ಶಿರಸಿ: ಹೆದ್ದಾರಿ ಬದಿ ನಿಲ್ಲಿಸಿದ್ದ ಲಾರಿಗೆ ಹಿಂಬದಿಯಿಂದ ಬೈಕ್ ಡಿಕ್ಕಿಯಾದ ಪರಿಣಾಮ ವಿದ್ಯಾರ್ಥಿಯೊಬ್ಬರು ಸ್ಥಳದಲ್ಲಿಯೇ ದಾರುಣವಾಗಿ ಮೃತಪಟ್ಟ ಘಟನೆ ಶಿರಸಿ- ಕುಮಟಾ ರಾಷ್ಟ್ರೀಯ ಹೆದ್ದಾರಿಯ ಕೆರೆಹನುಮಂತಿ ಬಳಿ ಸೋಮವಾರ ಬೆಳಗ್ಗೆ ನಡೆದಿದೆ.ತಾಲೂಕಿನ ಆಡಳ್ಳಿಯ ಮನೋಜ ಗಜಾನನ ಹೆಗಡೆ (೧೯) ಮೃತಪಟ್ಟ ವಿದ್ಯಾರ್ಥಿ. ಈತ ಕುಮಟಾ ಕಡೆಯಿಂದ ಶಿರಸಿ ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ನಿಯಂತ್ರಣ ತಪ್ಪಿ ಕೆರೆಹನುಮಂತಿ ಹತ್ತಿರ ರಸ್ತೆಯ ಬಳಿ ನಿಲ್ಲಿಸಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಗ್ರಾಮೀಣ ಠಾಣೆ ಪಿಐ ಸೀತಾರಾಮ ಪಿ. ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.ಅಂದಲಗಿಯಲ್ಲಿ ಕರಡಿ ದಾಳಿ: ರೈತನಿಗೆ ಗಾಯ
ಮುಂಡಗೋಡ: ಕರಡಿ ದಾಳಿಗೆ ರೈತರೊಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ತಾಲೂಕಿನ ಅಂದಲಗಿ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.ದ್ಯಾಮಣ್ಣ ನಾಗಪ್ಪ ಬೆಂಡಿಗೇರಿ ಎಂಬ ವ್ಯಕ್ತಿಯೇ ಕರಡಿ ದಾಳಿಗೊಳಗಾದವರು. ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ದಾಳಿ ನಡೆಸಿದ ಕರಡಿ, ರೈತನ ಕಾಲು ಹಾಗೂ ಕೈಗೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿದೆ. ಮುಂಡಗೋಡ ತಾಲೂಕಾಸ್ಪತ್ರೆಯಲ್ಲಿ ಗಾಯಾಳುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಮುಂಡಗೋಡ ವಲಯ ಅರಣ್ಯಾಧಿಕಾರಿ ವಾಗೀಶ ಬಾಚಿನಕೊಪ್ಪ ಹಾಗೂ ಸಿಬ್ಬಂದಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ಕುಟುಂಬಕ್ಕೆ ಸಾಂತ್ವನ ಸೂಚಿಸಿದ್ದು, ಚಿಕಿತ್ಸೆ ವೆಚ್ಚ ಭರಿಸಲಾಗುವುದಲ್ಲದೇ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ.ಮೂವರ ಮೇಲೆ ಹಲ್ಲೆ
ಹೊನ್ನಾವರ: ಪಟ್ಟಣದ ಗೇರುಸೊಪ್ಪಾ ಸರ್ಕಲ್ ಹತ್ತಿರ ಬ್ಯಾಂಕಿನಿಂದ ಸಾಲ ಮಾಡಿ ನೀಡಿದ ಹಣವನ್ನು ಹಿಂದಿರುಗಿಸುವಂತೆ ವಿಚಾರಿಸಿದಕ್ಕೆ ಯುವಕನೊರ್ವನಿಂದ ಮೂವರ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ.ತಾಲೂಕಿನ ಮಂಕಿ ಗುಳದಕೇರಿ ವಿಜಯಾ ಮಂಜುನಾಥ ನಾಯ್ಕ ಹಾಗೂ ಇವರ ಪುತ್ರಿ ಸೇರಿ ಆರೋಪಿತನಾದ ಪ್ರಭಾತನಗರದ ಮಣಿಕಂಠ ಕೃಷ್ಣ ಮೇಸ್ತಾ ಈತನಿಗೆ ಕಳೆದ ಎರಡು ವರ್ಷಗಳ ಹಿಂದೆ ಬ್ಯಾಂಕ್ ಒಂದರಿಂದ ಹಾಗೂ ಮಹಿಳಾ ಸಂಘಗಳ ಮುಖಾಂತರ ಸಾಲ ಮಾಡಿ ಆರು ಲಕ್ಷ ರುಪಾಯಿ ಹಣವನ್ನು ನೀಡಿದ್ದರು.ಈ ಬಗ್ಗೆ ತಾಯಿ, ಮಗಳು ವಿಚಾರಿಸಿದಕ್ಕೆ ಆರೋಪಿತನು ಹಣವನ್ನು ಕೊಡುವುದಿಲ್ಲ ಎಂದು ಹೇಳಿಕೊಂಡು ಬಂದಿದ್ದ ಎನ್ನಲಾಗಿದೆ. ಅ. 27ರಂದು ರಾತ್ರಿ ವಿಜಯಾ ಮಂಜುನಾಥ ನಾಯ್ಕ ತನ್ನ ಪತಿಯೊಂದಿಗೆ ಪಟ್ಟಣದ ಗೇರುಸೊಪ್ಪಾ ಸರ್ಕಲ್ ಹತ್ತಿರ ಆರೋಪಿ ಮಣಿಕಂಠ ಮೇಸ್ತಾ ಈತನ ಅಂಗಡಿಗೆ ಚಹಾ ಕುಡಿಯಲು ಹೋಗಿದ್ದರು. ಆರೋಪಿತನು ಚಾಕವಿನಿಂದ ವಿಜಯಾ ಅವರ ಗಂಡನ ಕೈ ಮೇಲೆ ಚಾಕುವಿನಿಂದ ಹೊಡೆದಿದ್ದರು.ಆಗ ವಿಜಯಾ ಅವರು ತಪ್ಪಿಸಲು ಹೋದಾಗ ಆರೋಪಿತನು ಚಾಕವಿನಿಂದ ವಿಜಯಾ ಅವರ ಕೈ ಮೇಲೆ ಹೊಡೆದು, ಅವಾಚ್ಯ ಶಬ್ದಗಳಿಂದ ಬೈದು ಎಳೆದಾಡಿದ್ದ. ಅಲ್ಲದೇ ವಿಜಯಾ ಅವರ ಮಗಳು ವೀಣಾ ನಾಯ್ಕ ಅವರಿಗೂ ಹೊಡೆದಿದ್ದಾನೆ. ನೊಂದ ಮಹಿಳೆ ವಿಜಯಾ ನಾಯ್ಕ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.