ಬಿಜೆಪಿ ಒಳಜಗಳ: ರಾಜ್ಯ ನಾಯಕರ ಎದುರು ಆರೋಪಗಳ ಸುರಿಮಳೆ

KannadaprabhaNewsNetwork |  
Published : Jan 14, 2025, 01:01 AM IST

ಸಾರಾಂಶ

ಮನೆಯೊಂದು ಮೂರು ಬಾಗಿಲಾದ ದಾವಣಗೆರೆ ಜಿಲ್ಲಾ ಬಿಜೆಪಿಯಲ್ಲಿ ಇದೀಗ ಹೊನ್ನಾಳಿ, ಚನ್ನಗಿರಿ, ಜಗಳೂರು ಮಂಡಲ ಅಧ್ಯಕ್ಷರ ಆಯ್ಕೆ ವಿಚಾರದ ನೆಪದಲ್ಲಿ ಜಿಲ್ಲೆಯ ವಾಸ್ತವ ಸ್ಥಿತಿ ಅರಿಯಲು ಬಂದಿದ್ದ ರಾಜ್ಯ ನಾಯಕರಿಗೆ ಜಿಲ್ಲೆಯಲ್ಲಿ ಪಕ್ಷದ ಸ್ಥಿತಿಗತಿ, ಯಾರು ಏನೆಲ್ಲಾ ಮಾಡಿದರೆಂಬ ಮಾಹಿತಿಯನ್ನು ಕಾರ್ಯಕರ್ತರೇ ಎಳೆಎಳೆಯಾಗಿ ಬಿಡಿಸಿಟ್ಟ ಘಟನೆ ವರದಿಯಾಗಿದೆ.

- ರಾಷ್ಟ್ರೀಯ ನಾಯಕರ ಸೂಚನೆ ಮೇರೆಗೆ ಆಗಮಿಸಿದ್ದ ಆರಗ, ಸರ್ಜಿ, ದತ್ತಾತ್ರೇಯ ತಂಡ - ರೇಣು-ಮಾಡಾಳ ಬಗ್ಗೆ ಬೇಸರ, ಮೂರು ತಾಲೂಕು ಅಧ್ಯಕ್ಷರ ಆಯ್ಕೆ ರದ್ದತಿಗೆ ಪಟ್ಟು - - - ಕನ್ನಡಪ್ರಭ ವಾರ್ತೆ ದಾವಣಗೆರೆ ಮನೆಯೊಂದು ಮೂರು ಬಾಗಿಲಾದ ದಾವಣಗೆರೆ ಜಿಲ್ಲಾ ಬಿಜೆಪಿಯಲ್ಲಿ ಇದೀಗ ಹೊನ್ನಾಳಿ, ಚನ್ನಗಿರಿ, ಜಗಳೂರು ಮಂಡಲ ಅಧ್ಯಕ್ಷರ ಆಯ್ಕೆ ವಿಚಾರದ ನೆಪದಲ್ಲಿ ಜಿಲ್ಲೆಯ ವಾಸ್ತವ ಸ್ಥಿತಿ ಅರಿಯಲು ಬಂದಿದ್ದ ರಾಜ್ಯ ನಾಯಕರಿಗೆ ಜಿಲ್ಲೆಯಲ್ಲಿ ಪಕ್ಷದ ಸ್ಥಿತಿಗತಿ, ಯಾರು ಏನೆಲ್ಲಾ ಮಾಡಿದರೆಂಬ ಮಾಹಿತಿಯನ್ನು ಕಾರ್ಯಕರ್ತರೇ ಎಳೆಎಳೆಯಾಗಿ ಬಿಡಿಸಿಟ್ಟ ಘಟನೆ ವರದಿಯಾಗಿದೆ.

