ಅಧಿವೇಶನದಲ್ಲಿ ಬಿಜೆಪಿ-ದಳ ಒಂದಾಗಿ ಹೋರಾಟ

KannadaprabhaNewsNetwork |  
Published : Aug 09, 2026, 02:00 AM IST
ಜೆಡಿಎಸ್‌ ಪಾದಯಾತ್ರೆ | Kannada Prabha

ಸಾರಾಂಶ

ಮುಂಬರುವ ರಾಜ್ಯ ವಿಧಾನ ಮಂಡಲ ಅಧಿವೇಶನದಲ್ಲಿ ಮೈತ್ರಿಪಕ್ಷಗಳಾದ ಬಿಜೆಪಿ-ಜೆಡಿಎಸ್‌ ಒಟ್ಟಾಗಿ ಆಡಳಿತಾರೂಢ ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಹೋರಾಡಲು ತೀರ್ಮಾನಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮುಂಬರುವ ರಾಜ್ಯ ವಿಧಾನ ಮಂಡಲ ಅಧಿವೇಶನದಲ್ಲಿ ಮೈತ್ರಿಪಕ್ಷಗಳಾದ ಬಿಜೆಪಿ-ಜೆಡಿಎಸ್‌ ಒಟ್ಟಾಗಿ ಆಡಳಿತಾರೂಢ ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಹೋರಾಡಲು ತೀರ್ಮಾನಿಸಲಾಗಿದೆ.

ಉಭಯ ಸದನದಲ್ಲಿ ಬಿಡದಿ ಟೌನ್‌ ಶಿಪ್‌ ಯೋಜನೆ, ನೈಸ್‌ ಯೋಜನೆ ಅಕ್ರಮಗಳು, ಬರಗಾಲ, ಕೆಪಿಎಸ್ಸಿ ಹಗರಣ, ಭ್ರಷ್ಟಾಚಾರ, ಬರಗಾಲ ಸೇರಿ ಹಲವು ವಿಚಾರಗಳ ಬಗ್ಗೆ ಪ್ರಸ್ತಾಪಿಸಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಉಭಯ ಪಕ್ಷಗಳ ನಾಯಕರು ನಿರ್ಧರಿಸಿದ್ದಾರೆ.

ಶನಿವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಬಿಜೆಪಿ-ಜೆಡಿಎಸ್‌ ನಾಯಕರ ಸಭೆಯಲ್ಲಿ ಈ ವಿಚಾರಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಗಿದೆ. ಯಾವ ವಿಚಾರಗಳನ್ನು ಪ್ರಸ್ತಾಪಿಸಬೇಕು? ಸರ್ಕಾರವನ್ನು ಹೇಗೆ ಇಕ್ಕಟ್ಟಿಗೆ ಸಿಲುಕಿಸಬೇಕು ಎಂಬುದರ ಬಗ್ಗೆ ಉಭಯ ಪಕ್ಷಗಳ ನಾಯಕರು ಚರ್ಚಿಸಿದ್ದಾರೆ.

ಈ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ, ಮುಂಬರುವ ವಿಧಾನಮಂಡಲ ಕಲಾಪದಲ್ಲಿ ಬಿಡದಿ ಟೌನ್‌ಶಿಪ್‌ ವಿಷಯ ಹಾಗೂ ನೈಸ್ ಯೋಜನೆಯ ಅಕ್ರಮಗಳ ಬಗ್ಗೆ ಧ್ವನಿ ಎತ್ತಲು ನಿರ್ಧರಿಸಲಾಗಿದೆ. ಈ ಬಗ್ಗೆ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಒಮ್ಮತದಿಂದ ಹೋರಾಟ ನಡೆಸಲಿದೆ ಎಂದರು.

ಸರ್ಕಾರದ ವೈಫಲ್ಯಗಳ ಪ್ರಸ್ತಾಪ:

