ಕಸ ನಿರ್ವಹಣಾ ಘಟಕ ಕಾಮಗಾರಿಗೆ ಗ್ರಾಮಸ್ಥರ ಅಡ್ಡಿ

KannadaprabhaNewsNetwork | Published : Mar 6, 2025 12:34 AM

ಸಾರಾಂಶ

ರಾಮನಗರ: ತಾಲೂಕಿನ ಹರೀಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಗ್ಗಲ್ ಗುಡ್ಡ ಸರ್ಕಾರಿ ಗೋಮಾಳದಲ್ಲಿ ಒಣ ತ್ಯಾಜ್ಯ ನಿರ್ವಹಣೆ ಘಟಕ ನಿರ್ಮಾಣ ಕಾಮಗಾರಿಗೆ ಶಾಸಕರು ಹಾಗೂ ನಗರಸಭೆ ಅಧ್ಯಕ್ಷರು ಭೂಮಿಪೂಜೆ ನೆರವೇರಿಸುವ ಕಾರ್ಯಕ್ಕೆ ಗ್ರಾಮಸ್ಥರು ಅಡ್ಡಿ ಪಡಿಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಬುಧವಾರ ನಡೆಯಿತು.

ರಾಮನಗರ: ತಾಲೂಕಿನ ಹರೀಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಗ್ಗಲ್ ಗುಡ್ಡ ಸರ್ಕಾರಿ ಗೋಮಾಳದಲ್ಲಿ ಒಣ ತ್ಯಾಜ್ಯ ನಿರ್ವಹಣೆ ಘಟಕ ನಿರ್ಮಾಣ ಕಾಮಗಾರಿಗೆ ಶಾಸಕರು ಹಾಗೂ ನಗರಸಭೆ ಅಧ್ಯಕ್ಷರು ಭೂಮಿಪೂಜೆ ನೆರವೇರಿಸುವ ಕಾರ್ಯಕ್ಕೆ ಗ್ರಾಮಸ್ಥರು ಅಡ್ಡಿ ಪಡಿಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಬುಧವಾರ ನಡೆಯಿತು.

ಸ್ವಚ್ಛ ಭಾರತ್ ಅಭಿಯಾನ 2.0 ಯೋಜನೆ ಅಡಿಯಲ್ಲಿ ರಾಮನಗರ ನಗರಸಭೆಯ ಒಣ ತ್ಯಾಜ್ಯ ನಿರ್ವಹಣೆಗಾಗಿ (ಎಂಆರ್ ಎಫ್ ) ಘಟಕದ ಕಟ್ಟಡ ನಿರ್ಮಾಣಕ್ಕಾಗಿ ಶಾಸಕ ಇಕ್ಬಾಲ್ ಹುಸೇನ್ ಹಾಗೂ ನಗರಸಭೆ ಅಧ್ಯಕ್ಷ ಶೇಷಾದ್ರಿ ಭೂಮಿಪೂಜೆ ನೆರವೇರಿಸಲು ಹರೀಸಂದ್ರ ಗ್ರಾಮ ಸರ್ವೆ ನಂ.166ರಲ್ಲಿನ ಕಗ್ಗಲ್ ಗುಡ್ಡಕ್ಕೆ ಬೆಳಗ್ಗೆ ಆಗಮಿಸಿದರು.

ಇದಕ್ಕೂ ಮುನ್ನವೇ ಜಮಾಯಿಸಿದ್ದ ಬೆಜ್ಜರಹಳ್ಳಿಕಟ್ಟೆ, ಪಾದರಹಳ್ಳಿ, ಹನುಮಂತೇಗೌಡನದೊಡ್ಡಿ, ಹರೀಸಂದ್ರ, ಕಾಳೇಗೌಡನದೊಡ್ಡಿ, ಚಿಕ್ಕೇಗೌಡನದೊಡ್ಡಿ, ಭೂರಗಮರದೊಡ್ಡಿ, ತಿಮ್ಮೇಗೌಡನದೊಡ್ಡಿ, ಮಾರೇಗೌಡನದೊಡ್ಡಿ ಗ್ರಾಮಸ್ಥರು ಶಾಸಕ ಇಕ್ಬಾಲ್ ಹುಸೇನ್ ಅವರನ್ನು ಸುತ್ತುವರೆದು ಘಟಕ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.

