ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ಡ್ರಗ್ಸ್ ಜಾಲವೊಂದನ್ನು ಭೇದಿಸಿರುವ ಮಂಗಳೂರು ಸಿಸಿಬಿ ಪೊಲೀಸರು

KannadaprabhaNewsNetwork |  
Published : Mar 17, 2025, 12:31 AM ISTUpdated : Mar 17, 2025, 07:01 AM IST
ವಶಪಡಿಸಿಕೊಂಡ ಸೊತ್ತಿನೊಂದಿಗೆ ಪೊಲೀಸ್‌ ತಂಡ | Kannada Prabha

ಸಾರಾಂಶ

ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ಡ್ರಗ್ಸ್ ಜಾಲವೊಂದನ್ನು ಭೇದಿಸಿರುವ ಮಂಗಳೂರು ಸಿಸಿಬಿ ಪೊಲೀಸರು, ಬರೋಬ್ಬರಿ 75 ಕೋಟಿ ರು. ಮೌಲ್ಯದ 37.87 ಕೆ.ಜಿ. ಮಾದಕ ವಸ್ತು (ಎಂಡಿಎಂಎ) ವಶಪಡಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ದಕ್ಷಿಣ ಆಫ್ರಿಕಾ ಮೂಲದ ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ.

 ಮಂಗಳೂರು : ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ಡ್ರಗ್ಸ್ ಜಾಲವೊಂದನ್ನು ಭೇದಿಸಿರುವ ಮಂಗಳೂರು ಸಿಸಿಬಿ ಪೊಲೀಸರು, ಬರೋಬ್ಬರಿ 75 ಕೋಟಿ ರು. ಮೌಲ್ಯದ 37.87 ಕೆ.ಜಿ. ಮಾದಕ ವಸ್ತು (ಎಂಡಿಎಂಎ) ವಶಪಡಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ದಕ್ಷಿಣ ಆಫ್ರಿಕಾ ಮೂಲದ ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ.

ದಕ್ಷಿಣ ಆಫ್ರಿಕಾದ ಬಾಂಬಾ ಫಾಂಟಾ (31) ಹಾಗೂ ಅಬಿಗೇಲ್ ಅಡೊನಿಸ್‌ (ಮೂಲ ಹೆಸರು ಒಲಿಜೊ ಇವಾನ್ಸ್‌- 30) ಬಂಧಿತ ಆರೋಪಿಗಳು. ಈ ಇಬ್ಬರು ಮಹಿಳೆಯರನ್ನು ಬಳಸಿಕೊಂಡು ದೇಶಾದ್ಯಂತ ವಿಮಾನದ ಮೂಲಕ ಮಾದಕ ವಸ್ತು ಎಂಡಿಎಂಎಯನ್ನು ಮಾರಾಟ ಮಾಡಲಾಗುತ್ತಿತ್ತು. ಮಹಿಳೆಯರನ್ನು ಬಳಸಿಕೊಂಡು ಇಷ್ಟು ಬೃಹತ್‌ ಪ್ರಮಾಣದ ಡ್ರಗ್ಸ್‌ ದಂಧೆಯನ್ನು ಬಯಲಿಗೆಳೆದಿರುವುದು ಕೂಡ ಇದೇ ಮೊದಲು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್‌ ಅಗ್ರವಾಲ್‌, ಈ ಬಗ್ಗೆ ಮಾಹಿತಿ ನೀಡಿದರು. ವಿಮಾನದ ಮೂಲಕ ಭಾರೀ ಪ್ರಮಾಣದ ಮಾದಕ ವಸ್ತು ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆಗೆ ಇಳಿದ ಮಂಗಳೂರು ಪೊಲೀಸರು, ಮಾರ್ಚ್‌ 14ರಂದು ದೆಹಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದಿಳಿದ ಆರೋಪಿಗಳನ್ನು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಹತ್ತಿರದ ನೀಲಾದ್ರಿ ನಗರ ಎಂಬಲ್ಲಿ ಡ್ರಗ್ಸ್‌ ಸಮೇತ ಬಂಧಿಸಿದ್ದಾರೆ. ಆರೋಪಿಗಳು ಎರಡು ಟ್ರಾಲಿ ಟ್ರಾವೆಲ್ ಬ್ಯಾಗ್‌ನಲ್ಲಿ ಸಾಗಾಟ ಮಾಡುತ್ತಿದ್ದ 75 ಕೋಟಿ ಮೌಲ್ಯದ 37.870 ಕೆಜಿ ಎಂಡಿಎಂಎ, 4 ಮೊಬೈಲ್ ಫೋನ್‌, 2 ಪಾಸ್ ಪೋರ್ಟ್‌, 18,460 ರು.ನಗದು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಆರು ತಿಂಗಳ ಸುದೀರ್ಘ ಬೇಟೆ:

