ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸುವ ಕೆಲಸ ಮಾಡುವುದೇ ಪತ್ರಿಕಾ ಧರ್ಮ. ಅದೇ ಸಂವಿಧಾನದ ಆಶಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಖಾದ್ರಿ ಶಾಮಣ್ಣ ಟ್ರಸ್ಟ್‌ನಿಂದ ಶನಿವಾರ ಶೇಷಾದ್ರಿಪುರಂ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಉದಯ್ ಕುಮಾರ್ ಅವರಿಗೆ ‘ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ’ ಪ್ರದಾನ ಮಾಡಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಪತ್ರಿಕೋದ್ಯಮದ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ. ಪತ್ರಿಕೋದ್ಯಮ ಬಹಳ ಮುಖ್ಯವಾಗಿದ್ದು, ಅದು ಪ್ರಜಾಪ್ರಭುತ್ವದ ಜೀವಾಳ ಎಂದರು.ಸಂವಿಧಾನ ಪತ್ರಕರ್ತರಿಗೆ ಸ್ವಾತಂತ್ರ್ಯ ಕೊಟ್ಟಿದೆ. ಆ ಸ್ವಾತಂತ್ರ್ಯವನ್ನು ಸರಿಯಾಗಿ ಉಪಯೋಗಿಸದಿದ್ದರೆ ಪ್ರಜಾಪ್ರಭುತ್ವದ ಆಶಯಗಳನ್ನು ಈಡೇರಿಸಲು ಸಾಧ್ಯವಿಲ್ಲ. ಇತ್ತೀಚಿನ ವರ್ಷಗಳಲ್ಲಿ ಪತ್ರಿಕೋದ್ಯಮದ ದಾರಿ ಬದಲಾಗುತ್ತಿದೆ. ಕೆಲ ಪತ್ರಿಕೋದ್ಯಮ ಸಂಸ್ಥೆಗಳು ಅದರ ಮೌಲ್ಯಗಳನ್ನು ಎತ್ತಿಹಿಡಿಯುವಲ್ಲಿ ವಿಫಲವಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ಗಾಂಧೀಜಿ, ಜಯಪ್ರಕಾಶ್ ನಾರಾಯಣ, ರಾಮಮನೋಹರ ಲೋಹಿಯಾರಿಂದ ಪ್ರಭಾವಿತರಾಗಿದ್ದ ಖಾದ್ರಿ ಶಾಮಣ್ಣ ಅವರು ಹೋರಾಟಕ್ಕಾಗಿ ಸ್ವಾತಂತ್ರ್ಯ ಪೂರ್ವದಲ್ಲಿ ಎರಡು ಬಾರಿ, ಸ್ವಾತಂತ್ರ್ಯ ಪಡೆದ ನಂತರ ಮೂರು ಬಾರಿ ಜೈಲು ಸೇರಿದ್ದರು. ವ್ಯಕ್ತಿಗೆ ಮಾತ್ರವಲ್ಲ, ಚಳವಳಿಗಳಿಗೂ ಚಾರಿತ್ರ್ಯ ಇರಬೇಕು ಎಂಬುದು ಅವರ ನಂಬಿಕೆಯಾಗಿತ್ತು ಎಂದು ಹೇಳಿದರು.
ಪ್ರಶಸ್ತಿ ಸ್ವೀಕರಿಸಿದ ಉದಯಕುಮಾರ್ ಮಾತನಾಡಿ, ಕನ್ನಡವೇ ಅರ್ಥವಾಗದ ಊರಿನಿಂದ ಬಂದ ನನ್ನಲ್ಲಿ ಕನ್ನಡದ ಪ್ರೀತಿ ಹೇಗೆ ಹುಟ್ಟಿಕೊಂಡಿತು ಎಂಬುದು ಗೊತ್ತಿಲ್ಲ. ನಾನು ಬೆಂಗಳೂರಿಗೆ ಬರುವವರೆಗೆ ರಾಜಕುಮಾರ್ ಎಂಬ ಮೇರುನಟ ಇದ್ದಾರೆ ಎಂಬುದೂ ಗೊತ್ತಿರಲಿಲ್ಲ. ಬೆಂಗಳೂರಿಗೆ ಬಂದ ಮೇಲೆ ಇಲ್ಲಿನ ವಸತಿ ನಿಲಯಗಳಲ್ಲಿ ಇದ್ದುಕೊಂಡು ಎಲ್ಲವನ್ನೂ ಕಲಿತೆ ಎಂದು ಹಿಂದಿನ ದಿನಗಳನ್ನು ಸ್ಮರಿಸಿದರು.ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ವೂಡೇ ಪಿ.ಕೃಷ್ಣ, ಖಾದ್ರಿ ಶಾಮಣ್ಣ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಎಚ್.ಆರ್. ಶ್ರೀಶ ಉಪಸ್ಥಿತರಿದ್ದರು.