ಪೊಲೀಸರೊಂದಿಗೆ ಮಾತಿನ ಚಕಮಕಿ :

ಇಕ್ಬಾಲ್ ಹುಸೇನ್ ಮತ್ತು ಕೆ.ಶೇಷಾದ್ರಿಯವರು ಮನವೊಲಿಸುವ ಪ್ರಯತ್ನ ಮಾಡಿದರೂ ಗ್ರಾಮಸ್ಥರು ಒಪ್ಪಲಿಲ್ಲ. ವಿರೋಧ ಲೆಕ್ಕಿಸದೆ ಭೂಮಿಪೂಜೆ ನೆರವೇರಿಸಲು ಮುಂದಾದ ಶಾಸಕರ ಎದುರು ಕೆಲ ಗ್ರಾಮಸ್ಥರು ಶಾಸಕರಿಗೆ ಅಡ್ಡಲಾಗಿ ಮಲಗಿದರು. ಅಲ್ಲದೆ, ಮಾತಿನ ಚಕಮಕಿ ನಡೆಸಿದ್ದರಿಂದ ನೂಕಾಟ ತಳ್ಳಾಟವೂ ನಡೆಯಿತು.

ಪೊಲೀಸರು ಗ್ರಾಮಸ್ಥರನ್ನು ವಶಕ್ಕೆ ಪಡೆಯಲು ಮುಂದಾದಾಗ ಶಾಸಕರು ತಡೆದರು. ಈ ಮಧ್ಯೆ ಯುವಕನೊಬ್ಬ ಬ್ಯಾನರ್ ಹರಿದು ಬಿಸಾಡಿದನು. ಪೊಲೀಸರು ಆತನಿಂದಲೇ ಮತ್ತೆ ಬ್ಯಾನರ್ ಕಟ್ಟಿಸಿದರು. ಮತ್ತೊಂದೆಡೆ ಮಹಿಳೆಯೊಬ್ಬರು ಮಹಿಳಾ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿ ಹೈಡ್ರಾಮಾ ಸೃಷ್ಟಿಸಿದಳು. ಜನರ ಹೆಣದ ಮೇಲೆ ಘಟಕ ನಿರ್ಮಿಸಬೇಕಾಗುತ್ತದೆ ಎಂದು ಘೋಷಣೆ ಕೂಗಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುವುದನ್ನು ಅರಿತ ಶಾಸಕ ಇಕ್ಬಾಲ್ ಹುಸೇನ್, ಗ್ರಾಮಸ್ಥರ ಅಹವಾಲು ಆಲಿಸಿದರು.

ನೈಸರ್ಗಿಕ ಪ್ರದೇಶ ಮಲೀನ:

ಗ್ರಾಮ ಮುಖಂಡ ಕೆಂಪೇಗೌಡನದೊಡ್ಡಿ ಮಂಜು ಮಾತನಾಡಿ, ಒಣ ತ್ಯಾಜ್ಯ ನಿರ್ವಹಣೆ ಘಟಕ‍‍ವನ್ನು ನದಿ ಪಾತ್ರದ ಮೇಲ್ಭಾಗದಲ್ಲಿ ನಿರ್ಮಿಸಿರುವುದರಿಂದ ಮಳೆ ಬಂದರೆ ನದಿ ನೀರು ಕಲುಪಿತಗೊಳ್ಳುತ್ತದೆ. ನೈಸರ್ಗಿಕ ಪ್ರದೇಶವೂ ಹಾಳಾಗುತ್ತದೆ. ಅಲ್ಲದೆ, ಕೃಷಿ ಚಟುವಟಿಕೆ ಮೇಲೂ ಪರಿಣಾಮ ಬೀರುತ್ತದೆ. ಘಟಕದಿಂದ ಹೊರ ಬರುವ ವಾಸನೆಯಿಂದ ಉಸಿರಾಡಲು ಸಾಧ್ಯವಾಗದೆ ರೋಗಗಳಿಗೆ ತುತ್ತಾಗಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಈಗ ಬೈರಮಂಗಲ ಕೆರೆ ಕಲುಷಿತಗೊಂಡಿದ್ದು, ಇದರಿಂದ ಕೃಷಿ ಚಟುವಟಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಆ ಊರಿನವರಿಗೆ ಹೆಣ್ಣು ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಬೇಕಾದರೆ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಘಟಕಕ್ಕೆ ರಾಮನಗರದ ಕಸವನ್ನು ಸಾಗಿಸಿ, ಈ ಹಿಂದೆ ಅನಿತಾ ಶಾಸಕರಾಗಿದ್ದಾಗ ಘಟಕ ನಿರ್ಮಾಣಕ್ಕೆ ನಿಮ್ಮದೇ ಪಕ್ಷದವರು ವಿರೋಧ ಮಾಡಿ ಕಳುಹಿಸಿದ್ದರು. ಈಗ ನಿಲುವು ಬದಲಾವಣೆ ಮಾಡಿಕೊಂಡಿದ್ದೀರಿ ಎಂದು ಟೀಕಿಸಿದರು.

