2028ಕ್ಕೆ ಮತ್ತೆ ಕಾಂಗ್ರೆಸ್ ಅಧಿಕಾರ: ಸಚಿವ ಬಸವಂತಪ್ಪ

KannadaprabhaNewsNetwork |  
Published : Aug 09, 2026, 02:00 AM IST
ಕ್ಯಾಪ್ಷನ8ಕೆಡಿವಿಜಿ43 ದಾವಣಗೆರೆ ತಾ.ಮಾಯಕೊಂಡದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ನೂತನ ಸಚಿವ ಕೆ.ಎಸ್. ಬಸವಂತಪ್ಪ ಮಾತನಾಡಿದರು. | Kannada Prabha

ಸಾರಾಂಶ

2028ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಚಿವ ಕೆ.ಎಸ್. ಬಸವಂತಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

- ನೂತನ ಸಚಿವರಾಗಿ ಆಯ್ಕೆ: ಮಾಯಕೊಂಡದಲ್ಲಿ ಅಭಿನಂದನಾ ಸಮಾರಂಭ । ಜಿಲ್ಲೆ ಅಭಿವೃದ್ಧಿಗೆ ಎಸ್ಸೆಸ್ಸೆಂ ಜತೆ ಕೈ ಜೋಡಿಸಿ ಶ್ರಮ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

2028ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಚಿವ ಕೆ.ಎಸ್. ಬಸವಂತಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕಿನ ಮಾಯಕೊಂಡ ಗ್ರಾಮದಲ್ಲಿ ಶನಿವಾರ ನೂತನ ಸಚಿವ ಕೆ.ಎಸ್. ಬಸವಂತಪ್ಪ ಅವರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ನೇತೃತ್ವದ ಸರ್ಕಾರ ಜನಪರ ಯೋಜನೆಗಳು, ಪಂಚ ಗ್ಯಾರಂಟಿ ಹಾಗೂ ರಾಜ್ಯದ ಅಭಿವೃದ್ಧಿ ಕಾರ್ಯಗಳು ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಜನಪರ ಕೆಲಸಗಳ ಮೂಲಕ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಕ್ಷೇತ್ರದ ಅಭಿವೃದ್ಧಿ ಮತ್ತು ರೈತರ ಹಿತರಕ್ಷಣೆಗೆ ಸರ್ಕಾರ ಬದ್ಧ ಎಂದರು.

ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ನೇತೃತ್ವದಲ್ಲಿ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿರುವ ಜನಪರ ಯೋಜನೆಗಳು ಮತ್ತು ನೀರಾವರಿ ಕಾರ್ಯಗಳು ಪಕ್ಷಕ್ಕೆ ಶ್ರೀರಕ್ಷೆ ಆಗಲಿವೆ. ಕ್ಷೇತ್ರದ ರೈತರ ಅನುಕೂಲಕ್ಕಾಗಿ ಕೆರೆ ತುಂಬಿಸುವ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಬಾಕಿ ಇರುವ ಕಾಮಗಾರಿಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂದರು.

ಮಾನವ ಜನ್ಮ ಎತ್ತಿದ ಮೇಲೆ ಸಮಾಜಕ್ಕೆ ಏನಾದರೂ ಒಳ್ಳೆಯ ಕೊಡುಗೆ ನೀಡಬೇಕು. ನಿಷ್ಠೆಯಿಂದ ಕೆಲಸ ಮಾಡುವ ಕಾರ್ಯಕರ್ತರ ಬೆನ್ನಿಗೆ ನಿಲ್ಲುವುದು ಕಾಂಗ್ರೆಸ್ ಪಕ್ಷದ ಶಕ್ತಿ. ಆರಂಭದ ದಿನಗಳಲ್ಲಿ ಎಚ್.ಆಂಜನೇಯ ಮಾರ್ಗದರ್ಶನದಲ್ಲಿ ಗೋಡೆಗಳಿಗೆ ಪೋಸ್ಟರ್ ಅಂಟಿಸುವ ಕೆಲಸ ಮಾಡುತ್ತಿದ್ದೆವು. ಎಷ್ಟು ಪೋಸ್ಟರ್ ಅಂಟಿಸಿದ್ದೇವೆ ಎಂದರೆ ಕೈಯಲ್ಲಿ ರೇಖೆಗಳೇ ಅಳಿಸಿಹೋಗಿದ್ದವು. ಒಮ್ಮೆ ಮಾಜಿ ಪ್ರಧಾನಿ ರಾಜೀವ್ ಗಾಂದಿ ದಾವಣಗೆರೆಗೆ ಆಗಮಿಸಿದ್ದಾಗ ಚೇರ್ ಹಾಕುವ ಕಾರ್ಯಕರ್ತರಾಗಿ ನಾವು ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದ್ದೆವು. ಅಂತಹ ನಿಷ್ಠಾವಂತ ಕಾರ್ಯಕರ್ತರ ಶ್ರಮವನ್ನು ಗುರುತಿಸಿ ನ್ಯಾಯ ಕೊಡುವ ಏಕೈಕ ಪಕ್ಷ ಎಂದರೆ ಅದು ಕಾಂಗ್ರೆಸ್ ಎಂದು ಹರ್ಷ ವ್ಯಕ್ತಪಡಿಸಿದರು.

