ಬಿಜೆಪಿಯಿಂದ ಮಹಾತ್ಮಗಾಂಧಿ ಪರೋಕ್ಷ ಕೊಲೆ: ಚಲುವರಾಯಸ್ವಾಮಿ

KannadaprabhaNewsNetwork |  
Published : Jan 17, 2026, 02:30 AM IST
೧೬ಕೆಎಂಎನ್‌ಡಿ-೧ಮಂಡ್ಯದ ಪತ್ರಕರ್ತರ ಭವನದಲ್ಲಿ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಹೊಸ ಕಾಯ್ದೆಯನ್ವಯ ಕೇಂದ್ರ ಸರ್ಕಾರ ಶೇ.೬೦ ಹಾಗೂ ರಾಜ್ಯ ಸರ್ಕಾರ ಶೇ.೪೦ರಷ್ಟು ಅನುದಾನ ಭರಿಸಲಿದ್ದು, ಇದು ರಾಜ್ಯಗಳಿಗೆ ಹೊರೆಯಾಗಿ ಪರಿಣಮಿಸಿದೆ. ರಾಜ್ಯ ಸರ್ಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಎನ್‌ಡಿಎ ಸರ್ಕಾರ ಸರ್ವಾಧಿಕಾರಿ ಧೋರಣೆ ಮೂಲಕ ಹೊಸ ಕಾಯಿದೆಯನ್ನು ಜಾರಿಗೊಳಿಸಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಗಾಂಧಿ ಅವರ ಎದೆಗೆ ಗೋಡ್ಸೆ ಗುಂಡಿಕ್ಕಿ ಕೊಂದರೆ, ಗಾಂಧಿ ಹೆಸರಿನಲ್ಲಿರುವ ಯೋಜನೆಗಳನ್ನು ಅಳಿಸಿಹಾಕುವ ಮೂಲಕ ಬಿಜೆಪಿ ಪರೋಕ್ಷವಾಗಿ ಅವರನ್ನು ಹತ್ಯೆ ಮಾಡುತ್ತಿದೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಟೀಕಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಭಾರತಕ್ಕೆ ಸ್ವಾತಂತ್ರ್ಯ ಗಳಿಸಿಕೊಟ್ಟ ಮಹಾತ್ಮಗಾಂಧಿಯನ್ನು ವಿಶ್ವವೇ ಗೌರವಿಸುತ್ತಿದೆ. ಆದರೆ, ಬಿಜೆಪಿ ಅವರ ಹೆಸರಿನಲ್ಲಿರುವ ೩೦ ಯೋಜನೆಗಳಿಗೆ ತಿಲಾಂಜಲಿ ಹಾಡಿ ಅವರ ಹೆಸರನ್ನೇ ಸರ್ವನಾಶ ಮಾಡುತ್ತಿದೆ ಎಂದು ಕಟುವಾಗಿ ಹೇಳಿದರು.

ಮನರೇಗಾ ಯೋಜನೆಯನ್ನು ಬಿಜೆಪಿ ಸರ್ಕಾರ ಹಿಂದೊಮ್ಮೆ ನಿಷೇಧಿಸಲು ಯತ್ನಿಸಿತ್ತು. ನಂತರ ಸಂಸತ್‌ನಲ್ಲಿ ಗಲಾಟೆಯಾಗಿದ್ದರಿಂದ ಅದನ್ನು ಮುಂದೂಡಿದ್ದರು. ಇದೀಗ ಇಡೀ ಕಾಯ್ದೆಯನ್ನೇ ಸಮಗ್ರವಾಗಿ ಬದಲಾವಣೆ ಮಾಡಿ ಅದರ ಸ್ವರೂಪವನ್ನೇ ಬದಲಿಸಿದ್ದಾರೆ. ಈ ವಿಷಯವಾಗಿ ರಾಜ್ಯಗಳ ಅಭಿಪ್ರಾಯ ಸಂಗ್ರಹಿಸಲಿಲ್ಲ, ಗ್ರಾಪಂಗಳ ಸಲಹೆಗಳನ್ನು ಕೇಳಲಿಲ್ಲ, ಜನರು, ಜನಪ್ರತಿನಿಧಿಗಳೊಂದಿಗೆ ಚರ್ಚಿಸಲಿಲ್ಲ, ಸದನದಲ್ಲೂ ಚರ್ಚೆಗೆ ಸುದೀರ್ಘ ಅವಕಾಶ ನೀಡದೆ ತರಾತುರಿಯಲ್ಲಿ ಜಾರಿಗೆ ತಂದಿದ್ದಾರೆ ಎಂದು ಆರೋಪಿಸಿದರು.

