ಕನ್ನಡಪ್ರಭ ವಾರ್ತೆ ಬೇಲೂರು
ತಾಲೂಕಿನ ಹೆಬ್ಬಾಳು ಗ್ರಾಮ ಪಂಚಾಯತಿಯಲ್ಲಿ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ವಿಫಲವಾಗಿದೆ ಎಂದು ಗ್ರಾಮಸ್ಥರು ಮಂಗಳವಾರ ಕಚೇರಿ ಬಾಗಿಲಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.ಹೆಬ್ಬಾಳು ಗ್ರಾಮಸ್ಥರು ಕಚೇರಿಗೆ ಬೀಗ ಹಾಕಿದ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸಿಬ್ಬಂದಿ ಬೀಗ ಹಾಕಲು ತಡೆಯಲು ಯತ್ನಿಸಿದರು. ಈ ಸಂದರ್ಭದಲ್ಲಿ ಸಿಬ್ಬಂದಿ ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ಬಳಿಕ ಸ್ಥಳಕ್ಕೆ ಆಗಮಿಸಿ ಹೆಬ್ಬಾಳು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅವಿನಾಶ್‌ಗೆ ಕಚೇರಿ ಒಳಗೆ ಪ್ರವೇಶಿಸಲು ಮುಂದಾದ ಸಂದರ್ಭದಲ್ಲಿ ಮೊದಲು ಸಮಸ್ಯೆ ಇರುವ ಸ್ಥಳಕ್ಕೆ ಬನ್ನಿ ಎಂದು ಆಗ್ರಹಿಸಿ ಬೀಗ ಹಾಕಿ ಅಧಿಕಾರಿಯನ್ನು ಕರೆದುಕೊಂಡು ಹೋದರು. ಸುಮಾರು ೧೦ ಗಂಟೆಗೆ ಗ್ರಾಮ ಪಂಚಾಯತಿಗೆ ಬೀಗ ಹಾಕಿದ ಕಾರಣದಿಂದ ಮಧ್ಯಾಹ್ನ ೧೩ ಗಂಟೆ ತನಕ ಸಾರ್ವಜನಿಕರು ತಮ್ಮ ಕೆಲಸಗಳಿಗೆ ಪರದಾಟ ನಡೆಸುವಂತಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ರೈತ ಸಂಘದ ಬಸವರಾಜು, ಮಲ್ಲಿಕಾರ್ಜುನ ಮತ್ತು ಚಂದ್ರಶೇಖರ, ಹೆಬ್ಬಾಳು ಗ್ರಾಮ ಪಂಚಾಯತಿ ಇತ್ತೀಚಿನ ದಿನದಂದು ಜನತೆಗೆ ಯಾವುದೇ ಸೌಲಭ್ಯಗಳನ್ನು ನೀಡಲು ಸಂಪೂರ್ಣ ವಿಫಲವಾಗಿದೆ. ವಿದ್ಯುತ್ ದೀಪ, ಕುಡಿಯುವ ನೀರು ಸೇರಿದಂತೆ ರಸ್ತೆ ಚರಂಡಿಗಳ ನಿರ್ಮಾಣಕ್ಕೆ ಮಂದಗತಿ ಧೋರಣೆ ಅನುಸರಣೆ ಮಾಡುತ್ತಿದೆ. ವಿಶೇಷವಾಗಿ ಕಚೇರಿ ವೇಳೆ ಯಾವ ನೌಕರರು ಕೂಡ ಬರುತ್ತಿಲ್ಲ. ಸಮಸ್ಯೆ ಬಗ್ಗೆ ಕೇಳಿದರೆ ಉಡಾಫೆಯಿಂದ ಉತ್ತರ ನೀಡುತ್ತಾರೆ. ಈ ಕಾರಣದಿಂದಲೇ ಗ್ರಾಮಸ್ಥರು ಗ್ರಾಮ ಪಂಚಾಯತಿ ಕಚೇರಿಗೆ ಬೀಗ ಹಾಕಿದ್ದಾರೆ. ಈ ಬಗ್ಗೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮತ್ತು ಶಾಸಕರು ಗಮನ ನೀಡಬೇಕು ಇಲ್ಲವಾದರೆ ಮುಂದಿನ ದಿನದಂದು ಹೋರಾಟ ಉಗ್ರ ಸ್ವರೂಪ ಪಡೆಯುತ್ತದೆ ಎಂದು ಎಚ್ಚರಿಕೆ ನೀಡಿದರು.ಗ್ರಾಮಸ್ಥರಾದ ಆನಂದ ಕುಮಾರ್ ಮತ್ತು ಅಂಗಡಿ ಮೂರ್ತಿ ಮಾತನಾಡಿ, ಗ್ರಾಮ ಪಂಚಾಯತಿ ಜನತೆಗೆ ಸಿಗುವ ಸೌಲಭ್ಯಗಳ ನೀಡುತ್ತಿಲ್ಲ. ಮಹಿಳೆಯರು, ಬಡವರು, ಅಂಗವಿಕಲರು, ವಯೋವೃದ್ಧರು ನಿತ್ಯ ಅಲೆಬೇಕಾಗಿದೆ. ಗ್ರಾಮದಲ್ಲಿ ಅಸ್ವಚ್ಛತೆ ತಾಣವಾದ ಹಿನ್ನೆಲೆಯಲ್ಲಿ ಅನಾರೋಗ್ಯ ಕಾಡುತ್ತಿದೆ. ಈಗಾಗಲೇ ಹೆಬ್ಬಾಳು ಗ್ರಾಮದಲ್ಲಿ ಬಹುತೇಕರಿಗೆ ಡೆಂಘೀ ಕಾಯಿಲೆಯಿಂದ ನರಳುತ್ತಿದ್ದಾರೆ. ನಮಗೆ ಉಡಾಫೆಯಿಂದ ವರ್ತಿಸುವ ಅಧಿಕಾರಿಗಳು ಬೇಡ, ಇಲ್ಲಿನ ಅಭಿವೃದ್ಧಿ ಅಧಿಕಾರಿಯನ್ನು ಕೂಡಲೆ ಸ್ಥಳಾಂತರ ಮಾಡಬೇಕು ಇಲ್ಲವಾದರೆ ಹೋರಾಟ ಅನಿವಾರ್ಯ ಎಂದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಮೋಹನ್ ಬಾಬು, ಉಮೇಶ್ ದೊಡ್ಡಬ್ಯಾಡಿಗೆರೆ, ಶಿವರುದ್ರಯ್ಯ, ಪುಟ್ಟಣ್ಣಯ್ಯ, ರವಿ ಸೇರಿದಂತೆ ಮಹಿಳೆಯರು ಕೂಡ ಪ್ರತಿಭಟನೆ ಭಾಗವಹಿಸಿದ್ದರು.