22 ಕೆರೆ ತುಂಬಿಸುವ ಯೋಜನೆಗೆ ಆದ್ಯತೆ:

ಕ್ಷೇತ್ರದ ಅಭಿವೃದ್ಧಿ ಹಾಗೂ ರೈತರ ಹಿತರಕ್ಷಣೆಗೆ ತಮ್ಮ ಮೊದಲ ಆದ್ಯತೆ. ಮಾಯಕೊಂಡ ಕ್ಷೇತ್ರದಲ್ಲಿ 22 ಕೆರೆ ತುಂಬಿಸುವ ಯೋಜನೆ ಕಾಮಗಾರಿ ಕಳಪೆಯಾಗಿ, ಅಭಿವೃದ್ಧಿ ಕುಂಠಿತಗೊಂಡಿರುವುದು ತೀವ್ರ ನೋವು ತಂದಿದೆ. ಈಗಾಗಲೇ ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು, ಶೀಘ್ರದಲ್ಲೇ ಮರುಟೆಂಡರ್ ಕರೆದು ಕಾಮಗಾರಿ ಪೂರ್ಣಗೊಳಿಸಿ ರೈತರ ಮುಖದಲ್ಲಿ ಮಂದಹಾಸ ಮೂಡಿಸಲಾಗುವುದು ಎಂದು ಭರವಸೆ ನೀಡಿದರು.

ಗಾಂಧಿನಗರ ನನ್ನ ಜನ್ಮಭೂಮಿಯಾದರೆ, ಮಾಯಾಕೊಂಡ ನನ್ನ ಕರ್ಮಭೂಮಿ. ಈ ಕ್ಷೇತ್ರದ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುತ್ತೇನೆ. ನಮ್ಮ ಮಾಯಾಕೊಂಡ ಕ್ಷೇತ್ರ ಶೇ.100 ರಷ್ಟು ಗ್ರಾಮೀಣ ಪ್ರದೇಶವಾಗಿದ್ದು, ನಗರಸಭೆ ಅಥವಾ ಕಾರ್ಪೊರೇಷನ್ ವ್ಯಾಪ್ತಿಗೆ ಬರುವುದಿಲ್ಲ. ಹಿಂದುಳಿದಿರುವ ಈ ಕ್ಷೇತ್ರದಲ್ಲಿ ಮೂಲಸೌಕರ್ಯಗಳ ಕೊರತೆಯಿದ್ದು, ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಲ್ಲಿ ವಿನಂತಿ ಮಾಡುತ್ತೇನೆ ಎಂದರು.

ಬರ ವೀಕ್ಷಣೆ-ವರದಿ ಸಲ್ಲಿಕೆ:

ರಾಜ್ಯದಲ್ಲಿ ಎದುರಾಗಿರುವ ಭೀಕರ ಬರಗಾಲದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಸೂಚನೆಯಂತೆ ಭಾನುವಾರದಿಂದಲೇ ಕ್ಷೇತ್ರದಲ್ಲಿ ಭೇಟಿ ನೀಡಿ ಬರ ವೀಕ್ಷಣೆ ನಡೆಸಲಾಗುವುದು. ರೈತರ ಸಂಕಷ್ಟಗಳನ್ನು ಆಲಿಸಿ, ವರದಿಯನ್ನು ಸಿದ್ಧಪಡಿಸಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಿಗೆ ಸಲ್ಲಿಸಲಾಗುವುದು. ಜಿಲ್ಲೆಯ ಹಿರಿಯ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರೊಂದಿಗೆ ಕೈ ಜೋಡಿಸಿ ದಾವಣಗೆರೆ ಜಿಲ್ಲೆ ಹಾಗೂ ಮಾಯಾಕೊಂಡ ಕ್ಷೇತ್ರ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು.