ಬಿಜೆಪಿ ರಾಷ್ಟ್ರೀಯ ನಾಯಕರ ಸೂಚನೆ ಮೇರೆಗೆ ದಾವಣಗೆರೆಗೆ ಬಂದಿದ್ದ ಮಾಜಿ ಸಚಿವ ಆರಗ ಜ್ಞಾನೇಂದ್ರ, ವಿಪ ಸದಸ್ಯ ಧನಂಜಯ ಸರ್ಜಿ ಹಾಗೂ ರಾಜ್ಯ ಪ್ರಕೋಷ್ಟಗಳ ಸಂಚಾಲಕ ದತ್ತಾತ್ರೇಯ ಸಮ್ಮುಖದಲ್ಲಿ ಕೇಂದ್ರದ ಮಾಜಿ ಸಚಿವ, ಶಾಸಕರು, ಮಾಜಿ ಶಾಸಕರು, ಪರಾಜಿತ ಅಭ್ಯರ್ಥಿ, ಪಕ್ಷದ ಪದಾಧಿಕಾರಿಗಳು, ಹಿರಿಯ ಹಾಗೂ ಕಿರಿಯ ಕಾರ್ಯಕರ್ತರು ತಮ್ಮೆಲ್ಲಾ ಆಕ್ರೋಶ, ಅಸಮಾಧಾನ ತೋರಿದ್ದಾರೆ. ಆ ಮೂಲಕ ಇನ್ನಾದರೂ ಪಕ್ಷಕ್ಕೆ ಬಲ ತುಂಬುವ ಕೆಲಸ ಮಾಡುವಂತೆ ತಾಕೀತು ಮಾಡಿದ್ದಾರೆ.

ಬಿಜೆಪಿ ಸಿದ್ಧಾಂತ, ನಿಯಮಗಳನ್ನೇ ಗಾಳಿಗೆ ತೂರಿ, ಯಾರೋ ಒಂದಿಬ್ಬರು ವ್ಯಕ್ತಿಗಳ ತಾಳಕ್ಕೆ ತಕ್ಕಂತೆ ಹೊನ್ನಾಳಿ, ಚನ್ನಗಿರಿ, ಜಗಳೂರು ಮಂಡಲ ಅಧ್ಯಕ್ಷರ ಹೆಸರನ್ನು ರಾಜ್ಯ ಸಮಿತಿ ಘೋಷಣೆ ಮಾಡಿದ್ದು ಸರಿಯಲ್ಲ. ಎಂ.ಪಿ.ರೇಣುಕಾಚಾರ್ಯ, ಮಾಡಾಳ ಮಲ್ಲಿಕಾರ್ಜುನ ಹೇಳಿದವರಿಗೆ ಅಧ್ಯಕ್ಷರಾಗಿ ಮಾಡಿ, ಮಂಡಲ ಅಧ್ಯಕ್ಷರ ಆಯ್ಕೆಗೆ ಇದ್ದ ಪಕ್ಷದ ಪದ್ಧತಿಗೆ ತಿಲಾಂಜಲಿ ಇಟ್ಟಿದ್ದಾರೆ. ಪ್ರಾಮಾಣಿಕವಾಗಿ ದುಡಿದ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ. ತಕ್ಷಣವೇ ಮೂರೂ ತಾಲೂಕು ಅಧ್ಯಕ್ಷರ ಆಯ್ಕೆ ರದ್ಧುಪಡಿಸುವಂತೆ ಮೂರು ತಾಲೂಕಿನ ನೂರಾರು ಮುಖಂಡರು, ಕಾರ್ಯಕರ್ತರು ಒಕ್ಕೊರಲಿನಿಂದ ಒತ್ತಾಯಿಸಿದರು.

ಮಾಧ್ಯಮಗಳ ಮುಂದೆ ರೇಣುಕಾಚಾರ್ಯ ಪಕ್ಷದ ವಕ್ತಾರರಂತೆ ಹೇಳಿಕೆ ನೀಡುವುದು, ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಹೇಳಿಕೆ ನೀಡುತ್ತ ಪಕ್ಷಕ್ಕೆ ಮುಜುಗರ ತರುತ್ತಿದ್ದಾರೆ. ತಾಪಂ, ಜಿಪಂ, ನಗರಸಭೆ, ಪಾಲಿಕೆ ಚುನಾವಣೆ ಸಮೀಪಿಸುತ್ತಿದ್ದು, ರೇಣುಕಾಚಾರ್ಯ, ಮಾಡಾಳ ಮಲ್ಲಿಕಾರ್ಜುನ ಅವರಂಥವರಿಂದ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತಿದೆ. ಅರಿವು ಇಲ್ಲದವರಂತೆ ಮಾಧ್ಯಮಗಳ ಮುಂದೆ ಮಾತನಾಡುತ್ತಿದ್ದಾರೆ ಎಂದು ಕಾರ್ಯಕರ್ತರು ದೂರಿದರು.

