ಗದಗ: ಜಿಲ್ಲೆಯಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಜನನ ಮತ್ತು ಮರಣ ನೋಂದಣಿ ಪ್ರಕ್ರಿಯೆ ಯಾವುದೇ ಕಾರಣಕ್ಕೂ ವಿಳಂಬವಾಗಬಾರದು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜನನ- ಮರಣ ನೋಂದಣಿ ಪದ್ಧತಿಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜನನ ಮತ್ತು ಮರಣ ನೋಂದಣಿ ಪ್ರಕ್ರಿಯೆಯಲ್ಲಿ ಸರಿಯಾಗಿ ಮಾಹಿತಿದಾರರ ಹೆಸರು ಮತ್ತು ಸಹಿ ಸಂಗ್ರಹಿಸಬೇಕು. ಅರ್ಜಿದಾರರ ಶುಲ್ಕವನ್ನು ನಿಯಮಿತವಾಗಿ ಸರ್ಕಾರಕ್ಕೆ ಜಮೆ ಮಾಡಬೇಕು. ನೋಂದಣಿ ಪ್ರಮಾಣ ಪತ್ರದಲ್ಲಿ ನೋಂದಣಾಧಿಕಾರಿಗಳ ಸಹಿ ಕಡ್ಡಾಯವಾಗಿರಬೇಕು. ಪ್ರಾಧಿಕಾರದ ಅನುಮತಿ ಇಲ್ಲದೇ ವಿಳಂಬ ನೋಂದಣಿ ಮಾಡಬಾರದು. ವಿನಾಕಾರಣ ವಿಳಂಬ ನೋಂದಣಿ ಮಾಡಿದರೆ ಶಿಸ್ತುಕ್ರಮ ಜರುಗಿಸಲಾಗುವುದು. ಕಾನೂನು ವರದಿಗಳಲ್ಲಿ ನೋಂದಣಿ ಸಂಖ್ಯೆ ಮತ್ತು ನೋಂದಣಿ ದಿನಾಂಕ ನಮೂದು ಮಾಡಬೇಕು. ತಹಸೀಲ್ದಾರರ ನೇತೃತ್ವದಲ್ಲಿ ತಾಲೂಕು ಮಟ್ಟದ ಜನನ ಮತ್ತು ಮರಣ ಸಮನ್ವಯ ಸಮಿತಿ ಸಭೆಗಳನ್ನು ನಿಯಮಿತವಾಗಿ ಜರುಗಿಸಬೇಕು ಎಂದು ನಿರ್ದೇಶನ ನೀಡಿದರು.ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎ.ಎ. ಕಂಬಾಳಿಮಠ ಮಾತನಾಡಿ, ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ 330 ನೋಂದಣಿ ಘಟಕಗಳು, 367 ಉಪ ನೋಂದಣಿ ಘಟಕಗಳು ಹಾಗೂ ನಗರ ಪ್ರದೇಶಗಳಲ್ಲಿ 9 ನೋಂದಣಿ ಘಟಕ, 12 ಉಪ ನೋಂದಣಿ ಘಟಕಗಳಿವೆ. ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಲೆಕ್ಕಿಗರು ನೋಂದಣಾಧಿಕಾರಿ ಆಗಿರುತ್ತಾರೆ. ಪಿಡಿಒ ಮತ್ತು ಸಿಎಚ್‌ಸಿ ಮುಖ್ಯಸ್ಥರು ಉಪನೋಂದಣಾಧಿಕಾರಿಗಳಾಗಿರುತ್ತಾರೆ. ನಗರ ಪ್ರದೇಶದಲ್ಲಿ ಆರೋಗ್ಯ ನಿರೀಕ್ಷಕರು ನೋಂದಣಾಧಿಕಾರಿ ಆಗಿದ್ದು, ಆಸ್ಪತ್ರೆಯ ಮುಖ್ಯಸ್ಥರು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಉಪ ನೋಂದಣಾಧಿಕಾರಿ ಆಗಿರುತ್ತಾರೆ. ನಮೂನೆ 1 – ಜನನ, ನಮೂನೆ 2 -ಮರಣ, ನಮೂನೆ 3 - ನಿರ್ಜೀವ ಜನನ ಇವುಗಳನ್ನು ಕಡ್ಡಾಯವಾಗಿ ಇ- ಜನ್ಮ ತಂತ್ರಾಂಶದಲ್ಲಿ ಅಪ್ ಲೋಡ್ ಮಾಡಬೇಕು ಎಂದರು.
