ರೋಗ ಪೀಡಿತ ಹಕ್ಕಿಗಳ ಸಂಪರ್ಕದಿಂದ ಹಕ್ಕಿಜ್ವರ

KannadaprabhaNewsNetwork |  
Published : Mar 06, 2025, 12:34 AM IST
ಜ್ವರ | Kannada Prabha

ಸಾರಾಂಶ

ಹಕ್ಕಿ ಜ್ವರ ಅಥವಾ ಕೋಳಿ ಜ್ವರ, ಶೀತ ಜ್ವರ ಹೆಚ್‌5 ಎನ್‌ 1 ವೈರಸ್‌ನಿಂದ ಹರಡುವ ರೋಗ ಇದು ಟರ್ಕಿ ಕೋಳಿ, ಗಿನಿ ಕೋಳಿ, ಗೀಜಗ ಮುಂತಾದ ಹಕ್ಕಿಗಳಲ್ಲಿ ಕಾಣಿಸಿಕೊಳ್ಳುವ ಖಾಯಿಲೆ.

ಮಡಿಕೇರಿ : ಹಕ್ಕಿಜ್ವರ ಅಥವಾ ಕೋಳಿ ಜ್ವರ ಶೀತಜ್ವರ ಹೆಚ್5ಎನ್1 ವೈರಸ್ ನಿಂದ ಹರಡುವ ರೋಗ ಇದು ಟರ್ಕಿ ಕೋಳಿ, ಗಿನಿ ಕೋಳಿ, ಗೀಜಗ ಮುಂತಾದ ಹಕ್ಕಿಗಳಲ್ಲಿ ಕಾಣಿಸಿಕೊಳ್ಳುವ ಖಾಯಿಲೆ. ಇದೊಂದು ಸಾಂಕ್ರಾಮಿಕ ಖಾಯಿಲೆಯಾಗಿದ್ದು, ಸಾಮಾನ್ಯವಾಗಿ ಹಕ್ಕಿಗಳಿಂದ ಹಕ್ಕಿಗಳಿಗೆ ಹರಡುತ್ತದೆ. ಕೆಲವೊಂದು ರೋಗ ಪೀಡಿತ ಹಕ್ಕಿಗಳ ಸಂಪರ್ಕದಿಂದ ಮನುಷ್ಯರಲ್ಲೂ ಈ ಜ್ವರದ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

ರೋಗ ಪೀಡಿತ ಕೋಳಿ ಅಥವಾ ಹಕ್ಕಿಗಳ ಮಾಂಸವನ್ನು ಸರಿಯಾಗಿ ಬೇಯಿಸದೇ ತಿನ್ನುವುದರಿಂದ, ಸೋಂಕಿರುವ ಹಸಿ ಮೊಟ್ಟೆಯನ್ನು ಸೇವಿಸುವುದರಿಂದ ಹಾಗೂ ಕೋಳಿಗಳ ಹಿಕ್ಕೆಗಳು, ಮನುಷ್ಯರು ಕುಡಿಯುವ ನೀರಿನೊಂದಿಗೆ ಬೆರೆತು ಕಲುಷಿತಗೊಂಡಾಗ ಈ ಖಾಯಿಲೆ ಹರಡುತ್ತದೆ ಮತ್ತು ಕೆಲವು ಸಂದರ್ಭಗಳಲ್ಲಿ ಗಾಳಿಯ ಮೂಲಕವೂ ಮನುಷ್ಯರಿಗೆ ಹರಡುತ್ತದೆ.

ರೋಗ ಲಕ್ಷಣಗಳು: ಹಕ್ಕಿ ಜ್ವರದ ಲಕ್ಷಣಗಳು ಸಾಮಾನ್ಯವಾಗಿ ಹೆಚ್|ಎನ್1 ಜ್ವರದ ಲಕ್ಷಣಗಳಂತೆಯೇ ಇರುತ್ತದೆ. ಜ್ವರ ಮತ್ತು ಕೆಮ್ಮು, ಶೀತ, ತಲೆನೋವು, ಗಂಟಲು ಕೆರೆತ, ನೆಗಡಿ, ಸ್ನಾಯುಗಳಲ್ಲಿ ನೋವು, ಆಯಾಸ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ವಾಂತಿ ಮತ್ತು ಭೇದಿಯೂ ಆಗಬಹುದು. ಉಸಿರಾಟದಲ್ಲಿ ತೊಂದರೆ ಕಾಣಿಸಬಹುದು.

ಮುನ್ನೆಚ್ಚರಿಕೆ ಕ್ರಮಗಳು: ಹಕ್ಕಿಜ್ವರ ಪೀಡಿತ ಪ್ರದೇಶಗಳಲ್ಲಿ ನಾಗರಿಕರು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೆ ಹಕ್ಕಿ ಜ್ವರದ ಸೋಂಕು ಹರಡದಂತೆ ತಡೆಯಬಹುದು.