ಕಾಂಗ್ರೆಸ್ ಹಿರಿಯ ನಾಯಕರಿಗೆ ಧನ್ಯವಾದ:

ತಮಗೆ ಸಚಿವ ಸ್ಥಾನ ಲಭಿಸಲು ಸಹಕರಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ರಾಜ್ಯ ಉಸ್ತುವಾರಿ ಸುರ್ಜೇವಾಲ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಸಚಿವ ಕೆ.ಎಚ್. ಮುನಿಯಪ್ಪ, ಮಾಜಿ ಸಚಿವ ಎಚ್.ಸಿ.ಮಹಾದೇವಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸೇರಿದಂತೆ ಪಕ್ಷದ ಎಲ್ಲ ಹಿರಿಯ ನಾಯಕರಿಗೆ ಧನ್ಯವಾದ ಅರ್ಪಿಸಿದರು.

ಸಮಾರಂಭದಲ್ಲಿ ಹೊನ್ನಾಳಿ ಶಾಸಕ ಡಿ. ಜಿ. ಶಾಂತನಗೌಡ, ಹರಿಹರ ಮಾಜಿ ಶಾಸಕ ಎಸ್.ರಾಮಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಟಿ.ಹನುಮಂತಪ್ಪ, ತಾಂಡ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಜಯದೇವ ನಾಯ್ಕ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಸ್.ಕೆ.ಚಂದ್ರಪ್ಪ, ಬಸವಾಪಟ್ಟಣ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಜಿ.ನಾಗರಾಜಪ್ಪ, ರಾಘವೇಂದ್ರ ನಾಯ್ಕ್, ಎಸ್.ವೆಂಕಟೇಶ್, ಯುವ ಕಾಂಗ್ರೆಸ್ ಅಧ್ಯಕ್ಷ ತರುಣ್, ಲೋಕೇಶ್, ಗೋವಿಂದಸ್ವಾಮಿ, ನಾರಾಯಣ ನಾಯ್ಕ್, ಗಂಗಾ ನಾಯ್ಕ್, ಜಯನಾಯ್ಕ್, ಮಂಜಾನಾಯ್ಕ್, ಕೊಪ್ಪದ ಮಂಜುನಾಥ್ ಇನ್ನಿತರರಿದ್ದರು.

- - -

(ಟಾಪ್‌ ಕೋಟ್‌)

ನಾನು ಮಂತ್ರಿಯಾದರೂ ಎಂದಿಗೂ ನಿಮ್ಮ ಮನೆಯ ಮಗ ಬಸವಂತಪ್ಪನಾಗಿಯೇ ಇರುತ್ತೇನೆ. ನಿಮ್ಮ ಕಷ್ಟಗಳಿಗೆ ಸದಾ ಸ್ಪಂದಿಸಲು ನಾನು ಸಿದ್ಧ. ನೀವು ಕರೆದರೆ ಓಡೋಡಿ ಬಂದು ನಿಮ್ಮ ಸೇವೆ ಮಾಡಲು, ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಲು ನಾನು ಯಾವಾಗಲೂ ಸಿದ್ಧನಿದ್ದೇನೆ.

- ಕೆ.ಎಸ್.ಬಸವಂತಪ್ಪ, ಸಚಿವ.

- - -

-8ಕೆಡಿವಿಜಿ43: ದಾವಣಗೆರೆ ತಾ. ಮಾಯಕೊಂಡದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ನೂತನ ಸಚಿವ ಕೆ.ಎಸ್. ಬಸವಂತಪ್ಪ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳಲ್ಲಿನ ಹೃದಯಾಘಾತಕ್ಕೆ ರಕ್ತನಾಳ ಸವೆತ ಕಾರಣ!
ಇಂದಿನಿಂದ 3 ದಿನ ಜೆಡಿಎಸ್‌ ‘ಬಿಡದಿ ಪಾದಯಾತ್ರೆ’