ಪಕ್ಷದ ರಾಜ್ಯಾಧ್ಯಕ್ಷರು ಕಾರ್ಯಕರ್ತರನ್ನು ಜೊತೆಗಿಟ್ಟುಕೊಂಡು ಪಕ್ಷ ಸಂಘಟಿಸಬೇಕೇ ಹೊರತು, ಇಂತಹ ಪ್ರಚಾರ ಪ್ರಿಯರ ಜೊತೆಗಿಟ್ಟುಕೊಂಡಲ್ಲ. ಲೋಕಸಭೆ ಚುನಾವಣೆ ಮೇಲೆ ಇಂತಹವರ ಹೇಳಿಕೆ, ವರ್ತನೆಯಿಂದ ವ್ಯತಿರಿಕ್ತ ಪರಿಣಾಮ ಉಂಟಾಗಿದ್ದನ್ನು ಮರೆಯಬಾರದು. ಚನ್ನಗಿರಿ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ ಬಿಜೆಪಿಯವರ ಜೊತೆಗೆ ಜಿಲ್ಲಾ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಬಿಜೆಪಿಯ ಕೆಲವರ ಜೊತೆಗೆ ಕೈಜೋಡಿಸಿದ್ದಾಗಿ ಹೇಳಿಕೆ ನೀಡಿದ್ದ ದಾಖಲೆಗಳನ್ನು, ಸಂಸದೆ ಡಾ.ಪ್ರಭಾ ಅಭಿನಂದನಾ ಸಮಾರಂಭವೊಂದರಲ್ಲಿ ಬಿಜೆಪಿಯ ಕೆಲವರು ತಮ್ಮ ಗೆಲುವಿಗೆ ಸಹಕರಿಸಿದ್ದಾಗಿ ಹೇಳಿದ್ದ ಹೇಳಿಕೆ, ಪತ್ರಿಕಾ ತುಣುಕುಗಳನ್ನು ಸಹ ಕೆಲವರು ರಾಜ್ಯ ನಾಯಕ ಮುಂದೆ ಪ್ರದರ್ಶಿಸಿದರು.

ಲೋಕಸಭೆ ಚುನಾವಣೆ ಮುನ್ನಾ ದಿನವೇ ಮಾಜಿ ಸಚಿವ ಎಸ್.ಎ. ರವೀಂದ್ರನಾಥ ಮನೆಗೆ ಕಾಂಗ್ರೆಸ್ ಅಭ್ಯರ್ಥಿ ಹೋಗಿ, ಕಾಲಿಗೆ ಬಿದ್ದು ಆಶೀರ್ವಾದ ಪಡೆಯುವುದು, ಆ ಫೋಟೋ ಮಾಧ್ಯಮಗಳಿಗೆ ತಲುಪಿಸಿ, ಸೋಷಿಯಲ್ ಮೀಡಿಯಾಗಳಲ್ಲಿ ಹರಿಯಬಿಟ್ಟಿದ್ದನ್ನು ಮರೆಯಬಾರದು. ಹೀಗೆ ಪಕ್ಷ ವಿರೋಧಿಯಾಗಿ ವರ್ತಿಸಿದವರನ್ನೇ ರಾಜ್ಯಾಧ್ಯಕ್ಷರು ಜೊತೆಗಿಟ್ಟುಕೊಂಡಿದ್ದಾರೆ. ಶಾಮನೂರು ಶಿವಶಂಕರಪ್ಪ-ಬಿ.ಎಸ್. ಯಡಿಯೂರಪ್ಪ ಹೊಂದಾಣಿಕೆ ಬಿಜೆಪಿ ಇಲ್ಲಿದೆ. ಒಳಒಪ್ಪಂದದ ಬಿಜೆಪಿ ಅಧ್ಯಕ್ಷರನ್ನೇ ಆಯ್ಕೆ ಮಾಡಲಾಗಿದೆ. ಈಗ ತಾಲೂಕು ಅಧ್ಯಕ್ಷರ ಆಯ್ಕೆ ಬಗ್ಗೆಯೂ ನಮಗೆ ಸಮಾಧಾನವಾಗಿಲ್ಲ. ಈಗಿರುವ ಅಧ್ಯಕ್ಷರಿಗೆ ತಾಲೂಕು ಅಧ್ಯಕ್ಷರ ಆಯ್ಕೆ ಅಧಿಕಾರ ಕೊಟ್ಟವರು ಯಾರೆಂದು ಅನೇಕರು ಪ್ರಶ್ನಿಸಿದರು.

