- ಚಿಕ್ಕಬಳ್ಳಾಪುರದಲ್ಲಿ ಸೋಂಕು ದೃಢ
- ರಾಯಚೂರು ಪಕ್ಷಿಗಳ ನಿಗೂಢ ಸಾವು
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ/ರಾಯಚೂರುರಾಜ್ಯದಲ್ಲೂ ಹಕ್ಕಿಜ್ವರದ ಆತಂಕ ಶುರುವಾಗಿದ್ದು, ಚಿಕ್ಕಬಳ್ಳಾಪುರಲ್ಲಿ ಎರಡು ಕೋಳಿಗಳಲ್ಲಿ ಸೋಂಕು ದೃಢಪಟ್ಟಿದೆ. ಇದೇ ವೇಳೆ, ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕೆಲವೆಡೆ ಪಕ್ಷಿಗಳು ನಿಗೂಢವಾಗಿ ಸಾವನ್ನಪ್ಪುತ್ತಿದ್ದು, ಹಕ್ಕಿಜ್ವರದ ಭೀತಿ ಆವರಿಸಿದೆ.
ಚಿಕ್ಕಬಳ್ಳಾಪುರ ತಾಲೂಕಿನ ವರದಹಳ್ಳಿ ಗ್ರಾಮದಲ್ಲಿ ಸಾಕಿದ್ದ ನಾಟಿ ಕೋಳಿಗಳಲ್ಲಿ ಹಕ್ಕಿಜ್ವರ ಪತ್ತೆಯಾಗಿದೆ ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದ್ದಾರೆ.ವರದಹಳ್ಳಿ ಗ್ರಾಮದಲ್ಲಿ ದ್ಯಾವಪ್ಪ ಎಂಬುವರಿಗೆ ಸೇರಿದ 28 ಕೋಳಿಗಳು ಹಾಗೂ ರತ್ನಮ್ಮ ಎಂಬುವರಿಗೆ ಸೇರಿದ 5 ಕೋಳಿಗಳು ರಕ್ತ ಭೇದಿ ಮಾಡಿಕೊಂಡು ದಿಢೀರನೇ ಪ್ರಾಣಬಿಟ್ಟಿದ್ದವು. ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಈ ಸತ್ತ ಕೋಳಿಗಳ ಮಾದರಿಗಳನ್ನು ಪರೀಕ್ಷೆಗಾಗಿ ಬೆಂಗಳೂರಿನ ಪಶುಪಾಲನೆ ಹಾಗೂ ಜೈವಿಕ ವಿಜ್ಞಾನ ವಿಭಾಗದ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಎರಡು ಕೋಳಿಗಳಲ್ಲಿ ಹಕ್ಕಿಜ್ವರದ ಎಚ್5ಎನ್1 ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಅದೇ ಮಾದರಿಗಳನ್ನು ಭೋಪಾಲ್‌ನಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲೂ ವೈರಸ್ ಇರುವುದು ದೃಢಪಟ್ಟಿದೆ. ಹೀಗಾಗಿ, ಮೌಖಿಕವಾಗಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತಕ್ಕೆ ಹಕ್ಕಿಜ್ವರದ ಬಗ್ಗೆ ಮಾಹಿತಿ ನೀಡಲಾಗಿದ್ದು, ಲಿಖಿತ ವರದಿ ಇನ್ನಷ್ಟೇ ಬರಬೇಕಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಅಧಿಕಾರಿಗಳ ತುರ್ತು ಸಭೆ ನಡೆಸಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದಾರೆ.ರಾಯಚೂರಲ್ಲೂ ಹಕ್ಕಿಜ್ವರ ಭೀತಿ:
ಇದೇ ವೇಳೆ, ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಹಲವೆಡೆ ಪಕ್ಷಿಗಳು ನಿಗೂಢವಾಗಿ ಸಾವನ್ನಪ್ಪುತ್ತಿದ್ದು, ಹಕ್ಕಿಜ್ವರದ ಭೀತಿ ಶುರುವಾಗಿದೆ. ಪಾರಿವಾಳ, ಕೊಕ್ಕರೆ, ಕಾಗೆ, ಕಿಂಗ್ ಫಿಶರ್, ಸುವರ್ಣ ಪಕ್ಷಿ, ರತ್ನ ಪಕ್ಷಿ, ಬೆಳ್ಳಕ್ಕಿ ಸೇರಿ ವಿವಿಧ ಪ್ರಭೇದದ ಪಕ್ಷಿಗಳು ರೈತರ ಜಮೀನು, ತೋಟ ಹಾಗೂ ಮರ-ಗಿಡಗಳಿಂದ ಏಕಾಏಕಿ ಕೆಳಗೆ ಬಿದ್ದು ಸಾವನ್ನಪ್ಪುತ್ತಿವೆ. ಪಶು-ಸಂಗೋಪನಾ ಇಲಾಖೆಯ ಅಧಿಕಾರಿಗಳು ಇವುಗಳ ಕಳೇಬರವನ್ನು ಸಂಗ್ರಹಿಸಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.