ಕಾರವಾರ: ಪ್ರಸ್ತುತ ಗುಡ್ಡಗಾಡು ಪ್ರದೇಶ ಮತ್ತು ಸೂಕ್ತ ರಸ್ತೆ ಸಂಪರ್ಕವಿಲ್ಲದ, ಬುಡಕಟ್ಟು ಸಮುದಾಯದ ಗ್ರಾಮದಲ್ಲಿನ ಗರ್ಭಿಣಿಯರಿಗೆ ಸುರಕ್ಷಿತ ಹೆರಿಗೆ ಮತ್ತು ಆರೋಗ್ಯಪೂರ್ಣ ಮಗುವಿನ ಜನನವಾಗುವ ನಿಟ್ಟಿನಲ್ಲಿ ಜನನಕ್ಕೆ ಕಾಯುವ ಮನೆಯ (Birth Waiting Homes) ಸೌಲಭ್ಯವನ್ನು ರಾಜ್ಯದ ಚಾಮರಾಜನಗರ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಸರ್ಕಾರ ಜಾರಿಗೆ ತಂದಿದೆ.
ಈ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಗರ್ಭಿಣಿಯರಿಗಾಗಿ 6 ಹಾಸಿಗೆಯ ಬೆಡ್ ಕಾಯ್ದಿರಿಸಿದ್ದು, ಗರ್ಭ ಧರಿಸಿ 38 ವಾರಗಳು ಅಥವಾ ಅದಕ್ಕೂ ಮೇಲ್ಪಟ್ಟ, ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾಗಲು ಸಾಧ್ಯವಾಗದ ಗುಡ್ಡಗಾಡು ಪ್ರದೇಶದ, ರಸ್ತೆ ಸಂಪರ್ಕ ಇಲ್ಲದ ಪ್ರದೇಶದ ಗರ್ಭಿಣಿ ಈ ಕೇಂದ್ರಕ್ಕೆ ದಾಖಲಾಗಬಹುದಾಗಿದೆ. ಆಕೆಗೆ ಜನನವಾಗುವವರೆಗೆ ಈ ಕೇಂದ್ರದಲ್ಲಿ ಆಕೆಗೆ ಮತ್ತು ಆಕೆಯ ಒಬ್ಬರು ಸಹಾಯಕರಿಗೆ ಉಚಿತ ಊಟ ಉಪಹಾರದೊಂದಿಗೆ ಉತ್ತಮ ರೀತಿಯ ಚಿಕಿತ್ಸೆ ಮತ್ತು ಆರೈಕೆಯ ಮೂಲಕ ಸುರಕ್ಷಿತವಾಗಿ ಹೆರಿಗೆಯಾಗುವಂತೆ ನೋಡಿಕೊಳ್ಳಲಾಗುವುದು.
ಈ ಕೇಂದ್ರದಲ್ಲಿ ದಾಖಲಾಗುವ ಮಹಿಳೆಗೆ ಎಲ್ಲಾ ರೀತಿಯಲ್ಲೂ ಸುರಕ್ಷತೆ ಒದಗಿಸುವ ದೃಷ್ಠಿಯಿಂದ ಈ ಯೋಜನೆಗಾಗಿಯೇ ಪ್ರತ್ಯೇಕವಾಗಿ ಒಬ್ಬರು ಶುಶ್ರೂಶಕರು ಮತ್ತು ಸೆಕ್ಯುರಿಟಿ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಕೂಡ ಯೋಜನೆಯಲ್ಲಿ ಅನುಮತಿ ನೀಡಲಾಗಿದ್ದು, ಹೆರಿಗೆಯಾಗುವವರೆಗೆ ಮತ್ತು ಜನನದ ನಂತರವೂ ಈ ಕೇಂದ್ರದಲ್ಲಿ ಹೆಚ್ಚಿನ ಮುತುವರ್ಜಿಯಿಂದ ಆರೈಕೆ ಮಾಡಲಾಗುವುದು.ಉತ್ತರ ಕನ್ನಡ ಜಿಲ್ಲೆಯಲ್ಲಿ ಜನನಕ್ಕೆ ಕಾಯುವ ಮನೆಯ ಸೌಲಭ್ಯವನ್ನು ಈಗಾಗಲೇ ಆಗಸ್ಟ್ ತಿಂಗಳಲ್ಲಿ ಜಾರಿಗೊಳಿಸಲಾಗಿದೆ. ಈ ಕೇಂದ್ರದಲ್ಲಿ ಪ್ರಸವ ಪೂರ್ವದಲ್ಲಿ ಮತ್ತು ಪ್ರಸವ ನಂತರ ಗರ್ಭಿಣಿ
ಮತ್ತು ನವಜಾತ ಶಿಶುಗಳಿಗೆ ಉತ್ತಮ ಆರೈಕೆ ನೀಡಲಾಗುತ್ತಿದೆ. ಪ್ರಸವ ಸಂದರ್ಭದಲ್ಲಿ ಯಾವುದೇ ಸಮಸ್ಯೆಗಳು ಕಂಡು ಬಂದಲ್ಲಿ ಸಕಾಲದಲ್ಲಿ ಹೆಚ್ಚಿನ ಚಿಕಿತ್ಸೆಗೆ ಸಮೀಪದ ಆಸ್ಪತ್ರೆಗಳಿಗೆ ಆ್ಯಂಬುಲೆನ್ಸ್ ಮೂಲಕ ಸ್ಥಳಾಂತರಿಸಿ ಗರ್ಭಿಣಿಯ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.ಇದುವರೆಗೆ 10 ಗರ್ಭಿಣಿಯರನ್ನು ಈ ಕೇಂದ್ರಗಳಲ್ಲಿ ದಾಖಲು ಮಾಡಿಕೊಳ್ಳಲಾಗಿದೆ. 8 ಗರ್ಭಿಣಿಯರಿಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸಲಾಗಿದೆ. ಪ್ರಸ್ತುತ ಇಬ್ಬರು ಮಹಿಳೆಯರು ಈ ಕೇಂದ್ರದಲ್ಲಿದ್ದಾರೆ ಎನ್ನುತ್ತಾರೆ ಆರ್.ಸಿಎಚ್ ಅಧಿಕಾರಿ, ಆರೋಗ್ಯ ಇಲಾಖೆ ಡಾ.ನಟರಾಜ್.