ತುಮಕೂರು: ದೇಶ ರಕ್ಷಣೆ ಮಾಡುತ್ತಿರುವ ಭಾರತೀಯ ಸೇನೆ ವಿರುದ್ಧ ಹೇಳಿಕೆ ನೀಡಿದ್ದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿರುವುದನ್ನು ಜಿಲ್ಲಾ ಬಿಜೆಪಿ ಸ್ವಾಗತಿಸಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ ಹೇಳಿದ್ದಾರೆ. ಲೋಕಸಭೆಯ ವಿರೋಧ ಪಕ್ಷದ ನಾಯಕನ ಜವಾಬ್ದಾರಿಯನ್ನು ಮರೆತಂತಿರುವ ರಾಹುಲ್ ಗಾಂಧಿ ಅವರು ಕೇವಲ ಪ್ರಚಾರ ಉದ್ದೇಶದಿಂದ ದೇಶ ವಿರೋಧಿ ಹೇಳಿಕೆಯನ್ನು ಹಿಂದೆಯೂ ನೀಡಿ ಕೋರ್ಟ್ ತರಾಟೆಗೆ ಒಳಗಾಗಿದ್ದರು. ಅದನ್ನು ಗಮನದಲ್ಲಿಟ್ಟುಕೊಳ್ಳದೆ ಪದೇಪದೆ ದೇಶ ವಿರೋಧಿ ಹೇಳಿಕೆಗಳನ್ನು ನೀಡುವ ಚಾಳಿ ಮುಂದುವರೆಸಿರುವುದನ್ನು ಜಿಲ್ಲಾ ಬಿಜೆಪಿ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.
ಕೋರ್ಟ್ ನೀಡಿರುವ ತೀರ್ಪನ್ನು ಕಡೆಗಣಿಸಿ ರಾಹುಲ್ ಗಾಂಧಿ ಸಹೋದರಿ ಪ್ರಿಯಾಂಕ ಗಾಂಧಿ ಅವರು ತಮ್ಮ ಸಹೋದರನ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವುದನ್ನು ಜಿಲ್ಲಾ ಬಿಜೆಪಿ ಖಂಡಿಸುತ್ತದೆ. ಅವರುಗಳ ಹೇಳಿಕೆ ಕಾಂಗ್ರೆಸ್ ಸಂಸ್ಕೃತಿಯನ್ನು ತೋರಿಸುತ್ತದೆ. ರಾಹುಲ್ ಗಾಂಧಿ ಅವರಿಗೆ ಉತ್ತಮ ವೈದ್ಯರ ಸಲಹೆ ಅಗತ್ಯವಿದೆ. ದೇಶ ವಿರೋಧಿ ಹೇಳಿಕೆ ನೀಡುವುದನ್ನು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್‌ನವರು ಕೈ ಬಿಡಬೇಕು ಎಂದು ಒತ್ತಾಯಿಸಿದ್ದಾರೆ.