ಆಸ್ಪತ್ರೆಯಲ್ಲಿ ಮರಣ ಪ್ರಕರಣಗಳಿದ್ದರೆ ನಮೂನೆ–4 (cause of death)ನ್ನು ಒಂದು ತಿಂಗಳೊಳಗೆ ಕಳುಹಿಸಬೇಕು ಎಂದರು. 2013ರಿಂದ 2024ರ ವರೆಗೆ ಜಿಲ್ಲೆಯಲ್ಲಿ ನೋಂದಣಿಯಾದ ಜನನ, ಮರಣ, ಶಿಶು ಮರಣ ಹಾಗೂ ನಿರ್ಜೀವ ಜನನಗಳ ವಿವರಗಳನ್ನು ಸಭೆಯ ಗಮನಕ್ಕೆ ತಂದರು. ಜನವರಿ 2025ರಿಂದ ಮಾರ್ಚ್ 2025ರ ವರೆಗೆ ಜಿಲ್ಲೆಯಲ್ಲಿ 2170 ಜನನ-ಮರಣ ನಿಗದಿತ ಸಮಯದಲ್ಲಿ ನೋಂದಣಿಯಾಗಿವೆ. 124 ಘಟನೆಗಳು 21 ದಿನಗಳ ಮೇಲೆ 30 ದಿನಗಳೊಳಗೆ ನೋಂದಣಿಯಾಗಿವೆ. 470 ಘಟನೆಗಳು 30 ದಿನಗಳ ಮೇಲೆ ಒಂದು ವರ್ಷದೊಳಗೆ ನೋಂದಣಿಯಾಗಿವೆ. 395 ಘಟನೆಗಳು ಒಂದು ವರ್ಷದ ಮೇಲ್ಪಟ್ಟು ನೋಂದಣಿಯಾಗಿವೆ. ಜನವರಿ 2025ರಿಂದ ಮಾರ್ಚ್ 2025ರ ವರೆಗೆ ಮರಣ ವಿಳಂಬ ನೋಂದಣಿ ವಿವರ ಕುರಿತಂತೆ ಜಿಲ್ಲೆಯಲ್ಲಿ 1494 ಘಟನೆಗಳು ನಿಗದಿತ ಸಮಯದಲ್ಲಿ ನೋಂದಣಿಯಾಗಿವೆ. 173 ಘಟನೆಗಳು 21 ದಿನಗಳ ಮೇಲೆ 30 ದಿನಗಳೊಳಗಾಗಿ ನೋಂದಣಿಯಾಗಿವೆ. 382 ಘಟನೆಗಳು 30 ದಿನಗಳ ಮೇಲೆ ಒಂದು ವರ್ಷದ ಒಳಗಾಗಿ ನೋಂದಣಿಯಾಗಿವೆ. 173 ಘಟನೆಗಳು ಒಂದು ವರ್ಷದ ಮೇಲ್ಪಟ್ಟು ನೋಂದಣಿಯಾಗಿವೆ. 2024ನೇ ವರ್ಷದಲ್ಲಿ ತಾಲೂಕಾವಾರು ಜನನ, ಮರಣ ನೋಂದಣಿ, ಉಪನೋಂದಣಿ ಘಟಕಗಳಿಗೆ ತಪಾಸಣೆ ಮಾಡಲಾಗಿದೆ ಎಂದು ವಿವರಿಸಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ನೀಲಗುಂದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಪದ್ಮಾವತಿ ಜಿ., ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ವಸಂತ ಮಡ್ಲೂರ ಹಾಗೂ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಇದ್ದರು.