ಇದಕ್ಕೆ ಧ್ವನಿಗೂಡಿಸಿದ ಬಿಜೆಪಿ ಮುಖಂಡ ಪ್ರವೀಣ್ ಕುಮಾರ್, ರಾಮನಗರ ನಗರಸಭೆ ಮತ್ತು ಬಿಡದಿ ಪುರಸಭೆಗಳಿಗೆ ತ್ಯಾಜ್ಯ ವಿಲೇವಾರಿ ಮಾಡಲು ತಲಾ 10 ಎಕರೆ ಮಂಜೂರಾಗಿದೆ. ಆ ಭಾಗದಿಂದ ಸಾವಿರಾರು ರುಪಾಯಿ ಡೀಸೆಲ್ ಖರ್ಚು ಮಾಡಿಕೊಂಡು ಇಲ್ಲಿ ಕಸ ಸುರಿಯುವ ಅಗತ್ಯ ಏನಿದೆ. ಇಂದು ನೀವು, ನಾಳೆ ಶಾಸಕ ಬಾಲಕೃಷ್ಣ ಪೂಜೆ ಮಾಡಲು ಬರುತ್ತಾರೆ. ಜನರ ವಿರೋಧದ ನಡುವೆ ಘಟಕ ನಿರ್ಮಾಣ ಮಾಡಿದರೆ ಹೇಗೆಂದು ಪ್ರಶ್ನಿಸಿದರು.

ಗ್ರಾಮಸ್ಥರನ್ನು ಸಮಾಧಾನ ಪಡಿಸಿದ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ, ಬಲ ಪ್ರಯೋಗದಿಂದ ಘಟಕ ನಿರ್ಮಿಸುವ ದುರುದ್ದೇಶ ಹೊಂದಿಲ್ಲ. ಘಟಕದ ವಿಚಾರವಾಗಿ ಗ್ರಾಮಸ್ಥರಲ್ಲಿ ತಪ್ಪು ತಿಳುವಳಿಕೆ ಇದ್ದು, ಪೂರ್ವಗ್ರಹ ಪೀಡಿತರಾಗಿದ್ದಾರೆ. ಜಾನಪದ ಲೋಕದ ಬಳಿ ಯುಜಿಡಿ ಟ್ರೀಟ್ ಮೆಂಟ್ ಪ್ಲಾಂಟ್ ಇದ್ದು, ಅದಕ್ಕೂ ವಿರೋಧ ವ್ಯಕ್ತವಾಗಿತ್ತು. ಈಗ ಜನರು ಮೌನವಾಗಿದ್ದಾರೆ. ಅದೇ ರೀತಿ ನಿಮ್ಮೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಂಡು ಘಟಕ ನಿರ್ಮಾಣ ಮಾಡುತ್ತೇವೆ ಎಂದರು.

ಇಲ್ಲಿ ಕಸ ಹಾಕಲ್ಲ, ಗೊಬ್ಬರ ಮಾಡುತ್ತೇವೆ:

ಶಾಸಕ ಇಕ್ಬಾಲ್ ಹುಸೇನ್, ಬೆಂಗಳೂರಿನ ಇಂದಿರಾನಗರ, ಕೆ.ಆರ್.ಪುರಂ ಹಾಗೂ ಬನಶಂಕರಿ ನಗರಗಳಲ್ಲಿ ವೈಜ್ಞಾನಿಕವಾಗಿ ಕಸ ನಿರ್ವಹಣೆ ಮಾಡಲಾಗುತ್ತಿದ್ದು, ಅದೇ ಮಾದರಿಯ ಘಟಕವನ್ನು ಇಲ್ಲಿ ನಿರ್ಮಿಸುವ ಉದ್ದೇಶ ಹೊಂದಿದ್ದೇವೆ. ಗ್ರಾಮಸ್ಥರು ಮಾ.8ರಂದು ಆ ಘಟಕಗಳನ್ನು ವೀಕ್ಷಣೆ ಮಾಡಿಕೊಂಡು ಬಂದು ಅಭಿಪ್ರಾಯ ತಿಳಿಸುವಂತೆ ಮನವಿ ಮಾಡಿದರು.