ಪ್ರಧಾನಿಯಾಗಿದ್ದ ಡಾ.ಮನಮೋಹನ್‌ಸಿಂಗ್ ಜಾರಿಗೊಳಿಸಿದ್ದ ಮನರೇಗಾ ಯೋಜನೆ ಕೃಷಿ ಕೂಲಿಕಾರ್ಮಿಕರಿಗೆ ವರದಾನವಾಗಿತ್ತು. ಬರಗಾಲ, ಕೋವಿಡ್ ಸಮಯದಲ್ಲೂ ಹೆಚ್ಚುವರಿ ಕೆಲಸ ನೀಡುವುದಕ್ಕೆ ಅವಕಾಶವಿತ್ತು. ಕೇಂದ್ರ ಸರ್ಕಾರವೇ ನೂರಕ್ಕೆ ನೂರರಷ್ಟು ಅನುದಾನ ನೀಡುವ ಮೂಲಕ ಕನಿಷ್ಠ ವೇತನವನ್ನು ನಿಗದಿಗೊಳಿಸಿತ್ತು. ಆದರೆ, ಈ ಮಹತ್ವದ ಯೋಜನೆಯನ್ನು ಎನ್‌ಡಿಎ ಸರ್ಕಾರ ಸಮಾಧಿ ಮಾಡುತ್ತಿರುವುದಾಗಿ ಕಿಡಿಕಾರಿದರು.

ಹೊಸ ಕಾಯ್ದೆಯನ್ವಯ ಕೇಂದ್ರ ಸರ್ಕಾರ ಶೇ.೬೦ ಹಾಗೂ ರಾಜ್ಯ ಸರ್ಕಾರ ಶೇ.೪೦ರಷ್ಟು ಅನುದಾನ ಭರಿಸಲಿದ್ದು, ಇದು ರಾಜ್ಯಗಳಿಗೆ ಹೊರೆಯಾಗಿ ಪರಿಣಮಿಸಿದೆ. ರಾಜ್ಯ ಸರ್ಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಎನ್‌ಡಿಎ ಸರ್ಕಾರ ಸರ್ವಾಧಿಕಾರಿ ಧೋರಣೆ ಮೂಲಕ ಹೊಸ ಕಾಯಿದೆಯನ್ನು ಜಾರಿಗೊಳಿಸಿದೆ. ಹೊಸ ಕಾಯ್ದೆಯಲ್ಲಿ ಯಾವ ಪಂಚಾಯಿತಿ, ಯಾವ ಕೆಲಸ ತೆಗೆದುಕೊಳ್ಳಬೇಕು ಎನ್ನುವುದನ್ನು ಕೇಂದ್ರವೇ ನಿಗದಿಪಡಿಸಲಿದೆ. ಕೃಷಿ ಚಟುವಟಿಕೆ ಸಮಯದಲ್ಲಿ ೬೦ ದಿನಗಳ ಕಾಲ ರಜೆ ಘೋಷಿಸಿದೆ. ಇದರಿಂದ ಕೂಲಿ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಹಿಂದೆಲ್ಲಾ ಒಂದೊಂದು ಗ್ರಾಪಂ ಕನಿಷ್ಠ ಒಂದು ಕೋಟಿ ರು. ಕೆಲಸ ಮಾಡಬಹುದಿತ್ತು. ಆದರೆ, ಈಗ ಕೇಂದ್ರದ ನಿರ್ದೇಶನದಂತೆ ಕಾಮಗಾರಿ ಕೈಗೆತ್ತಿಕೊಳ್ಳಬೇಕಿದೆ. ಬಯೋಮೆಟ್ರಿಕ್ ಕೂಡ ಜಾರಿಗೊಳಿಸಿದೆ. ಈ ಹೊಸ ಕಾಯ್ದೆ ಜಾರಿಯಿಂದ ಭ್ರಷ್ಟಾಚಾರ ಇನ್ನಷ್ಟು ಹೆಚ್ಚಾಗಲಿದ್ದು, ರಾಜ್ಯಗಳಿಗೂ ಹೊರೆಯಾಗಲಿದೆ ಎಂದರು.

