ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ವಚನ ಪಿತಾಮಹ ಫ.ಗು.ಹಳಕಟ್ಟಿ ಅವರ 144ನೇ ಜನ್ಮದಿನವನ್ನು ಆಚರಿಸಲಾಯಿತು.ತಾಲೂಕು ನಾಡಹಬ್ಬಗಳ ಆಚರಣಾ ಸಮಿತಿಯಿಂದ ನಡೆದ ಕಾರ್ಯಕ್ರಮದಲ್ಲಿ ಫ.ಗು.ಹಳಕಟ್ಟಿಯವರ ಭಾವಚಿತ್ರಕ್ಕೆ ಪುರ್ಷ್ಪಾಚನೆ ಮಾಡಿದ ಅತಿಥಿಗಳು ವಚನ ಸಾಹಿತ್ಯ ಸಂರಕ್ಷಣೆಯಲ್ಲಿ ಹಳಕಟ್ಟಿಯವರ ಪರಿಶ್ರಮವನ್ನು ಸ್ಮರಿಸಿದರು.
ತಾಲೂಕು ನಯನಜ ಕ್ಷತ್ರೀಯ ಸಮಾಜದ ಅಧ್ಯಕ್ಷ ಕೆ.ಎಂ.ಶಿವಪ್ಪ ಮಾತನಾಡಿ, ತಾಳೆಗರಿಗಳಲ್ಲಿ ದೂಳು ಹಿಡಿದು, ಹುಳುಹಿಡಿದು ಹಾಳಾಗುವ ಹಂತದಲ್ಲಿದ್ದ ವಚನ ಸಾಹಿತ್ಯವನ್ನು ಸಂಗ್ರಹಿಸಿ ಅಧ್ಯಯನ ಮಾಡಿ ಪರಿಷ್ಕರಿಸಿ ಅವುಗಳನ್ನು ಪ್ರಕಟಿಸುವ ಮೂಲಕ ಜನಸಾಮಾನ್ಯರಿಗೆ ತಲುಪಿಸುವ ಮಹತ್ತರ ಕಾರ್ಯವನ್ನು ಮಾಡಿದವರು ನಮ್ಮ ಹಳಕಟ್ಟಿ ಎಂದರು.ವೃತ್ತಿಯಲ್ಲಿ ವಕೀಲರಾಗಿದ್ದರೂ ವಚನ ಸಾಹಿತ್ಯಕ್ಕೆ ಮನಸೋತು ತಮ್ಮ ಬದುಕಿನ ಸಂಪೂರ್ಣ ಅವಧಿಯನ್ನು ವಚನ ಸಾಹಿತ್ಯ ಸಂರಕ್ಷಣೆ ಮತ್ತು ಮುದ್ರಣಕ್ಕೆ ಮೀಸಲಿಟ್ಟ ಹಳಕಟ್ಟಿ ಕರ್ನಾಟಕದ ಮ್ಯಾಕ್ಸಮುಲ್ಲರ್ ಎಂದೇ ಜನಜನಿತರಾಗಿದ್ದಾರೆ ಎಂದರು.
ಶಿವಾನುಭವ ಪತ್ರಿಕೆ ಹಾಗೂ ಶಿವಾನುಭವ ಗ್ರಂಥ್ರಮಾಲೆ ಸ್ಥಾಪಿಸಿ ವಚನ ಸಾಹಿತ್ಯವನ್ನು ಜನರಿಗೆ ತಲುಪಿಸುವ ಕೆಲಸ ಮಾಡಿದ ಹಳಕಟ್ಟಿ ತಾವು ಸಂಗ್ರಹಿಸಿದ ವಚನ ಸಾಹಿತ್ಯವನ್ನು ಮುದ್ರಿಸುವ ಸಂಕಲ್ಪದಿಂದ ಹಿತಚಿಂತಕ ಮುದ್ರಣಾಲಯ ಸ್ಥಾಪಿಸಿದರು. ಅಮೂಲ್ಯ ಸಾಹಿತ್ಯ ರತ್ನಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸಿದ ಹಳಕಟ್ಟಿ ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.ಸಮಾರಂಭದಲ್ಲಿ ಉಪ ತಹಸೀಲ್ದಾರ್ ಸೈಯದ್ ಅಸಮದುಲ್ಹಾ ಖಾದ್ರಿ, ಶಿರಸ್ತೇದಾರ್ ವೇಣುಗೋಪಾಲ್, ಕಂದಾಯ ಇಲಾಖೆಯ ಅಮೃತ್ ರಾಜ್, ಅಗ್ನಿಶಾಮಕ ಅಧಿಕಾರಿ ಚಂದ್ರಶೇಖರ್, ಆರೋಗ್ಯ ಇಲಾಖೆ ಶೀಳನೆರೆ ಸತೀಶ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮಂಜುನಾಥ್, ಉಪ ವಲಯ ಅರಣ್ಯಾಧಿಕಾರಿ ಶಿವಸಿದ್ದು, ಆಸರೆ ಸೇವಾ ಸಮಾಜದ ಹೆಚ್.ಬಿ.ಮಂಜುನಾಥ್, ಪರಿಶಿಷ್ಠ ಜಾತಿ ಮೋರ್ಚಾ ಅಧ್ಯಕ್ಷ ಯಾಲಾಕಪ್ಪ ಸೇರಿದಂತೆ ಹಲವರಿದ್ದರು.ಎನ್.ರಾಜೇಶ್‌ಗೆ ಮುಖ್ಯಮಂತ್ರಿ ಸೇವಾ ಪದಕ
ಮಳವಳ್ಳಿ: 2023-24ನೇ ಸಾಲಿನ ಅತಿಹೆಚ್ಚು ತೆರಿಗೆ ಸಂಗ್ರಹಣೆ ಮತ್ತು ಉತ್ತಮ ಕಾರ್ಯನಿರ್ವಹಣೆಗಾಗಿ ಮೈಸೂರಿನ ವಾಣಿಜ್ಯ ತೆರಿಗೆ ಉಪ ಆಯುಕ್ತ, ತಾಲೂಕಿನ ದಾಸನದೊಡ್ಡಿ ಗ್ರಾಮದ ಎನ್.ರಾಜೇಶ್‌ಗೆ ಮುಖ್ಯಮಂತ್ರಿ ಸೇವಾ ಪದಕ ಲಭಿಸಿದೆ. ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎನ್.ರಾಜೇಶ್ ಅವರಿಗೆ ಮುಖ್ಯಮಂತ್ರಿ ಸೇವಾ ಪದಕ ಮತ್ತು ಪ್ರಮಾಣ ಪತ್ರವನ್ನು ನೀಡಿ ಅಭಿನಂದಿಸಿದರು. 2014ನೇ ಬ್ಯಾಚಿನ ಕೆಎಎಸ್ ಅಧಿಕಾರಿಯಾದ ರಾಜೇಶ್ ಅವರು ತಾಲೂಕಿನ ದಾಸನದೊಡ್ಡಿ ಗ್ರಾಮದ ವಿ.ನಾರಾಯಣ ಮತ್ತು ಲಕ್ಷ್ಮಮ್ಮ ದಂಪತಿ ಪುತ್ರ, ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರಾಗಿ ಮಂಡ್ಯ ಮತ್ತು ಮಂಗಳೂರಿನಲ್ಲಿ ಕಾರ್ಯನಿರ್ವಹಿಸಿರುವ ಅವರು ಪ್ರಸ್ತುತ ಮೈಸೂರಿನಲ್ಲಿ ವಾಣಿಜ್ಯ ತೆರಿಗೆ ಉಪ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.