2018ರಲ್ಲಿಯೇ ಕಸ ನಿರ್ವಹಣೆಗಾಗಿ ಜಾಗ ಗುರುತಿಸಲಾಗಿದೆ. ಇಲ್ಲಿ ಕಸ ಹಾಕುವುದಿಲ್ಲ ಬದಲಿಗೆ, ಕಸನವನ್ನು ಪುಡಿ ಮಾಡಿ ಗೊಬ್ಬರವನ್ನಾಗಿ ಮಾಡಲಾಗುತ್ತದೆ. ಸರ್ಕಾರಿ ಜಮೀನಿನಲ್ಲಿ ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸುವುದು ಸರಿಯಲ್ಲ. ಕಾನೂನಿಗಿಂತ ಯಾರೂ ದೊಡ್ಡವರಿಲ್ಲ. ನಿಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಯಾವುದೇ ಕೆಲಸ ಮಾಡುವುದಿಲ್ಲ. ಬೆಂಗಳೂರಿನ ಘಟಕ ನೋಡಿ ಸಮಾಧಾನವಾದ ಮೇಲೆಯೇ ಘಟಕ ನಿರ್ಮಾಣಕ್ಕೆ ಚಾಲನೆ ನೀಡುತ್ತೇವೆ ಎಂದು ಇಕ್ಬಾಲ್ ಹುಸೇನ್ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಹರೀಸಂದ್ರ ಗ್ರಾಪಂ ಮಾಜಿ ಅಧ್ಯಕ್ಷ ಶಿವಕುಮಾರ್, ಸದಸ್ಯ ಶಿವಕುಮಾರ್, ಗ್ರಾಮದ ಮುಖಂಡರಾದ ಅಪ್ಪಯ್ಯ, ರೇಣುಕಾ, ಶಿವಪ್ಪ, ಅಶ್ವತ್ಥ, ಸಂತೋಷ ಮತ್ತಿತರರು ಹಾಜರಿದ್ದರು.

ಕೋಟ್ ............

ಹರೀಸಂದ್ರ ಗ್ರಾಪಂ ವ್ಯಾಪ್ತಿಯ ಕಗ್ಗಲ್ ಗುಡ್ಡದಲ್ಲಿ ಸ್ವಚ್ಛ ಭಾರತ್ ಅಭಿಯಾನ 2.0 ಯೋಜನೆ ಅಡಿಯಲ್ಲಿ 2.60 ಕೋಟಿ ರುಪಾಯಿ ವೆಚ್ಚದಲ್ಲಿ ಒಣ ತ್ಯಾಜ್ಯ ನಿರ್ವಹಣೆ ಘಟಕ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಗ್ರಾಮಸ್ಥರಲ್ಲಿ ತಪ್ಪು ತಿಳುವಳಿಕೆ ಇರುವುದರಿಂದ ಘಟಕ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಗ್ರಾಮದ ಮುಖಂಡರನ್ನು ಬೆಂಗಳೂರಿನಲ್ಲಿರುವ ಕಸ ನಿರ್ವಹಣೆ ಘಟಕ ತೋರಿಸಿದ ತರುವಾಯ ಅವರನ್ನು ವಿಶ್ವಾಸಕ್ಕೆ ಪಡೆದು ಘಟಕ ನಿರ್ಮಾಣ ಮಾಡುತ್ತೇವೆ.

- ಇಕ್ಬಾಲ್ ಹುಸೇನ್, ಶಾಸಕರು

ಬಾಕ್ಸ್ ................

ಮಾ.8ರಂದು ಬೆಂಗಳೂರಿಗೆ ಅಧ್ಯಯನ ಪ್ರವಾಸ

ಹರೀಸಂದ್ರ ಗ್ರಾಪಂ ವ್ಯಾಪ್ತಿಯ ಕಗ್ಗಲ್ ಗುಡ್ಡದಲ್ಲಿ ಒಣ ತ್ಯಾಜ್ಯ ನಿರ್ವಹಣೆ ಘಟಕ ಹೇಗೆ ನಿರ್ಮಾಣಗೊಂಡು, ಕಾರ್ಯನಿರ್ವಹಿಸಲಿದೆ ಎಂಬುದನ್ನು ಮನವರಿಕೆ ಮಾಡಿಕೊಳ್ಳಲು ಗ್ರಾಮಸ್ಥರು ಮಾ.8ರಂದು ಬೆಂಗಳೂರಿಗೆ ಅಧ್ಯಯನ ಪ್ರವಾಸಕ್ಕೆ ತೆರಳಿದ್ದಾರೆ. ಈ ಪ್ರವಾಸದಲ್ಲಿ ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಜಿಲ್ಲಾಧಿಕಾರಿಗಳು, ಡಿವೈಎಸ್ಪಿ ಹಾಗೂ ಹರೀಸಂದ್ರ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಮುಖಂಡರು ಭಾಗವಹಿಸಲಿದ್ದಾರೆ.

5ಕೆಆರ್ ಎಂಎನ್ 1,2.ಜೆಪಿಜಿ

1.ಶಾಸಕ ಇಕ್ಬಾಲ್ ಹುಸೇನ್ ಎದುರು ಅಡ್ಡಲಾಗಿ ಮಲಗಿ ಗ್ರಾಮಸ್ತರು ವಿರೋಧ ವ್ಯಕ್ತಪಡಿಸುತ್ತಿರುವುದು.

2.ಕಗ್ಗಲ್ ಗುಡ್ಡದಲ್ಲಿ ಗ್ರಾಮಸ್ಥರು ಒಣ ತ್ಯಾಜ್ಯ ನಿರ್ವಹಣೆ ಘಟಕ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು.

Share this article