ಕಳೆದ ವರ್ಷ ಮಂಗಳೂರಿನ ಪಂಪ್‌ವೆಲ್ ಬಳಿಯ ಲಾಡ್ಜ್‌ವೊಂದರಲ್ಲಿ ಮಾದಕ ವಸ್ತುವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಹೈದರ್ ಅಲಿಯಾಸ್‌ ಹೈದ‌ರ್ ಆಲಿ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಆತನಿಂದ 15 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿತ್ತು. ಈ ಪ್ರಕರಣದ ಪ್ರಮುಖ ಡ್ರಗ್ಸ್‌ ಪೆಡ್ಲರ್‌ಗಳನ್ನು ಪತ್ತೆ ಹಚ್ಚುವ ಸಲುವಾಗಿ ಮಂಗಳೂರು ಸಿಸಿಬಿ ಘಟಕಕ್ಕೆ ಪ್ರಕರಣವನ್ನು ವರ್ಗಾಯಿಸಲಾಗಿತ್ತು. ತನಿಖೆ ಕೈಗೊಂಡ ಸಿಸಿಬಿ ಪೊಲೀಸರು, ಹೈದರ್ ಆಲಿ ಮತ್ತು ಇತರರಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ಪ್ರಮುಖ ಡ್ರಗ್ ಪೆಡ್ಲರ್‌, ಬೆಂಗಳೂರಿನಲ್ಲಿ ವಾಸ್ತವ್ಯವಿದ್ದ ನೈಜೀರಿಯಾ ದೇಶದ ಪ್ರಜೆ ಪೀಟರ್‌ ಇಕೆಡಿ ಬೆಲೊನ್ವು ಎಂಬಾತನನ್ನು ದಸ್ತಗಿರಿ ಮಾಡಿ, 6.248 ಕೆ.ಜಿ. ಎಂಡಿಎಂಎ ವಶಪಡಿಸಿಕೊಂಡಿದ್ದರು.

ಈ ಪೀಟರ್‌ ಇಕೆಡಿಗೆ ಮಾದಕ ವಸ್ತು ಪೂರೈಕೆ ಮಾಡುವ ಕಿಂಗ್‌ಪಿನ್ ಡ್ರಗ್ಸ್ ಪೆಡ್ಲರ್‌ಗಳ ಪತ್ತೆಗಾಗಿ ಪೊಲೀಸರ ತಂಡ ಕಳೆದ 6 ತಿಂಗಳಿನಿಂದ ನಿರಂತರ ಹುಡುಕಾಟ ನಡೆಸಿತ್ತು. ದೆಹಲಿಯಿಂದ ಬೆಂಗಳೂರು ಹಾಗೂ ದೇಶದ ಇತರೆಡೆಗಳಿಗೆ ಬೃಹತ್ ಪ್ರಮಾಣದ ಡ್ರಗ್ಸ್‌ನ್ನು ವಿಮಾನದ ಮೂಲಕ ವಿದೇಶಿ ಮಹಿಳಾ ಪ್ರಜೆಗಳು ಸಾಗಾಟ ಮಾಡುವ ಮಾಹಿತಿ ದೊರೆಯಿತು. ಅದರಂತೆ ಕಾರ್ಯಾಚರಣೆಗೆ ಇಳಿದ ಪೊಲೀಸ್‌ ತಂಡ ದಕ್ಷಿಣ ಆಫ್ರಿಕಾದ ಇಬ್ಬರು ಮಹಿಳೆಯರನ್ನು ಬಂಧಿಸಿದೆ ಎಂದು ಪೊಲೀಸ್‌ ಕಮಿಷನರ್‌ ಮಾಹಿತಿ ನೀಡಿದರು.

