15ರಿಂದ ರಾಷ್ಟ್ರೀಯ ವೃತ್ತಿ ರಂಗೋತ್ಸವ, ಲಾಂಛನ ಬಿಡುಗಡೆ

KannadaprabhaNewsNetwork | Published : Mar 6, 2025 12:34 AM

ಸಾರಾಂಶ

ದಾವಣಗೆರೆಯಲ್ಲಿ ಪ್ರಪ್ರಥಮ ಬಾರಿಗೆ ರಾಷ್ಟ್ರೀಯ ವೃತ್ತಿ ರಂಗೋತ್ಸವವನ್ನು ಮಾ.15ರಿಂದ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣ ನಿರ್ದೇಶಕ, ಹಿರಿಯ ರಂಗಕರ್ಮಿ ಮಲ್ಲಿಕಾರ್ಜುನ ಕಡಕೋಳ ಹೇಳಿದ್ದಾರೆ.

- ದಾವಣಗೆರೆಯಲ್ಲಿ ಪ್ರಥಮ ಬಾರಿಗೆ ಆಯೋಜನೆ: ರಂಗಕರ್ಮಿ ಮಲ್ಲಿಕಾರ್ಜುನ ಕಡಕೋಳ । ಚಿತ್ರಕಲಾ ಶಿಬಿರ ಉದ್ಘಾಟನೆ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆಯಲ್ಲಿ ಪ್ರಪ್ರಥಮ ಬಾರಿಗೆ ರಾಷ್ಟ್ರೀಯ ವೃತ್ತಿ ರಂಗೋತ್ಸವವನ್ನು ಮಾ.15ರಿಂದ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣ ನಿರ್ದೇಶಕ, ಹಿರಿಯ ರಂಗಕರ್ಮಿ ಮಲ್ಲಿಕಾರ್ಜುನ ಕಡಕೋಳ ಹೇಳಿದರು.

ನಗರದ ವಿಶ್ವವಿದ್ಯಾನಿಲಯ ದೃಶ್ಯ ಕಲಾ ಮಹಾ ವಿದ್ಯಾಲಯದಲ್ಲಿ ಬುಧವಾರ ರಾಷ್ಟ್ರೀಯ ವೃತ್ತಿ ರಂಗೋತ್ಸವ-2025 ಅಂಗವಾಗಿ ಲಾಂಛನ ಬಿಡುಗಡೆ ಹಾಗೂ ಚಿತ್ರಕಲಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ವೃತ್ತಿ ರಂಗೋತ್ಸವದ ಹಿನ್ನೆಲೆ ದೃಶ್ಯಕಲಾ ಕಾಲೇಜು ವಿದ್ಯಾರ್ಥಿಗಳ ಚಿತ್ರಕಲಾ ಶಿಬಿರ ನಾಟಕೋತ್ಸವಕ್ಕೆ ಮತ್ತಷ್ಟು ಸ್ಪೂರ್ತಿ ತುಂಬುತ್ತಿದೆ ಎಂದರು.

ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣ ಶುರುವಾಗಿ ಆರು ವರ್ಷವಾಗುತ್ತಿದೆ. ಮೊದಲ ಸಲ ಇಲ್ಲಿ ರಾಷ್ಟ್ರೀಯ ನಾಟಕೋತ್ಸವ ಆಯೋಜನೆಯಾಗುತ್ತಿದೆ. ಕನ್ನಡ, ತಮಿಳು, ತೆಲುಗು ಭಾಷೆಯ ನಾಟಕಗಳು ಪ್ರದರ್ಶನವಾಗಲಿವೆ. ಪ್ರೇಕ್ಷಕರಿಗೆ ಉಚಿತ ಪ್ರವೇಶ ಅವಕಾಶ ಇರುತ್ತದೆ. ಕನ್ನಡ ವೃತ್ತಿ ರಂಗಭೂಮಿಯ ರಾಜಣ್ಣ ಜೇವರ್ಗಿಯವರ ಅಂಗಾರ.. ತಂಗಿ ಬಂಗಾರ, ತೆಲುಗಿನ ಮಾಯಾ ಬಜಾರ್‌, ತಮಿಳು ನಡೆ ಪಾವಡೈ ನಾಯಕಗಳು ಪ್ರದರ್ಶನವಾಗಲಿವೆ ಎಂದರು.