ಶಂಕಿತ ಹಕ್ಕಿಜ್ವರ ಪೀಡಿತ ಕೋಳಿಗಳು, ಹಕ್ಕಿಗಳು ಹಾಗೂ ಬಾತು ಕೋಳಿಗಳ ಸಂಪರ್ಕಕ್ಕೆ ಬರದಂತೆ ಎಚ್ಚರ ವಹಿಸುವುದು. ಬೇರೆಯವರ ಮನೆಗೆ ಭೇಟಿ ನೀಡಿದಾಗ ಅಲ್ಲಿರುವ ಶಂಕಿತ ಪೀಡಿತ ಕೋಳಿ ಅಥವಾ ಹಕ್ಕಿಗಳನ್ನು ಸ್ಪರ್ಶಿಸಬಾರದು. ಹಕ್ಕಿ ಜ್ವರ ಶಂಕಿತ ಅಥವಾ ಪೀಡಿತ ಫಾರಂಗಳಿಗೆ ಭೇಟಿ ನೀಡಬಾರದು. ಹಕ್ಕಿ ಜ್ವರ ಹರಡಿರುವ ಫಾರಂನ ವಾತಾವರಣದ ಸಂಪರ್ಕಕ್ಕೆ ಬಂದಲ್ಲಿ ತಕ್ಷಣ ತಮ್ಮ ಕೈಕಾಲು ಮತ್ತು ಮುಖವನ್ನು ತೊಳೆದುಕೊಂಡು ಬಟ್ಟೆಯನ್ನು ಬದಲಾಯಿಸಿಕೊಳ್ಳುವುದು ಮತ್ತು ಮುಂದಿನ ನಾಲ್ಕು ದಿನಗಳವರೆಗೆ ತಮ್ಮ ದೇಹದ ಉಷ್ಣಾಂಶದಲ್ಲಾಗುವ ಬದಲಾವಣೆಗಳನ್ನು ಗಮನಿಸುವುದು. ಒಂದು ವೇಳೆ ಜ್ವರದ ಲಕ್ಷಣಗಳು ಕಾಣಿಸಿಕೊಂಡಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು.

ಸೋಂಕಿರುವ ಪ್ರದೇಶಗಳಲ್ಲಿ ಯಾವುದೇ ವಸ್ತುವನ್ನು ಮುಟ್ಟಿದಾಗ ಯಾವಾಗಲೂ ಕೈಗಳನ್ನು ಸೋಪಿನಿಂದ ತೊಳೆಯಬೇಕು.

ಕೋಳಿ ಮಾಂಸದ ಸೇವನೆಯಿಂದ ಹಕ್ಕಿ ಜ್ವರ ಬರುವುದಿಲ್ಲ: ಕೋಳಿ ಮಾಂಸ ಅಥವಾ ಕೋಳಿ ಮೊಟ್ಟೆ ಸೇವಿಸುವುದರಿಂದ ಈ ಖಾಯಿಲೆ ಮನುಷ್ಯರಲ್ಲಿ ಬರುವುದಿಲ್ಲ, ಆದರೆ ಸೋಂಕು ತಗುಲಿದ ಕೋಳಿಯ ಮಾಂಸ ಚೆನ್ನಾಗಿ ಬೇಯಿಸದೆ ಹಾಗೂ ಅವುಗಳ ಹಸಿ ಮೊಟ್ಟೆಯ ಸೇವನೆಯಿಂದ ರೋಗ ತಗಲುವ ಸಾಧ್ಯತೆ ಇದೆ. ಕೋಳಿ ಮಾಂಸ ಮತ್ತು ಮೊಟ್ಟೆಯನ್ನು 70 ಡಿಗ್ರಿ ಸೆಂಟಿಗ್ರೇಡ್‌ಗೂ ಅಧಿಕ ಉಷ್ಣಾಂಶದಲ್ಲಿ ಬೇಯಿಸಿದ ನಂತರವೇ ಸೇವಿಸಬೇಕು.

ಅಡುಗೆಗಾಗಿ ಕೋಳಿ ಮಾಂಸ ಸಿದ್ಧಪಡಿಸಿದ ನಂತರ ಕೈಗಳನ್ನು ನಂಜು ನಾಶಕದಿಂದ ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಸೋಂಕಿತ ಹಸಿ ಮೊಟ್ಟೆ ಸೇವಿಸಬಾರದು. ಹಕ್ಕಿ ಜ್ವರ ಸಾಂಕ್ರಾಮಿಕ ರೋಗ ಮುನ್ನೆಚ್ಚರಿಕೆಯಿಂದ ತಡೆಯಬಲ್ಲ ಖಾಯಿಲೆ. ಆದ್ದರಿಂದ ಖಾಯಿಲೆಯ ಲಕ್ಷಣಗಳು ಕೋಳಿಗಳಲ್ಲಿ ಕಾಣಿಸಿಕೊಂಡ ಕೂಡಲೇ ಹತ್ತಿರದ ಮಾಹಿತಿ ಕೇಂದ್ರ ಅಥವಾ ಪಶು ವೈದ್ಯಕೀಯ ಸಂಸ್ಥೆಗೆ ಮಾಹಿತಿ ನೀಡಬೇಕು. ಹಕ್ಕಿ ಜ್ವರದ ಲಕ್ಷಣಗಳು ಮನುಷ್ಯನಲ್ಲಿ ಕಾಣಿಸಿಕೊಂಡರೆ ತಡಮಾಡದೇ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಿರಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಅವರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