ಪಕ್ಷದ ಚುನಾವಣಾಧಿಕಾರಿ ಗಣೇಶ ಕಾರ್ನಿಕ್ ಇದ್ದಾರೆ. ತುಮಕೂರಿನ ಭೈರಪ್ಪ ಜಿಲ್ಲಾ ಚುನಾವಣಾಧಿಕಾರಿ ಆಗಿದ್ದಾರೆ. ಮಾಜಿ ಶಾಸಕ ಎಚ್.ಪಿ.ರಾಜೇಶ, ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್ ಸಹ ಇದ್ದಾರೆ. ಆದರೆ, ಇವರ ಪೈಕಿ ಯಾರ ಗಮನಕ್ಕೂ ತಾರದೇ, ತಾಲೂಕು ಅಧ್ಯಕ್ಷರ ಆಯ್ಕೆ ಮಾಡಿದ್ದಾದರೂ ಹೇಗೆ? ಇನ್ನು ಒಂದು ಸಲವೂ ಶಾಸಕರಾದ ಮಾಡಾಳ ಮಲ್ಲಿಕಾರ್ಜುನ ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ ಬಗ್ಗೆ ಹಗುರವಾಗಿ ಮಾತನಾಡುತ್ತಿರುವುದು ಸರಿಯಲ್ಲ. ಮಾಡಾಳ್‌ರ ಮತ್ತೊಬ್ಬ ಪುತ್ರನ ಮೇಲಿನ ಭ್ರಷ್ಟಾಚಾರ ಸಾಬೀತಾಗಿದ್ದು, ಅಂತಹವರನ್ನು ರಾಜ್ಯಾಧ್ಯಕ್ಷರು ಪಕ್ಕ ಕೂಡಿಸಿಕೊಳ್ಳುತ್ತಾರೆ. ಮಾಡಾಳರ ಪುತ್ರನಿಗೆ ಭ್ರಷ್ಟಾಚಾರ ಮಾಡಲು ಕಾರ್ಯಕರ್ತರು ಹೇಳಿದ್ದರಾ ಎಂದು ಕೆಲವರು ಕಿಡಿಕಾರಿದರು.

ಲೋಕಸಭೆ ಚುನಾವಣೆ ವೇಳೆ ಲಗಾನ್ ಟೀಂ ವರ್ತನೆ ಎಲ್ಲರೂ ನೋಡಿದ್ದೇವೆ. ಮತ್ತೆ ಪಕ್ಷ ಅಧಿಕಾರಕ್ಕೆ ಬರಬೇಕೆಂದರೆ ರೇಣುಕಾಚಾರ್ಯಗೆ ಹೊರಹಾಕಿ. ಒಂದುವೇಳೆ ವಿಜಯೇಂದ್ರ ರಾಜ್ಯಾಧ್ಯಕ್ಷ ಆಗಿರದೇ ಇದ್ದಿದ್ದರೆ ರೇಣುಕಾಚಾರ್ಯ ಕಾಂಗ್ರೆಸ್ಸಿಗೆ ಹೋಗಿರುತ್ತಿದ್ದರು. ಸ್ವತಃ ಈ ಮಾತನ್ನು ಕಾಂಗ್ರೆಸ್ ಸಚಿವ ಎಸ್‌.ಎಸ್. ಮಲ್ಲಿಕಾರ್ಜುನ ಹೇಳಿದ್ದ ವೀಡಿಯೋಗಳನ್ನು ಸಹ ಕಾರ್ಯಕರ್ತರು ರಾಜ್ಯ ಮುಖಂಡರಿಗೆ ನೀಡಿದರು.

