ಜನೌಷಧಿ ಕೇಂದ್ರ ಬಂದ್ ವಿರೋಧಿಸಿ ಬಿಜೆಪಿ ಮೌನ ಹೋರಾಟ

KannadaprabhaNewsNetwork |  
Published : May 31, 2025, 12:10 AM IST
30ಕೆಡಿವಿಜಿ18, 19-ದಾವಣಗೆರೆ ಜಿಲ್ಲಾಸ್ಪತ್ರೆ ಆವರಣದಲ್ಲಿ ಶುಕ್ರವಾರ ರಾಜ್ಯದ 207 ಜನೌಷಧ ಕೇಂದ್ರ ಮುಚ್ಚಲು ಹೊರಟ ರಾಜ್ಯ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಖಂಡಿಸಿ, ತೋಳಿಗೆ ಕಪ್ಪು ಪಟ್ಟಿ ಧರಿಸಿ ಬಿಜೆಪಿ ಜಿಲ್ಲಾ ಘಟಕದಿಂದ ಮೌನ ಪ್ರತಿಭಟನೆ ನಡೆಸಲಾಯಿತು. | Kannada Prabha

ಸಾರಾಂಶ

ಬಡವರಿಗೆ ಅನುಕೂಲವಾಗಲೆಂದು ಕೇಂದ್ರ ಸರ್ಕಾರ ಆರಂಭಿಸಿದ್ದ ಜನೌಷಧಿ ಕೇಂದ್ರಗಳನ್ನು ಮುಚ್ಚಲು ಹೊರಟ ರಾಜ್ಯ ಕಾಂಗ್ರೆಸ್ ಸರ್ಕಾರದ ಆದೇಶವನ್ನು ಖಂಡಿಸಿ ಬಿಜೆಪಿ ಜಿಲ್ಲಾ ಘಟಕ ದ ನೇತೃತ್ವದಲ್ಲಿ ಪಕ್ಷದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ತೋಳಿಗೆ ಕಪ್ಪು ಪಟ್ಟಿ ಧರಿಸಿಕೊಂಡು ನಗರದ ಜಿಲ್ಲಾ ಆಸ್ಪತ್ರೆ ಆ‍ವರಣದಲ್ಲಿ ಶುಕ್ರವಾರ ಮೌನ ಪ್ರತಿಭಟನೆ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ, ದಾವಣಗೆರೆ

ಬಡವರಿಗೆ ಅನುಕೂಲವಾಗಲೆಂದು ಕೇಂದ್ರ ಸರ್ಕಾರ ಆರಂಭಿಸಿದ್ದ ಜನೌಷಧಿ ಕೇಂದ್ರಗಳನ್ನು ಮುಚ್ಚಲು ಹೊರಟ ರಾಜ್ಯ ಕಾಂಗ್ರೆಸ್ ಸರ್ಕಾರದ ಆದೇಶವನ್ನು ಖಂಡಿಸಿ ಬಿಜೆಪಿ ಜಿಲ್ಲಾ ಘಟಕ ದ ನೇತೃತ್ವದಲ್ಲಿ ಪಕ್ಷದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ತೋಳಿಗೆ ಕಪ್ಪು ಪಟ್ಟಿ ಧರಿಸಿಕೊಂಡು ನಗರದ ಜಿಲ್ಲಾ ಆಸ್ಪತ್ರೆ ಆ‍ವರಣದಲ್ಲಿ ಶುಕ್ರವಾರ ಮೌನ ಪ್ರತಿಭಟನೆ ನಡೆ ಸಿದರು.

ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಇತರರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಬಡವರಿಗೆ ಆರಂಭಿಸಿದ್ದ ಜನೌಷಧಿ ಕೇಂದ್ರಗಳಿಗೆ ಎಳ್ಳು-ನೀ ರು ಬಿಡುವಂತೆ ಅವುಗಳನ್ನು ಮುಚ್ಚಲು ಹೊರಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಮೌನ ಪ್ರತಿಭಟನೆ ಮಾಡಲಾಯಿತು. ಇದೇ ವೇಳೆ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಬಡವರಿಗೆ ಕಡಿಮೆ ಬೆಲೆಗೆ ಔಷಧಿ, ಮಾತ್ರೆಗಳು ಸಿಗಲೆಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರಸರ್ಕಾರ ಜನೌಷಧಿ ಕೇಂದ್ರಗಳನ್ನು ಸ್ಥಾಪಿಸಿತ್ತು. ಶೇ.85ಕ್ಕಿಂತ ಕಡಿಮೆ ದರದಲ್ಲಿ ಜನರಿಗೆ ಅಗತ್ಯ ಎಲ್ಲಾ ರೀತಿಯ ಔಷಧಿಗಳು ಜನೌಷಧಿ ಕೇಂದ್ರದಲ್ಲಿ ಸಿಗುವಂತೆ ಮಾಡಿತ್ತು. ಆದರೆ, ದ್ವೇಷರಾಜಕಾರಣಗಳಿಂದ ರಾಜ್ಯದ 207 ಕೇಂದ್ರಗಳನ್ನು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ನಿಲ್ಲಿಸಿದೆ. ಇದಕ್ಕೆ ಸಿಎಂ ಸಿದ್ದರಾಮಯ್ಯ, ಆರೋಗ್ಯ ಸಚಿವ ದಿನೇಶ ಗುಂಡೂರಾವ್ ನಾಡಿನ ಜನತೆಗೆ ಉತ್ತರ ನೀಡಲಿ ಎಂದರು. ಕಾಂಗ್ರೆಸ್ ಸರ್ಕಾರದ ಆಳ್ವಿಕೆಯಲ್ಲಿ ದಿನ ನಿತ್ಯ ಬಳಕೆಯ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಅನ್ಯಾಯವಾಗಿ ಹಲವಾರು ತೆರಿಗೆಗಳನ್ನು ಹೇರುವ ಕೆಲಸವನ್ನೂ ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನೀತಿಯಿಂದಾಗಿ ಜನರು ಬದುಕುವುದೇ ದುಸ್ತರವಾಗಿದೆ. ಈ ಪರಿಸ್ಥಿತಿಯಲ್ಲಿ ಜನರಿಗೆ ಆಸರೆಯಾಗಿದ್ದ ಜನೌಷಧಿ ಕೇಂದ್ರಗಳನ್ನೇ ಮುಚ್ಚಲು ಹೊರಟಿದ್ದು ಜನ ವಿರೋಧಿ ಧೋರಣೆಯಾಗಿದೆ. ಜನರು ಆಹಾರವಿಲ್ಲದೇ ಬಾಳಬಹುದು. ಆದರೆ, ಔಷಧಿ, ಮಾತ್ರೆ ಇಲ್ಲದೇ ಬದುಕುವುದು ಕಷ್ಟವೆಂಬ ಅರಿವು ಸಹ ಆಳುವ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲವಾಯಿತೆ ಎಂದು ಅವರು ಪ್ರಶ್ನಿಸಿದರು. ರಾಜ್ಯದ ಸುಮಾರು 207 ಜನೌಷಧಿ ಕೇಂದ್ರಗಳನ್ನು ಮುಚ್ಚುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದನ್ನು ಗಮನಿಸಿದರೆ, ಔಷಧ ಕಂಪನಿಗಳೊಂದಿಗೆ ಬಹುದೊಡ್ಡ ಮಟ್ಟದಲ್ಲೇ ಡೀಲ್ ಮಾಡಿಕೊಂಡಿರುವ ಅನುಮಾನ ಕಾಡುತ್ತಿದೆ. ಈ ಮೂಲಕ ರಾಜ್ಯದ ಬಡವರ ಹಣವನ್ನು ಸರ್ಕಾರ ಲೂಟಿ ಮಾಡಲು ಹೊರಟಂತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಕೃಷಿ ಸಮ್ಮಾನ್, ರೈತ ವಿದ್ಯಾನಿಧಿ ಯೋಜನೆ ನಿಲ್ಲಿಸಿದ ಸಿದ್ದರಾಮಯ್ಯ ಸರ್ಕಾರ ಈಗ ಭಾಗ್ಯಲಕ್ಷ್ಮಿ ಬಾಂಡ್ ಸಹ ಸಮರ್ಪಕವಾಗಿ ನೀಡದೇ, ಬಡವರಿಗೆ ತೀವ್ರ ಅನ್ಯಾಯ ಮಾಡುತ್ತಿದೆ ಎಂದು ಅವರು ಆರೋಪಿಸಿದರು. ತನ್ನ ಗ್ಯಾರಂಟಿ ಯೋಜನೆಗಳನ್ನೇ ಮಹಾನ್ ಸಾಧನೆಯೆಂಬಂತೆ ಬಿಂಬಿಸಿಕೊಂಡು ಕಾಂಗ್ರೆಸ್ ಸರ್ಕಾರ ಬಡವರಿಗೆ ಘೋರ ಅನ್ಯಾಯ ಮಾಡುತ್ತಿದೆ. ಬಡವರ ಉನ್ನತಿಗೆ ಕಾಂಗ್ರೆಸ್ ಸರ್ಕಾರ ಕೆಲಸ ಮಾಡುತ್ತಿಲ್ಲ. ಜನರನ್ನು ಲೂಟಿ ಮಾಡುವುದಕ್ಕೇ ಅಧಿಕಾರಕ್ಕೆ ಬಂದಂತಿದೆ. ತಕ್ಷಣ‍ವೇ 207 ಜನೌಷಧಿ ಕೇಂದ್ರಗಳನ್ನು ಮುಚ್ಚುವ ಆದೇಶವನ್ನು ಹಿಂಪಡೆಯಬೇಕು. ಈ ಮೂಲಕ ಬಡವರಿಗೆ ಕಡಿಮೆ ದರದಲ್ಲಿ ಔಷಧಿ ದೊರೆಯುವಂತೆ ಮಾಡಬೇಕು. ಇಲ್ಲವಾದರೆ ಬಿಜೆಪಿಯಿಂದ ರಾಜ್ಯವ್ಯಾಪಿ ತೀವ್ರ ಸ್ವರೂಪದ ಹೋರಾಟ ನಡೆಸಬೇಕಾದೀತು ಎಂದು ಅವರು ಎಚ್ಚರಿಸಿದರು. ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿಲಕುಮಾರ ನಾಯ್ಕ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಆರ್.ಎಲ್.ಶಿವಪ್ರಕಾಶ, ಬಿ.ಎಂ.ಸತೀಶ ಕೊಳೇನಹಳ್ಳಿ, ಸಂಕೋಳ ಚಂದ್ರಶೇಖರ, ಪಿ.ಎಸ್.ಜಯಣ್ಣ, ಶಿವರಾಜ ಪಾಟೀಲ, ಎಲ್.ಎನ್.ಕಲ್ಲೇಶ, ರಾಜು ವೀರಣ್ಣ, ಪ್ರವೀಣ ಜಾಧವ್, ಪಂಜು ಪೈಲ್ವಾನ್, ಧನುಷ್ ರೆಡ್ಡಿ, ಎಚ್.ಪಿ.ವಿಶ್ವಾಸ್, ಬಿ.ಆನಂದ ಕೆಟಿಜೆ ನಗರ, ಪಿ.ಎಸ್.ಜಗದೀಶ ಕುಮಾರ ಪಿಸೆ, ನಸೀರ ಅಹಮ್ಮದ್, ನಿಟುವಳ್ಳಿ ಕೊಟ್ರೇಶ ಗೌಡ, ನವೀನ, ಕೆ.ಎನ್.ವೆಂಕಟೇಶ, ಕೆಟಿಜೆ ನಗರ ಲೋಕೇಶ ಇತರರು ಇದ್ದರು. - - - -30ಕೆಡಿವಿಜಿ18, 19.ಜೆಪಿಜಿ:

ದಾವಣಗೆರೆ ಜಿಲ್ಲಾಸ್ಪತ್ರೆ ಆವರಣದಲ್ಲಿ ಶುಕ್ರವಾರ ರಾಜ್ಯದ 207 ಜನೌಷಧ ಕೇಂದ್ರ ಮುಚ್ಚಲು ಹೊರಟ ರಾಜ್ಯ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಖಂಡಿಸಿ, ತೋಳಿಗೆ ಕಪ್ಪುಪಟ್ಟಿ ಧರಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ನೇತೃತ್ವದಲ್ಲಿ ಮೌನ ಪ್ರತಿಭಟನೆ ನಡೆಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