ಡಾ.ಮನಮೋಹನ್‌ಸಿಂಗ್ ಪ್ರಧಾನಿಯಾಗಿದ್ದ ಸಮಯದಲ್ಲಿ ದೇಶದ ಮೇಲೆ ೫೩ ಲಕ್ಷ ಕೋಟಿ ಸಾಲವಿದ್ದರೆ, ೧೧ ವರ್ಷದಲ್ಲಿ ಎನ್‌ಡಿಎ ಸರ್ಕಾರ ೩೦೦ ಲಕ್ಷ ಕೋಟಿ ರು. ಹೊರೆ ಹೊರಿಸಿದೆ. ೨೦೧೯ರಿಂದ ಕೇಂದ್ರ ಸರ್ಕಾರ ರಾಜ್ಯಕ್ಕೆ ೧.೨೬ ಲಕ್ಷ ಕೋಟಿ ರು. ನೀಡಬೇಕಿದೆ. ಇದುವರೆಗೂ ನಮಗೆ ಬರಬೇಕಾದ ಹಣ ನೀಡಿಲ್ಲ. ಬೆಂಗಳೂರು ಅಭಿವೃದ್ಧಿಗೆ ಘೋಷಿಸಿದ ೫ ಸಾವಿರ ಕೋಟಿ ರು., ಮಹದಾಯಿ ಯೋಜನೆಗೆ ಘೋಷಿಸಿದ ಹಣವನ್ನು ನೀಡದೆ ತಾರತಮ್ಯ ಧೋರಣೆ ಅನುಸರಿಸುತ್ತಿದೆ ಎಂದು ದೂಷಿಸಿದರು.

ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರು ಶೋಕಿಗಾಗಿ ಆಯ್ಕೆಯಾಗಿರುವಂತೆ ಕಂಡುಬರುತ್ತಿದ್ದಾರೆ. ಯಾರೂ ಪ್ರಧಾನಿ ಮೋದಿ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತುವ ಧೈರ್ಯ ಮಾಡುತ್ತಿಲ್ಲ. ಬಿಜೆಪಿ ಜೊತೆ ಕೈಜೋಡಿಸಿರುವ ಜೆಡಿಎಸ್ ಸಂಸದರೂ ಮೌನವಾಗಿದ್ದಾರೆ. ಅವರೆಲ್ಲರೂ ಸೇರಿ ರಾಜ್ಯಕ್ಕೆ ಹಾಗೂ ನಾಡಿನ ಜನರಿಗೆ ಮೋಸ ಮಾಡುತ್ತಿದ್ದಾರೆ. ಅವರಿಂದ ನ್ಯಾಯ ದೊರಕಿಸಿಕೊಡಲಾಗದಿದ್ದರೆ ನಾವು ಅಸಮರ್ಥರು ಎಂದು ಹೇಳಿ ರಾಜ್ಯದ ಜನರ ಕ್ಷಮೆ ಕೋರಲಿ ಎಂದು ಕಟುವಾಗಿ ಹೇಳಿದರು.

ಮನರೇಗಾ ಯೋಜನೆ ಉಳಿವಿಗಾಗಿ ರಾಜ್ಯಾದ್ಯಂತ ಅಭಿಯಾನ ನಡೆಸಲಾಗುವುದು. ಪ್ರತಿಭಟನೆ, ಪತ್ರಚಳವಳಿ, ಉಪವಾಸ ಸತ್ಯಾಗ್ರಹ, ಪಾದಯಾತ್ರೆ ಮೂಲಕ ಜನಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.

ಗೋಷ್ಠಿಯಲ್ಲಿ ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ದಿನೇಶ್ ಗೂಳಿಗೌಡ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ನಾಗೇಂದ್ರಬಾಬು, ವಿಜಯಲಕ್ಷ್ಮೀ, ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಎಂ.ಎಸ್.ಚಿದಂಬರ್, ಸಿ.ಎಂ.ದ್ಯಾವಪ್ಪ, ಶೈಲೇಂದ್ರ ಇದ್ದರು.