ಸಮಾಧಾನ ಚಿತ್ತದಿಂದ ಮಾಜಿ ಸಚಿವ ಅರಗ ಜ್ಞಾನೇಂದ್ರ, ಎಂಎಲ್‌ಸಿ ಧನಂಜಯ ಸರ್ಜಿ, ರಾಜ್ಯ ಪ್ರಕೋಷ್ಟಗಳ ಸಂಚಾಲಕ ದತ್ತಾತ್ರೇಯ ಆಲಿಸಿದರು. ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ, ಗಾಯತ್ರಿ ಸಿದ್ದೇಶ್ವರ, ಶಾಸಕ ಬಿ.ಪಿ.ಹರೀಶ, ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ, ಎಚ್.ಪಿ. ರಾಜೀಶ, ಚನ್ನಗಿರಿ ತುಮ್ಕೋಸ್ ಶಿವಕುಮಾರ ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಯಶವಂತರಾವ್ ಜಾಧವ್, ಎಸ್.ಎಂ.ವೀರೇಶ ಹನಗವಾಡಿ, ಶ್ರೀನಿವಾಸ ಟಿ.ದಾಸಕರಿಯಪ್ಪ, ಬಿ.ಎಸ್.ಜಗದೀಶ, ರಾಜನಹಳ್ಳಿ ಶಿವಕುಮಾರ, ಹೊನ್ನಾಳಿ ಅರಕೆರೆ ಹನುಮಂತಪ್ಪ, ಎಂ.ಆರ್.ಮಹೇಶ, ಕೆ.ವಿ.ಚನ್ನಪ್ಪ, ಚನ್ನಗಿರಿ ಟಿ.ವಿ.ರಾಜು, ಲೋಕೇಶ ಚನ್ನಗಿರಿ, ಮೆದಿಕೆರೆ ಸಿದ್ದೇಶ, ಶಾಂತರಾಜ ಪಾಟೀಲ ಇತರರು ಇದ್ದರು.

- - - ಬಾಕ್ಸ್* ಸೋಲಿಗೆ ನೀವು ಧೃತಿಗೆಡಬೇಡಿ, ನಿಮ್ಮೊಂದಿಗೆ ನಾವೆಲ್ಲರೂ ಇದ್ದೇವೆ. ಲೋಕಸಭೆ ಚುನಾವಣೆಯಲ್ಲಿ ನಾವು ಕೇವಲ 13 ಸಾವಿರ ಮತಗಳ ಅಂತರದಲ್ಲಷ್ಟೇ ಸೋತಿದ್ದೇವೆ. ಇದು ನಮ್ಮ ಸೋಲಲ್ಲ, ಕೆಲವರ ಕುತಂತ್ರದ ಸೋಲು ಇದಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ ಅವರಿಗೆ ಮುಖಂಡರು, ಕಾರ್ಯಕರ್ತರು ಧೈರ್ಯ ಹೇಳಿದರು.

ಅಲ್ಲದೇ, ನಾವು ಧೃತಿಗೆಡುವವರಲ್ಲ. ಯಾರೋ ಅಳ್ತಾರೆ, ಹೊಯ್ಕೊಳ್ತಾರೆ ಅಂತೆಲ್ಲಾ ಹೇಳಿದ್ದರು. ನಾವು ನಮ್ಮ ಜೀವನದಲ್ಲೇ ಅಳುವವರಲ್ಲ. ಸದಾ ನಿಮ್ಮೊಂದಿಗೆ ಇರುತ್ತೇನೆ. ನೀವು ಹೆದರಬೇಡಿ. ಮುಂದಿನ ದಿನಗಳಲ್ಲಿ ಪಕ್ಷ ಮತ್ತೆ ಹಳೇ ಲಯಕ್ಕೆ ಬಂದೇ ಬರುತ್ತೇವೆ. ನಮ್ಮ ಪಕ್ಷವೇ ಮತ್ತೆ ಅಧಿಕಾರಕ್ಕೂ ಬರಲಿದೆ ಎಂದು ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ ಸಹ ತಮ್ಮ ಪಕ್ಷದ ಕಾರ್ಯಕರ್ತರಿಗೆ ಧೈರ್ಯ ತುಂಬಿದರು.

- - -

(ಫೋಟೋ ಬರಲಿದೆ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಲ್ಕೈದು ತಿಂಗಳಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ : ಡಿಕೆಶಿ
ಜಿ ರಾಮ್‌ ಜಿ ಕುರಿತು ಇಂದು ರಾಜ್ಯ ವಿಶೇಷ ಸಂಪುಟ ಸಭೆ