ಇದು ಅಂತಾರಾಜ್ಯ ಹಾಗೂ ಅತಿ ದೊಡ್ಡ ಪ್ರಕರಣ ಆಗಿರುವುದರಿಂದ ನಾರ್ಕೋಟಿಕ್‌ ಕಂಟ್ರೋಲ್‌ ಬ್ಯೂರೊ (ಎನ್‌ಸಿಬಿ)ಗೆ ಮಾಹಿತಿ ನೀಡಲಾಗುವುದು ಎಂದು ಅನುಪಮ್‌ ಅಗ್ರವಾಲ್‌ ತಿಳಿಸಿದರು.ನಕಲಿ ಪಾಸ್‌ಪೋರ್ಟ್‌, ವೀಸಾ:

ಆರೋಪಿಗಳ ಪೈಕಿ ಬಾಂಬಾ ಫಾಂಟಾ ಎಂಬಾಕೆ 2020ರಿಂದ ಭಾರತದಲ್ಲಿ ವಾಸವಾಗಿದ್ದರೆ, ಒಲಿಜೊ ಇವಾನ್ಸ್‌ ಎಂಬಾಕೆ 2016ರಿಂದ ದೇಶದಲ್ಲಿ ನೆಲೆಸಿದ್ದಾಳೆ. ಇಬ್ಬರೂ ನಕಲಿ ಪಾಸ್‌ಪೋರ್ಟ್‌, ನಕಲಿ ವೀಸಾ ಇಟ್ಟುಕೊಂಡಿರುವುದು ಗೊತ್ತಾಗಿದೆ. ಇವರಿಬ್ಬರೂ ನೈಜೀರಿಯನ್ ಪ್ರಜೆಗಳು ಹಾಗೂ ಇತರರಿಗೆ ಬೃಹತ್ ಪ್ರಮಾಣದಲ್ಲಿ ಡ್ರಗ್ಸ್‌ ಮಾರಾಟ ಮಾಡಿಕೊಂಡು ಐಷಾರಾಮಿ ಜೀವನ ಸಾಗಿಸುತ್ತಿದ್ದರು.

ಏರ್‌ಪೋರ್ಟ್‌ ಭದ್ರತಾ ವೈಫಲ್ಯ?:

ಆರೋಪಿ ಮಹಿಳೆಯರಿಬ್ಬರು ದೆಹಲಿಯಿಂದ ಇತರೆಡೆಗಳಿಗೆ ಡ್ರಗ್ಸ್‌ ಸಾಗಿಸಲು ಪ್ರತಿ ಬಾರಿಯೂ ವಿಮಾನದಲ್ಲೇ ತೆರಳುತ್ತಿರುವುದು ತನಿಖೆಯಿಂದ ಗೊತ್ತಾಗಿದೆ. ಇವರು ದೆಹಲಿಯಿಂದ ಬೆಂಗಳೂರಿಗೆ 52 ಬಾರಿ ಪ್ರಯಾಣ ಬೆಳೆಸಿರುವುದು ಪತ್ತೆಯಾಗಿದೆ. ಹತ್ತಾರು ಬಾರಿ ದೆಹಲಿ ಏರ್‌ಪೋರ್ಟ್‌ನಿಂದ ಇತರ ಏರ್‌ಪೋರ್ಟ್‌ಗೆ ಡ್ರಗ್ಸ್‌ ಹೊತ್ತುಕೊಂಡು ಹೋಗುತ್ತಿದ್ದರೂ ಸಿಕ್ಕಿಬೀಳದಿರುವ ಕುರಿತು ಸಂಶಯಗಳೆದ್ದಿದೆ. ಏರ್‌ಪೋರ್ಟ್‌ ಭದ್ರತಾ ವ್ಯವಸ್ಥೆಯ ಮೇಲೂ ಅನುಮಾನಪಡುವಂತೆ ಮಾಡಿದೆ.