-----

ಸರ್ಕಾರಿ ಭೂಮಿ ಕಬಳಿಕೆಗೆ ಅವಕಾಶವಿಲ್ಲ: ಚಲುವರಾಯಸ್ವಾಮಿ

ಕನ್ನಡಪ್ರಭ ವಾರ್ತೆ ಮಂಡ್ಯ

ನಾಗಮಂಗಲ ತಾಲೂಕಿನಲ್ಲಿ ಸರ್ಕಾರಿ ಭೂಮಿ ಕಬಳಿಕೆಯಾಗದಂತೆ ಎಲ್ಲ ರೀತಿಯ ಕ್ರಮ ವಹಿಸಲಾಗಿದೆ. ದಾಖಲೆಗಳ ರಿಜಿಸ್ಟರ್ ಸ್ಕ್ಯಾನಿಂಗ್ ಆಗಿರುವುದರಿಂದ ಅದನ್ನು ಆಧರಿಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ನೋಂದಣಿಯಾಗಿರುವುದನ್ನೆಲ್ಲಾ ರದ್ದುಪಡಿಸಲಾಗುವುದು ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು.

ಲೋಕಾಯುಕ್ತ ಅಧಿಕಾರಿಗಳ ದಾಳಿಯಿಂದ ಈ ಪ್ರಕರಣದಲ್ಲಿ ನಾಗಮಂಗಲ ತಾಲೂಕು ಕಚೇರಿಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಹೊರಗಿನ ಹಲವು ವ್ಯಕ್ತಿಗಳು ಶಾಮೀಲಾಗಿರುವುದು ಕಂಡುಬಂದಿದೆ. ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಹಲವರನ್ನು ಅಮಾನತುಗೊಳಿಸಿ, ವರ್ಗಾವಣೆ ಮಾಡಿ ಇಲಾಖಾ ವಿಚಾರಣೆ ಕಾಯ್ದಿರಿಸಲಾಗಿದೆ. ಈ ವಿಚಾರವಾಗಿ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿದ್ದು, ದಾಖಲೆಗಳ ರಿಜಿಸ್ಟರ್ ಸ್ಕ್ಯಾನಿಂಗ್ ಆಗಿರುವುದರಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅನ್ಯರ ಹೆಸರಿಗೆ ಖಾತೆ ಮಾಡಿದ್ದರೆ ಅದನ್ನು ರದ್ದುಗೊಳಿಸುವುದಕ್ಕೆ ಅವಕಾಶವಿರುವುದಾಗಿ ತಿಳಿಸಿರುವುದರಿಂದ ಸರ್ಕಾರಿ ಭೂಮಿ ಅನ್ಯರ ಪಾಲಾಗುವುದಕ್ಕೆ ಬಿಡುವುದಿಲ್ಲ. ಒಂದು ವೇಳೆ ಖಾಸಗಿ ವ್ಯಕ್ತಿಗಳ ಹೆಸರಿಗೆ ನೋಂದಣಿಯಾಗಿದ್ದರೆ ಅದನ್ನು ರದ್ದುಗೊಳಿಸುವ ಭರವಸೆ ನೀಡಿದರು.

ಒಂದು ವರ್ಷದ ಹಿಂದೆ ಜಿಲ್ಲಾಧಿಕಾರಿ ಸರ್ಕಾರಕ್ಕೆ ನೀಡಿದ್ದ ವರದಿಯನ್ವಯ ೩೦೦ ಪ್ರಕರಣಗಳನ್ನು ರದ್ದುಗೊಳಿಸಲಾಗಿದ್ದು, ಉಳಿದ ೪೦೦ ಪ್ರಕರಣಗಳಲ್ಲಿ ಅಸ್ಪಷ್ಟತೆ ಇದ್ದುದರಿಂದ ಸಮಿತಿಗೆ ಕಳುಹಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಂದಾರ ಶಾಲೆಯಲ್ಲಿ ಸುಗ್ಗಿ ಹಬ್ಬದ ಸಂಭ್ರಮ
ಮೂಡುಬಿದಿರೆ ಸಿಂಥೆಟಿಕ್ ಟ್ರ್ಯಾಕ್ ಗೆ 11 ವರ್ಷ ಕ್ರೀಡಾಭಿಮಾನಿಗಳ ಹರ್ಷ