ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ತಾಲೂಕು ಕಚೇರಿ ಎದುರು ಸೇರಿದ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಘಟನೆ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಗೃಹಮಂತ್ರಿ ಜಿ.ಪರಮೇಶ್ವರ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ ಮಾತನಾಡಿ, ಒಂದೇ ಸಮಯದಲ್ಲಿ ವಿವಿಧೆಡೆಗಳಲ್ಲಿ ಕಾರ್ಯಕ್ರಮ ಆಯೋಜಿಸಿದರೆ ಭದ್ರತೆ ನೀಡುವುದು ಕಷ್ಟ. ಪೊಲೀಸರ ಮನವಿಯನ್ನು ಸರ್ಕಾರ ದಿಕ್ಕರಿಸಿ ಸಂಭ್ರಮೋತ್ಸವ ಆಯೋಜಿಸಿ 11 ಮಂದಿ ಸಾವಿಗೆ ಕಾರಣರಾಗಿದ್ದಾರೆ ಎಂದು ದೂರಿದರು.ಸರ್ಕಾರ ತಮ್ಮ ತಪ್ಪನ್ನು ಮುಚ್ಚಿಕೊಳ್ಳುವ ಸಲುವಾಗಿ ನಿಷ್ಠಾವಂತ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿ ತಮ್ಮ ದರ್ಪ ತೋರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಹೋರಾಟಗಾರ ಕೆ.ಎಸ್ ನಂಜುಂಡೇಗೌಡ ಮಾತನಾಡಿ, ರಾಜ್ಯ ಸರ್ಕಾರ ಆರ್‌ಸಿಬಿ ತಂಡವನ್ನು ಸನ್ಮಾನಿಸಲು ತೆಗೆದುಕೊಂಡ ಕೆಟ್ಟ ನಡವಳಿಕೆಯಿಂದ 11 ಮಂದಿ ಅಮಾಯಕರ ಸಾವಾಗಿದೆ. ಇದರಿಂದ 11 ಕುಟುಂಬಸ್ಥರು ಶೋಕದಲ್ಲಿದ್ದಾರೆ. ಇದರ ಹೊಣೆ ಹೊತ್ತು ರಾಜ್ಯ ಸರ್ಕಾರದ ಪ್ರಮುಖರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಮೂಲಕ ಸರ್ಕಾರ ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಟಿ.ಶ್ರೀಧರ್, ತಾಲೂಕು ಅಧ್ಯಕ್ಷ ಪೀ.ಹಳ್ಳಿ ರಮೇಶ್, ಪ್ರಧಾನ ಕಾರ್ಯದರರ್ಶಿ ಬಿ.ಸಿ.ಸಂತೋಷ್ ಕುಮಾರ್, ಬಲ್ಲೇನಹಳ್ಳಿ ಕೃಷ್ಣೇಗೌಡ, ಮಹದೇವು, ಮಂಜುನಾಥ್, ಉಮೇಶ್ ಕುಮಾರ್, ಎಂ.ವಿ ಕೃಷ್ಣ, ಚಂದಗಾಲ್ ಶಂಕರ್, ಮಂಜುನಾಥ್, ಸುನೀಲ್ ಸೇರಿದಂತೆ ಇತರರು ಭಾಗವಹಿಸಿದ್ದರು.