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೂ ಸರಿ ಇಲ್ಲ ಎಂಬುದಕ್ಕೆ ಅನೇಕ ನಿದರ್ಶನಗಳಿವೆ. ಸಂಪುಟ ವಿಸ್ತರಣೆಗೆ ತಿಂಗಳುಗಟ್ಟಲೆ ಸಮಯ ತೆಗೆದುಕೊಂಡರು. ಈಗ ಖಾತೆ ಹಂಚಿಕೆ ಕೂಡ ನಡೆದಿಲ್ಲ. ರಾಜ್ಯ ಹಿಂದೆಂದೂ ಸಿಲುಕಿರದಷ್ಟು ತೀವ್ರ ಬರಕ್ಕೆ ತುತ್ತಾಗಿದೆ. ಸರ್ಕಾರ ಜನರಿಗೆ ನೆರವಾಗುವಲ್ಲಿ ವಿಫಲವಾಗಿದೆ. ಈ ಬಗ್ಗೆಯೂ ಪ್ರಸ್ತಾಪಿಸಿ ಹೋರಾಟ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಬಿಡದಿ ವಿಚಾರದಲ್ಲಿ ಸದನದಲ್ಲೂ ಚರ್ಚೆ ಆಗಲೇಬೇಕು. ರೈತ ಮಹಿಳೆಯರ ಹೋರಾಟವನ್ನು ಇಡೀ ರಾಜ್ಯ ನೋಡುತ್ತಿದೆ. ರೈತರು ಭೂಮಿ ಕೊಡಲು ತಯಾರಿಲ್ಲ. ಕೇವಲ ರೈತರ ಭೂಮಿ ಲೂಟಿ ಒಡೆಯಲು ಆ ಯೋಜನೆ ಮಾಡುತ್ತಿದ್ದಾರೆ. ಈ ಬಗ್ಗೆ ಬಿಜೆಪಿ ನಾಯಕರ ಜೊತೆ ವಿಸ್ತೃತವಾಗಿ ಚರ್ಚೆ ನಡೆಸಿದ್ದೇನೆ ಎಂದರು.

ಅಂತೆಯೇ ವಾಲ್ಮೀಕಿ ಹಗರಣ, ಬೆಂಗಳೂರಿನಲ್ಲಿ ಅಸಮರ್ಪಕ ಕಸ ವಿಲೇವಾರಿ, ಕೆಪಿಎಸ್ಸಿ ಅಕ್ರಮಗಳು, ಪೊಲೀಸ್ ಇಲಾಖೆ ನೇಮಕಾತಿಯಲ್ಲಿ ನಡೆದಿರುವ ಅಕ್ರಮಗಳು, ಗೃಹಲಕ್ಷ್ಮಿ ಯೋಜನೆ ಹಣ ದುರ್ಬಳಕೆ ಮುಂತಾದ ವಿಷಯಗಳ ಬಗ್ಗೆ ಎರಡು ಪಕ್ಷಗಳು ದನಿ ಎತ್ತಲಿವೆ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಒಟ್ಟಾಗಿ ಹೋರಾಟ-ಅಶೋಕ್‌:

ವಿಪಕ್ಷ ನಾಯಕ ಆರ್‌.ಅಶೋಕ್‌ ಮಾತನಾಡಿ, ಅಧಿವೇಶನದಲ್ಲಿ ಬರಗಾಲ, ನೈಸ್‌, ಬಿಡದಿ ಟೌನ್‌ಶಿಪ್‌, ಕೆಪಿಎಸ್ಸಿ ಭ್ರಷ್ಟಾಚಾರ ಮೊದಲಾದ ವಿಷಯಗಳ ಬಗ್ಗೆ ಚರ್ಚಿಸಲಾಗುವುದು. ಇದಕ್ಕೆ ಜೆಡಿಎಸ್‌ ಸಂಪೂರ್ಣ ಸಹಕಾರ ನೀಡಲಿದೆ. ಮುಂದೆಯೂ ಪ್ರಮುಖವಾದ ಹೋರಾಟಗಳಲ್ಲಿ ಒಂದಾಗಿ ಕೆಲಸ ಮಾಡಲಿದ್ದೇವೆ. ಚುನಾವಣೆಯೂ ಸಮೀಪ ಇರುವುದರಿಂದ ಎಲ್ಲ ಸಂದರ್ಭದಲ್ಲಿ ಒಂದಾಗಿ ಹೋಗಲು ನಿರ್ಧರಿಸಲಾಗಿದೆ ಎಂದರು.

-ಕೋಟ್‌-

ಕೇಂದ್ರದ ಬಿಜೆಪಿ ನಾಯಕರನ್ನು ಈಗಾಗಲೇ ಭೇಟಿ ಮಾಡಿದ್ದು, ಎರಡೂ ಪಕ್ಷಗಳ ಸಮನ್ವಯಕ್ಕಾಗಿ ಸಮಿತಿ ರಚನೆಯಾಗಲಿದೆ. ಇದರಲ್ಲಿ ಎರಡೂ ಕಡೆಯಿಂದ ಐದು ಸದಸ್ಯರು ಇರಲಿದ್ದಾರೆ,

-ಆರ್‌.ಅಶೋಕ್‌, ವಿಧಾನಸಭೆ ಪ್ರತಿಪಕ್ಷ ನಾಯಕ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳಲ್ಲಿನ ಹೃದಯಾಘಾತಕ್ಕೆ ರಕ್ತನಾಳ ಸವೆತ ಕಾರಣ!
ಇಂದಿನಿಂದ 3 ದಿನ ಜೆಡಿಎಸ್‌ ‘ಬಿಡದಿ ಪಾದಯಾತ್ರೆ’