- ಮಂಗಳೂರು ಪೊಲೀಸರಿಂದ ₹75 ಕೋಟಿ ಮಾಲು ವಶ । ದಕ್ಷಿಣ ಆಫ್ರಿಕಾ ಮಹಿಳೆಯರಿಬ್ಬರ ಬಂಧನ- ಬೆಂಗಳೂರಲ್ಲಿ ಆಪರೇಷನ್‌ । 15 ಗ್ರಾಂ ಎಂಡಿಎಂಎ ಕೇಸ್‌ ಬೆನ್ನತ್ತಿ ಹೋದಾಗ ದೊಡ್ಡ ಜಾಲ ಬಯಲು

 ದಿಲ್ಲಿಯಿಂದ ಬೆಂಗಳೂರಿಗೆ 52 ಸಲ ವಿಮಾನಯಾನ: ಆದ್ರೂ ಸಿಕ್ಕಿರಲಿಲ್ಲ ಸ್ಮಗ್ಲರ್ಸ್‌!

ಆರೋಪಿ ಮಹಿಳೆಯರಿಬ್ಬರು ದೆಹಲಿಯಿಂದ ಇತರೆಡೆಗಳಿಗೆ ಡ್ರಗ್ಸ್‌ ಸಾಗಿಸಲು ಪ್ರತಿ ಬಾರಿಯೂ ವಿಮಾನದಲ್ಲೇ ತೆರಳುತ್ತಿರುವುದು ತನಿಖೆಯಿಂದ ಗೊತ್ತಾಗಿದೆ. ಇವರು ದೆಹಲಿಯಿಂದ ಬೆಂಗಳೂರಿಗೆ 52 ಬಾರಿ ಪ್ರಯಾಣ ಬೆಳೆಸಿರುವುದು ಪತ್ತೆಯಾಗಿದೆ. ಹತ್ತಾರು ಬಾರಿ ದೆಹಲಿ ಏರ್‌ಪೋರ್ಟ್‌ನಿಂದ ಇತರ ಏರ್‌ಪೋರ್ಟ್‌ಗೆ ಡ್ರಗ್ಸ್‌ ಹೊತ್ತುಕೊಂಡು ಹೋಗುತ್ತಿದ್ದರೂ ಸಿಕ್ಕಿಬೀಳದಿರುವ ಕುರಿತು ಸಂಶಯಗಳೆದ್ದಿದೆ.

ಡ್ರಗ್ಸ್‌ ಜಾಲದ ಬೇರು ಕಿತ್ತೊಗೆಯುತ್ತೇವೆ

ರಾಜ್ಯದ ಇತಿಹಾಸದಲ್ಲೇ ಅತಿದೊಡ್ಡ ಪ್ರಮಾಣದ ಡ್ರಗ್ಸ್‌ ಪತ್ತೆ ಹಚ್ಚಿದ ಮಂಗಳೂರು ನಗರ ಪೊಲೀಸರ ಕಾರ್ಯಾಚರಣೆ ಶ್ಲಾಘನೀಯ. ಸಾವಿರಾರು ಯುವ ಜನರ ಬದುಕಿಗೆ ಎದುರಾಗಲಿದ್ದ ಬಹುದೊಡ್ಡ ಅಪಾಯವೊಂದನ್ನು ನಮ್ಮ ಪೊಲೀಸರು ನಿವಾರಿಸಿದ್ದಾರೆ. ರಾಜ್ಯಾದ್ಯಂತ ಹಬ್ಬಿರುವ ಡ್ರಗ್ಸ್ ಜಾಲವನ್ನು ಬೇರುಸಹಿತ ಕಿತ್ತೊಗೆಯುವುದು ನಮ್ಮ ಸರ್ಕಾರದ ಗುರಿ.- ಸಿದ್ದರಾಮಯ್ಯ, ಮುಖ್ಯಮಂತ್ರಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು