ಕನ್ನಡಪ್ರಭ ವಾರ್ತೆ ದಾವಣಗೆರೆ
ತಾಲೂಕಿನ ಮಾಯಕೊಂಡ ಗ್ರಾಮದಲ್ಲಿ ಶನಿವಾರ ನೂತನ ಸಚಿವ ಕೆ.ಎಸ್. ಬಸವಂತಪ್ಪ ಅವರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ನಾನು, ಬಸವಂತಪ್ಪ, ಬಿ.ದೇವೇಂದ್ರಪ್ಪ ಹಾಗೂ ಶಿವಗಂಗಾ ಬಸವರಾಜ್ ಸೇರಿದಂತೆ ಹಲವರು ಒಟ್ಟಾಗಿ ಚರ್ಚಿಸುತ್ತಿದ್ದೆವು. ಬಸವಂತಪ್ಪ ನಿಮಗೆ ಖಂಡಿತ ಅದೃಷ್ಟ ಒಲಿದು ಸಚಿವ ಸ್ಥಾನ ಸಿಗುತ್ತದೆ ಎಂದು ನಾವು ಹೇಳುತ್ತಿದ್ದೆವು. ಇಂದು ಆ ಅದೃಷ್ಟ ಬಸವಂತಪ್ಪರಿಗೆ ಒಲಿದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಸಂಸದೀಯ ಮತ್ತು ರಾಜಕೀಯ ಕ್ಷೇತ್ರದಲ್ಲಿ ರವೀಂದ್ರನಾಥ್, ಶಿವಶಂಕರಪ್ಪ, ಎಸ್.ಎಸ್. ಮಲ್ಲಿಕಾರ್ಜುನ ಹಾಗೂ ನಾಗಮ್ಮ ಕೇಶವಮೂರ್ತಿ ಅವರಂತಹ ಹಿರಿಯ ನಾಯಕರು ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಆದರೆ ಈ ಬಾರಿ ಗಾಂಧಿವಾದಿ ತತ್ವ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನದ ಅಡಿಯಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ಬಸವಂತಪ್ಪ ಅವರಿಗೆ ಈ ಮಹತ್ವದ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಈ ಐತಿಹಾಸಿಕ ಸಾಧನೆಗೆ ಕ್ಷೇತ್ರದ ಮತದಾರ ಪ್ರಭುಗಳು, ಕ್ಷೇತ್ರದ ಜನತೆ ಹಾಗೂ ಪಕ್ಷದ ವರಿಷ್ಠರೇ ಮುಖ್ಯ ಕಾರಣ ಎಂದರು.ನಾವು ಮೂರು ಬಾರಿ ಗೆದ್ದ 33 ಜನ ಶಾಸಕರು ಒಟ್ಟಾಗಿ ಹೈಕಮಾಂಡ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ್ ಹಾಗೂ ಸುರ್ಜೇವಾಲ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದೆವು. ಈ 33 ಜನರಲ್ಲಿ ಯಾರಾದರೂ ನಾಲ್ಕು ಜನರಿಗೆ ಸಚಿವ ಸ್ಥಾನ ನೀಡಿ ಎಂದು ಕೇಳಿದ್ದೇವೆಯೇ ವಿನಃ ನನಗೇ ಕೊಡಿ ಎಂದು ನಾನು ಎಲ್ಲೂ ಕೇಳಿರಲಿಲ್ಲ ಎಂದು ಸ್ಪಷ್ಟಪಡಿಸಿದರು.
ಬಸವಂತಪ್ಪನವರು ನಿರಂತರವಾಗಿ ಬಡವರ ಪರವಾಗಿ ಹೋರಾಟ ನಡೆಸುತ್ತಾ ಬಂದವರು. ಒಂದೇ ಒಂದು ದಿನವೂ ವಿಶ್ರಮಿಸದೇ ಪಕ್ಷ ಸಂಘಟನೆಗಾಗಿ ಓಡಾಡಿದ್ದಾರೆ. ಅವರ ಶ್ರಮಕ್ಕೆ ಇಂದು ಸಚಿವ ಸ್ಥಾನ ದೊರೆತಿದೆ. ಮಾಯಕೊಂಡ ಕ್ಷೇತ್ರದ ಶಾಸಕರಾಗಿ ಹಾಗೂ ಸಚಿವರಾಗಿ ಅವರು ಈ ಭಾಗದ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರು, ಇತರರು ಇದ್ದರು.
* ಬೈಕ್-ಕಾರ್ ರ‍್ಯಾಲಿ ಮೂಲಕ ಸಚಿವರಿಗೆ ಅದ್ಧೂರಿ ಸ್ವಾಗತ
ಇದೇ ವೇಳೆ ಮಾಯಕೊಂಡ ವಿಧಾನಸಭಾ ಕ್ಷೇತ್ರದ ನೂರಾರು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಟಾಕಿ ಸಿಡಿಸಿ, ಹೂವಿನ ಹಾರಗಳನ್ನು ಹಾಕಿ ಸಚಿವರನ್ನು ಅಭಿನಂದಿಸಿದರು. ಬೆಂಗಳೂರಿನಿಂದ ಜಿಲ್ಲೆಯ ಗಡಿ ಭಾಗವಾದ ನೀರ್ಥಡಿ ಗೇಟ್‌ವರೆಗೆ ಆಗಮಿಸಿದ ಸಚಿವ ಕೆ.ಎಸ್.ಬಸವಂತಪ್ಪ ಅವರಿಗೆ ಮಾರ್ಗದುದ್ದಕ್ಕೂ ವಿವಿಧೆಡೆ ಕಾರ್ಯಕರ್ತರು, ಮುಖಂಡರು ಹಾಗೂ ಅಭಿಮಾನಿಗಳು ಅಭಿನಂದಿಸಿದರು.ನೀರ್ಥಡಿ ಗ್ರಾಮದ ಗೇಟ್ ಬಳಿಯಿಂದ ಬೈಕ್ ಹಾಗೂ ಕಾರುಗಳ ಬೃಹತ್ ರ‍್ಯಾಲಿ ಮೂಲಕ ಸಚಿವರನ್ನು ಹೆಬ್ಬಾಳು ಟೋಲ್ ಬಳಿ ಕರೆತರಲಾಯಿತು. ಕಾರ್ಯಕರ್ತರು, ಆನಗೋಡು ಗ್ರಾಮದಲ್ಲಿಯೂ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಚಿವರಿಗೆ ಬೃಹತ್ ಸೇಬಿನ ಹಾರ ಹಾಕಿ ಅಭಿನಂದಿಸಿದರು.
- - -
-8ಕೆಡಿವಿಜಿ41: ದಾವಣಗೆರೆ ತಾ.ಮಾಯಕೊಂಡದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ನೂತನ ಸಚಿವ ಕೆ.ಎಸ್. ಬಸವಂತಪ್ಪ ಅವರಿಗೆ ಅವರ ಅಭಿಮಾನಿಗಳು ಬೃಹತ್ ಗಾತ್ರದ ಹಾರವನ್ನು ಹಾಕಿ ಅಭಿನಂದಿಸಿದರು.