ನರಗುಂದ: ವಿಶ್ವ ಸಂಸ್ಕೃತಿಗೆ ವಚನ ಸಂಸ್ಕೃತಿ ದಾರಿ ದೀಪವಾಗಿದೆ. 12ನೇ ಶತಮಾನದ ಬಸವಾದಿ ಶಿವಶರಣರು ತಮ್ಮ ವಚನಗಳ ಮೂಲಕ ಸಮಾಜಕ್ಕೆ ನೀಡಿದ ಕೊಡುಗೆ ಸರ್ವಕಾಲಿಕ ಎಂದು ಹಿರಿಯ ಉಪನ್ಯಾಸಕ ಪ್ರೋ. ಆರ್.ಎಚ್. ತಿಗಡಿ ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಶಾಂತಲಿಂಗ ಶ್ರೀಗಳು ಮಾತನಾಡಿ, ಮನೆ, ಮಠ,ಜಗುಲಿಗಳಲ್ಲಿ ಪೂಜಿಸುತ್ತಿದ್ದ ವಚನ ತಾಡೋಲೆಗಳನ್ನು ಹುಡುಕಿ ತಂದು ಸುಮಾರು 250 ವಚನಕಾರರ ಸಾಹಿತ್ಯ ಸರ್ವಕಾಲಿಕವಾಗುವಲ್ಲಿ ಹಳಕಟ್ಟಿಯವರ ಕೊಡುಗೆ ಅಪಾರವಾಗಿದೆ.ತಮ್ಮ ಮನೆ ಮಾರಿ ಹಿತಚಿಂತಕ ಮುದ್ರಣಾಲಯ ಆರಂಭಿಸಿ 1923ರಲ್ಲಿ ವಚನ ಶಾಸ್ತ್ರ ಸಾರ ಭಾಗ-1 ಪುಸ್ತಕ ಪ್ರಕಟಿಸಿ ಇಂದಿಗೆ ನೂರೊಂದು ವಸಂತಗಳು ಪೂರೈಸಿವೆ. ನಂತರ ನವಕರ್ನಾಟಕ ಎಂಬ ಪತ್ರಿಕೆಯ ಮೂಲಕ ಕನ್ನಡ ಜಾಗೃತಿ ಮೂಡಿಸಿ ಕನ್ನಡ ಕಟ್ಟುವ ಕೈಂಕರ್ಯ ಮಾಡಿದ್ದಾರೆ ಎಂದು ಹೇಳಿದರು.
ವಚನ ಚಳವಳಿಯ ಮೂಲಕ 12ನೇ ಶತಮಾನದಲ್ಲಿ ಲಿಂಗಾಯತ ಪರಂಪರೆ ಹುಟ್ಟು ಹಾಕಿದ ಬಸವಣ್ಣನವರ ಕುರಿತಾಗಿ ಕರ್ನಾಟಕ ಸರ್ಕಾರ ಪ್ರಕಟಿಸಿರುವ 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಲಿಂಗಾಯತ ಎಂದು ಬದಲಾವಣೆ ಮಾಡಿದ್ದು ಅತ್ಯಂತ ಮೌಲಿಕ ಹಾಗೂ ನ್ಯಾಯ ಸಮ್ಮತವಾಗಿದೆ. ಪ್ರಸ್ತುತ ಪಾಠದಲ್ಲಿ ಹಿಂದಿನ ತಪ್ಪು ಸರಿಪಡಿಸಿ ಇತಿಹಾಸಕ್ಕೆ ಚ್ಯುತಿಬಾರದಂತೆ ನೈಜ ಇತಿಹಾಸ ಪ್ರಕಟಿಸಲಾಗಿದೆ ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು.ಈ ಸಂದರ್ಭದಲ್ಲಿ ನಿವೃತ್ತ ಮುಖ್ಯೋಪಾಧ್ಯಯ ವೀರಯ್ಯ ಸಾಲಿಮಠ, ಔಷಧ ವರ್ತಕ ಮಹಾಂತೇಶ ಸಾಲಿಮಠ ಪ್ರಮುಖರು ಉಪಸ್ಥಿತರಿದ್ದರು.
ಬಸವರಾಜ ಮನೆನಕೊಪ್ಪ ಸ್ವಾಗತಿಸಿದರು, ಶ್ರೀಮಠದ ವ್ಯವಸ್ಥಾಪಕ ಮಹಾಂತೇಶ ಹಿರೇಮಠ ನಿರೂಪಿಸಿ ವಂದಿಸಿದರು.