ವೃತ್ತಿ ರಂಗಭೂಮಿಗೆ ಸಂಬಂಧಿಸಿದಂತೆ ಅನೇಕ ವಿಚಾರ ಸಂಕಿರಣ, ಸಂವಾದ ನಡೆಯಲಿವೆ. ಪ್ರಸಿದ್ಧ ನಾಟಕಕಾರರು ಇತರರು ಭಾಗವಹಿಸುವರು. ವೃತ್ತಿ ರಂಗಭೂಮಿ ನಾಟಕಗಳ ಹಬ್ಬ ನಡೆಯಬೇಕೆಂಬುದು ವೃತ್ತಿ ರಂಗಭೂಮಿ ರಂಗಾಯಣದ ಅಪೇಕ್ಷೆಯಾಗಿದೆ. ಹಿರಿಯ ಕಲಾವಿದರೊಂದಿಗೆ ಸಂವಾದ, ಕೃತಿ ಲೋಕಾರ್ಪಣೆ, ನಾಟಕ ಕೃತಿಗಳ ಪ್ರದರ್ಶನ, 45 ಸಾವಿರದಷ್ಟು ರಂಗಭೂಮಿ ದಾಖಲೆಗಳ ಪ್ರದರ್ಶನ ಸೇರಿದಂತೆ ಅನೇಕ ರೀತಿಯ ರೂಪುರೇಷೆ ಸಿದ್ಧಪಡಿಸಿದ್ದೇವೆ ಎಂದು ವಿವರಿಸಿದರು.

ಕಾಲೇಜಿನ ಹಿರಿಯ ಪ್ರಾಧ್ಯಾಪಕ ದತ್ತಾತ್ರೇಯ ಎನ್. ಭಟ್ ಮಾತನಾಡಿ, ಜಗದ್ವಿಖ್ಯಾತ ಚಿತ್ರ ಕಲಾವಿದ ರಾಜಾ ರವಿವರ್ಮ ಅವರ ಅನೇಕ ಕಲಾಕೃತಿಗಳಲ್ಲಿ ವಿಶೇಷವಾಗಿ ಮರಾಠಿ ರಂಗಭೂಮಿಯ ಪ್ರಭಾವ ಗಾಢವಾಗಿದೆ. ಪಾರ್ಸಿ ರಂಗಸಜ್ಜಿಕೆ, ಮರಾಠಿ ರಂಗಭೂಮಿಯ ಸ್ತ್ರೀ ಪಾತ್ರಗಳನ್ನು ರಾಜಾ ರವಿವರ್ಮರ ಕಲಾಕೃತಿಗಳಲ್ಲಿ ಕಾಣಬಹುದು. ರಂಗಭೂಮಿ ಮತ್ತು ಚಿತ್ರಕಲೆಗೆ ಅವಿನಾಭಾವ ಸಂಬಂ‍ಧವೂ ಇದೆ ಎಂದರು.

ಉಪ ವಿಭಾಗಾಧಿಕಾರಿ ಸಂತೋಷ ಪಾಟೀಲ್ ರಾಷ್ಟ್ರೀಯ ನಾಟಕೋತ್ಸವದ ಲಾಂಛನ ಬಿಡುಗಡೆ ಮಾಡಿದರು. ಕಾಲೇಜಿನ ಪ್ರಾಧ್ಯಾಪಕ ಶಿವಶಂಕರ ಸುತಾರ, ರಂಗಾಯಣದ ವಿಶೇಷಾಧಿಕಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಇತರರು ಇದ್ದರು.

