ಕನ್ನಡಪ್ರಭ ವಾರ್ತೆ ವಿಜಯಪುರ
ಸಂಸದ ರಮೇಶ ಜಿಗಜಿಣಗಿ ಅವರು ಆರು ಬಾರಿ ಆಯ್ಕೆಯಾಗಿದ್ದಾರೆ. ಕೇಂದ್ರದ ವ್ಯಾಪ್ತಿಗೆ ಬರುವ ಜಿಲ್ಲೆಯ ಯಾವ ಜ್ವಲಂತ ಸಮಸ್ಯೆಗಳನ್ನೂ ಬಗೆಹರಿಸಿಲ್ಲ. ಸಂಸತ್ತಿನಲ್ಲಿ ಅವುಗಳ ಬಗ್ಗೆ ಒಂದೂ ಪ್ರಶ್ನೆ ಕೇಳಿಲ್ಲ. ಹೀಗಾಗಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಆಯ್ಕೆ ಅಗತ್ಯವಾಗಿದೆ. ಆಲಗೂರ ಅವರು ಸಂಸದರಾಗಿ ಆಯ್ಕೆಯಾದ ಮೇಲೆ ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಳ ಕುರಿತು ಗೆಜೆಟ್ ನೋಟಿಫಿಕೇಶನ್ ಮಾಡಿಸಲು, ವಂದೇ ಭಾರತ ರೈಲು ಸೇವೆ ಪ್ರಾರಂಭಿಸಲು, ತೋಟಗಾರಿಕೆ, ಪ್ರವಾಸೋದ್ಯಮ ಸೇರಿದಂತೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯ ಕುರಿತು ಸಂಸತ್ತಿನಲ್ಲಿ ಧ್ವನಿ ಎತ್ತಿ ಕೆಲಸ ಮಾಡಲಿದ್ದಾರೆ. ಅವರನ್ನು ಮತ ಹಾಕಿದರೆ ನನಗೆ ಮತ ಹಾಕಿದಂತೆ ಎಂದು ಎಂ.ಬಿ.ಪಾಟೀಲ ಹೇಳಿದರು.
ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಮಾತನಾಡಿ, ರಾಜಧಾನಿ ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿದೆ. ಆದರೆ, ಭೀಕರ ಬರದ ನಡುವೆಯೂ ವಿಜಯಪುರ ನಗರದಲ್ಲಿ ನಮ್ಮಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿಲ್ಲ. ಇದಕ್ಕೆ ಸಚಿವ ಎಂ. ಬಿ. ಪಾಟೀಲ ಅವರು ಕೈಗೊಂಡಿರುವ ನೀರಾವರಿ ಯೋಜನೆಗಳೇ ಕಾರಣವಾಗಿವೆ. ರಾಜು ಆಲಗೂರ ಅವರನ್ನು ಗೆಲ್ಲಿಸಿ ಎಂ.ಬಿ.ಪಾಟೀಲರ ಕೈ ಬಲಪಡಿಸೋಣ ಎಂದು ಹೇಳಿದರು.ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಮಾತನಾಡಿ, ರಮೇಶ ಜಿಗಜಿಣಗಿ ಕಳೆದ 30 ವರ್ಷಗಳಲ್ಲಿ ಲೋಕಸಭೆಯಲ್ಲಿ ಯಾವುದೇ ಸಮಸ್ಯೆಗಳನ್ನು ಪ್ರಸ್ತಾಪಿಸಿಲ್ಲ. ಸರ್ಕಾರಗಳ ಗಮನ ಸೆಳೆದಿಲ್ಲ. ಈ ಬಾರಿ ಬದಲಾವಣೆ ಮಾಡಿ, ನನಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ನಿವೃತ್ತ ನೌಕರರ ಸಂಘದ ಮುಖಂಡ ಎಸ್. ಪಿ. ಬಿರಾದಾರ ಕಡ್ಲೆವಾಡ ಮಾತನಾಡಿದರು.ಕೆಪಿಸಿಸಿ ಮುಖಂಡ ಸಂಗಮೇಶ ಬಬಲೇಶ್ವರ ಮಾತನಾಡಿ, ಸಚಿವ ಎಂ.ಬಿ.ಪಾಟೀಲ ಅವರು ಬರದ ನಾಡಾಗಿದ್ದ ವಿಜಯಪುರ ಜಿಲ್ಲೆಯನ್ನು ಬಂಗಾರದ ನಾಡನ್ನಾಗಿ ಮಾಡಿದ್ದಾರೆ. ಈ ಬಾರಿ ಸುಶಿಕ್ಷಿತ ಪ್ರೊ.ರಾಜು ಆಲಗೂರ ಅವರನ್ನು ಗೆಲ್ಲಿಸುವ ಮೂಲಕ ಹೊಸ ಅಭಿವೃದ್ಧಿಗೆ ಕೈಜೋಡಿಸೋಣ ಎಂದು ಹೇಳಿದರು.
ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವಿದ್ಯಾರಾಣಿ ತುಂಗಳ, ಮುಖಂಡೆ ಸ್ನೇಹಲತಾ ಶೆಟ್ಟಿ, ಉದ್ಯಮಿ ರವೀಂದ್ರ ಬಿಜ್ಜರಗಿ ಮಾತನಾಡಿದರು. ಮುಖಂಡರಾದ ಬಿ. ಎಸ್. ಬಿರಾದಾರ, ನಾಗಠಾಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಹಜಹಾನ್ ಮುಲ್ಲಾ ಮುಂತಾದವರು ಉಪಸ್ಥಿತರಿದ್ದರು.