ತೀರ್ಥಹಳ್ಳಿ: ತಂತಿ ಬೇಲಿ ಹಾರುವಾಗ ಆಯತಪ್ಪಿ ಬಿದ್ದ ಸುಮಾರು ಎಂಟು ವರ್ಷದ ಕಾಡೆಮ್ಮೆಯೊಂದು ಮೃತಪಟ್ಟ ಘಟನೆ ತಾಲೂಕಿನ ತಿರಳೇಬೈಲು ಗ್ರಾಮದಲ್ಲಿ ಭಾನುವಾರ ನಡೆದಿದೆ. ಮೇವು ಅರಸಿ ರಾತ್ರಿ ವೇಳೆ ಅಡಿಕೆ ತೋಟದ ಸಮೀಪಕ್ಕೆ ಬಂದಿದ್ದ ಕಾಡೆಮ್ಮೆ, ಬೆಳಗಿನ ಜಾವದವರೆಗೆ ತೋಟದಲ್ಲೇ ವಿಶ್ರಾಂತಿ ಪಡೆದಿತ್ತು. ಬೆಳಗ್ಗೆ ಮಾಲೀಕ ತೋಟಕ್ಕೆ ಬಂದಿದ್ದನ್ನು ಕಂಡು ಕಾಡೆಮ್ಮೆ ಓಡಲು ಯತ್ನಿಸಿದೆ. ಈ ವೇಳೆ ತೋಟದ ತಂತಿ ಬೇಲಿ ಹಾರುವಾಗ ಆಯತಪ್ಪಿ ಬಿದ್ದಿದೆ. ಹೊಟ್ಟೆ ಭಾಗಕ್ಕೆ ಪೆಟ್ಟು: ಬೇಲಿ ಹಾರುವಾಗ ಕಾಡೆಮ್ಮೆಯ ಹೊಟ್ಟೆಯ ಭಾಗದ ಸ್ನಾಯುಗಳಿಗೆ ಬಲವಾದ ಪೆಟ್ಟು ಬಿದ್ದಿತ್ತು. ನೆಲಕ್ಕೆ ಬಿದ್ದ ಕಾಡೆಮ್ಮೆ ಎದ್ದು ನಿಲ್ಲಲಾಗದೆ ಸಾವು ಬದುಕಿನ ನಡುವೆ ಹೋರಾಡುತ್ತಿತ್ತು. ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಗಾಯಗೊಂಡಿದ್ದ ಕಾಡೆಮ್ಮೆಗೆ ಹುಲ್ಲು, ನೀರು ಹಾಗೂ ಆಹಾರ ನೀಡಿ ಆರೈಕೆ ಮಾಡಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಸಂಜೆ ವೇಳೆಗೆ ಮೃತಪಟ್ಟಿದೆ.
ತೀರ್ಥಹಳ್ಳಿ ವಲಯ ಅರಣ್ಯ ಅಧಿಕಾರಿ ಸಂಜಯ್ ತಿಳಿಸಿದರು.