- - -

ಬಾಕ್ಸ್ * ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಲಿ ಕಾಲೇಜು ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಜೈರಾಜ ಎಂ. ಚಿಕ್ಕಪಾಟೀಲ ಮಾತನಾಡಿ, ಕಲಾ ವಿದ್ಯಾರ್ಥಿಗಳು ಇತರೆ ಲಲಿತ ಕಲೆಯ ಬಗ್ಗೆ ಅಧ್ಯಯನ ಮಾಡಿ, ಎಲ್ಲವನ್ನೂ ತಿಳಿದಾಗ ನಿಮಗೆ ಬೇಕಾದಂತಹ ಕಲಾಕೃತಿಗಳ ಚಿತ್ರಣ ಮಾಡಬಹುದು. ದಾವಣಗೆರೆಯಲ್ಲಿ ನಡೆಯುವ ಬಹುತೇಕ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ದೃಶ್ಯಕಲಾ ಮಹಾವಿದ್ಯಾಲಯದ ಪಾಲ್ಗೊಳ್ಳುವ ಮತ್ತು ಪಾಲುದಾರಿಕೆ ಹೆಚ್ಚಾಗಿರುವುದು ಹೆಮ್ಮೆಯ ಸಂಗತಿ. ಸರ್ಕಾರಿ ಇಲಾಖೆಯ ಅನೇಕ ಕಾರ್ಯಕ್ರಮ ನಡೆಸಿಕೊಡಲಾಗಿದೆ. ಕಾಲೇಜು ದಾವಣಗೆರೆಯ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರ ಆಗಬೇಕೆಂಬುದು ತಮ್ಮ ಉದ್ದೇಶ ಎಂದು ತಿಳಿಸಿದರು.

- - - ಟಾಪ್‌ ಕೋಟ್‌

ಚಿತ್ರ ಕಲಾವಿದರ ದೃಷ್ಟಿ, ಆಲೋಚನೆ ವಿಶಾಲವಾಗಲು ರಂಗಭೂಮಿ, ಸಾಹಿತ್ಯದ ನಂಟು ಅತ್ಯಗತ್ಯ. ವಿಚಾರ ಮಂಥನವಾದಾಗ ಕ್ರಿಯಾಶೀಲತೆ ಮತ್ತು ಸೃಜನಶೀಲತೆ ಹೆಚ್ಚುತ್ತದೆ. ಚಿತ್ರಕಲೆಯಲ್ಲಿ ಆಪ್ತತೆಯೂ ಮೂಡುತ್ತದೆ. ಅದು ಜನರಿಗೂ ಇಷ್ಟವಾಗುತ್ತದೆ. ಚಿತ್ರಕಲಾವಿದರು ಶಿಬಿರದ ಸದುಪಯೋಗ ಪಡೆಯಬೇಕು

- ದತ್ತಾತ್ರೇಯ ಎನ್. ಭಟ್, ಹಿರಿಯ ಪ್ರಾಧ್ಯಾಪಕ, ದೃಶ್ಯಕಲಾ ಮಹಾವಿದ್ಯಾಲಯ

- - - -5ಕೆಡಿವಿಜಿ1.ಜೆಪಿಜಿ:

ದಾವಣಗೆರೆ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಬುಧವಾರ ರಾಷ್ಟ್ರೀಯ ವೃತ್ತಿ ರಂಗೋತ್ಸವ-2025 ಅಂಗವಾಗಿ ಲಾಂಛನ ಬಿಡುಗಡೆ ಮಾಡಲಾಯಿತು. ವೃತ್ತಿ ರಂಗಭೂಮಿ ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ, ಉಪ ವಿಭಾಗಾಧಿಕಾರಿ ಸಂತೋಷ ಪಾಟೀಲ ಇತರರು ಇದ್ದರು.

Share this article