್ದಾರೆ ಎಂದು ಹೇಳಿದರು.
ಉತ್ಸವಕ್ಕೆ ಮುನ್ನುಡಿ ಶೋಭಾ ಯಾತ್ರೆ
ಎರಡು ರಥಗಳ ಸಂಗಮ:
ಮೆರವಣಿಗೆಯುದ್ದಕ್ಕೂ ಕನಿಷ್ಠ ಮೂರರಿಂದ ನಾಲ್ಕು ಲಕ್ಷ ಜನ ಜಮಾಯಿಸುವ ನಿರೀಕ್ಷೆ ಇದೆ. ಮೆರವಣಿಗೆಯ ಮೇಲೆ ಪುಷ್ಪ ವೃಷ್ಟಿ ಹಾಕಬೇಕಲ್ಲದೆ ಸಣ್ಣ ಮಕ್ಕಳಿಗೆ ಗೋಪಿ, ರಾಮ - ಕೃಷ್ಣರ ವೇಷವನ್ನು ಹಾಕಿ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಸಂಭ್ರಮಿಸಲು ಸಂಘಟಕರು ವ್ಯವಸ್ಥೆ ಕಲ್ಪಿಸಿದ್ದಾರೆ
ಉತ್ಸವಕ್ಕೆ ವಿಶೇಷವಾಗಿ ಕಲಬುರಗಿ ಬಸ್ ನಿಲ್ದಾಣ, ಹಿಂದಿ ಪ್ರಚಾರ ಸಭೆ ಹಾಗೂ ಖರ್ಗೆ ಪೆಟ್ರೋಲ್ ಪಂಪು ಬಳಿಯಿಂದ ಬಸ್‌ಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಮಹಿಳೆಯರಿಗೆ ಮಾತ್ರ ಉಚಿತ ಪ್ರಯಾಣದ ಸೌಲಭ್ಯ ಸಿಗಲಿದೆ.
ಉತ್ಸವದಲ್ಲಿ ಮಕ್ಕಳಿಗೆ ಖುಷಿ ಪಡಿಸಲು ಮಕ್ಕಳ ಲೋಕದಲ್ಲಿ ಉಚಿತವಾಗಿ ಪಪ್ಪಾಯಿ ಹಾಗೂ ಐಸ್ ಕ್ರೀಮ್ ವಿತರಿಸಲು ಸಿದ್ಧತೆ ನಡೆದಿದೆ. ನಂದಿಕೂರಲ್ಲಿ ಆರಂಭಗೊಳ್ಳುವ ಐಸ್ ಕ್ರೀಮ್ ಫ್ಯಾಕ್ಟರಿ ಉದ್ಯಮಿಯೊಬ್ಬರು ಐಸ್ ಕ್ರೀಮ್ ವಿತರಿಸುವರು.