ಮುಂದಿನ ನಾಲ್ಕೈದು ತಿಂಗಳಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯತಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ 5 ನಗರ ಪಾಲಿಕೆ ಸೇರಿ ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲಾಗುತ್ತಿದ್ದು, ಪಕ್ಷದ ಕಾರ್ಯಕರ್ತರು, ಮುಖಂಡರು ಸಿದ್ಧರಾಗಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕರೆ ನೀಡಿದರು.
ಬೆಂಗಳೂರು : ಮುಂದಿನ ನಾಲ್ಕೈದು ತಿಂಗಳಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯತಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ 5 ನಗರ ಪಾಲಿಕೆ ಸೇರಿ ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲಾಗುತ್ತಿದ್ದು, ಪಕ್ಷದ ಕಾರ್ಯಕರ್ತರು, ಮುಖಂಡರು ಸಿದ್ಧರಾಗಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕರೆ ನೀಡಿದರು.
ಅರಮನೆ ಮೈದಾನದಲ್ಲಿ ಕೆಪಿಸಿಸಿ ವತಿಯಿಂದ ಮಂಗಳವಾರ ಆಯೋಜಿಸಲಾಗಿದ್ದ ಮನರೇಗಾ ಬಚಾವ್ ಸಂಗ್ರಾಮ ಪೂರ್ವ ಸಿದ್ಧತಾ ಸಭೆಯಲ್ಲಿ ಹಾಗೂ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಕೋರ್ಟ್ ಆದೇಶ ಸೇರಿ ಇನ್ನಿತರ ಕಾರಣಗಳಿಂದಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲಾಗಿರಲಿಲ್ಲ. ಆದರೀಗ ಮುಂದಿನ ನಾಲ್ಕೈದು ತಿಂಗಳಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ತೀರ್ಮಾನಿಸಲಾಗಿದೆ. ಜತೆಗೆ ಸುಪ್ರೀಂ ಕೋರ್ಟ್ ಆದೇಶದಂತೆ ಜಿಬಿಎ 5 ನಗರ ಪಾಲಿಕೆಗಳ ಚುನಾವಣೆ ನಡೆಸಲಾಗುವುದು. ಉಳಿದಂತೆ ಜಿಲ್ಲಾ, ತಾಲೂಕು ಮತ್ತು ಗ್ರಾಪಂ ಚುನಾವಣೆ ನಡೆಸಲು ಸರ್ಕಾರ ಬದ್ಧವಾಗಿದೆ. ಮೀಸಲಾತಿ ಸೇರಿ ಇನ್ನಿತರ ತೊಡಕು ನಿವಾರಿಸಿ ಚುನಾವಣೆ ನಡೆಸಲು ಸಚಿವ ಸಂಪುಟ ಸಭೆಯಲ್ಲೂ ತೀರ್ಮಾನಿಸಲಾಗಿದೆ. ಅದಕ್ಕೆ ಎಲ್ಲರೂ ಸಿದ್ಧರಾಗಬೇಕು ಎಂದರು.
ಇನ್ನು ಕಾಲಾವಕಾಶ ಕೇಳಲ್ಲ:
ಜಿಬಿಎ 5 ನಗರಪಾಲಿಕೆಗೆ ಸಂಬಂಧಿಸಿ ಕೆಲವರು ತಾಂತ್ರಿಕ ಆಕ್ಷೇಪಣೆ ಸಲ್ಲಿಸುತ್ತಾರೆ. ಅದಕ್ಕಾಗಿ ಸಮಿತಿ ರಚಿಸಲಾಗಿದ್ದು, ಆ ಸಮಿತಿ ಎಲ್ಲ ತೀರ್ಮಾನ ಮಾಡಲಿದೆ. ಇನ್ನು, ರಾಜ್ಯ ಚುನಾವಣಾ ಆಯೋಗವು ಚುನಾವಣೆ ನಡೆಸಲಿದ್ದು, ಅವರಿಗೆ ಏನು ನಿರ್ದೇಶನ ನೀಡಬೇಕೋ ಅದನ್ನು ನೀಡುತ್ತೇವೆ. ಇನ್ನು ಜಿಬಿಎ ವಿಚಾರದಲ್ಲಿ ಮಹಿಳೆಯರಿಗೆ ಮೀಸಲಾತಿ ಕಡಿಮೆಯಾಗಿದೆ ಎಂಬ ಮಾತು ಕೇಳಿಬಂದಿವೆ. ಅದನ್ನು ಪರಿಶೀಲಿಸಿ, ತಪ್ಪಾಗಿದ್ದರೆ ಸರಿಪಡಿಸಲು ಸೂಚಿಸಲಾಗುವುದು. ಅದರಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಇನ್ನು ಚುನಾವಣೆ ನಡೆಸಲು ನ್ಯಾಯಾಲಯದ ಬಳಿ ಕಾಲಾವಕಾಶ ಕೇಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಜಿಲ್ಲಾಧ್ಯಕ್ಷರ ನೇಮಕಕ್ಕೆ ತಂಡ:
ನೂತನ ಜಿಲ್ಲಾಧ್ಯಕ್ಷರ ನೇಮಕಕ್ಕೆ ಸಂಬಂಧಿಸಿ ಎಐಸಿಸಿ ನೇಮಿಸಿದ ತಂಡಗಳು ರಾಜ್ಯಕ್ಕೆ ಬರಲಿದೆ. ಎಐಸಿಸಿಗೆ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ತಂಡ ಕಳುಹಿಸಲಾಗುತ್ತಿದೆ. ಈ ಸಮಿತಿ ಅನೇಕ ಜಿಲ್ಲಾಧ್ಯಕ್ಷರ ಬದಲಾವಣೆ ಮಾಡಲಿದೆ. ನಾಯಕರಿಗೆ ಸ್ಥಾನಮಾನ ಸಿಗಬೇಕಾದರೆ ನರೇಗಾ ಬಚಾವೋ ಅಭಿಯಾನ ಯಶಸ್ವಿಗೊಳಿಸಬೇಕು ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಜನ ಬೆಂಬಲದ ವಿಶ್ವಾಸ:
ಚುನಾವಣೆ ನಡೆಸುವುದು ನನಗೆ ಸವಾಲಲ್ಲ, ನನ್ನ ಕರ್ತವ್ಯ. ಕಾರ್ಯಕರ್ತರಿಗೆ ಅಧಿಕಾರ ನೀಡುವ, ಹೊಸ ನಾಯಕರನ್ನು ತಯಾರು ಮಾಡುತ್ತಿದ್ದೇವೆ. ನಾವು ಮಾಡುತ್ತಿರುವ ಕೆಲಸಕ್ಕೆ ಜನ ಬೆಂಬಲ ನೀಡುವ ವಿಶ್ವಾಸವಿದೆ. ನಾವು ಐದೂ ಪಾಲಿಕೆಗಳಲ್ಲೂ ಗೆಲ್ಲುತ್ತೇವೆ. ಇನ್ನು, ಬಿಜೆಪಿ ಮತ್ತು ಜೆಡಿಎಸ್ ಏನಾದರೂ ಮಾಡಿಕೊಳ್ಳಲಿ. ಜತೆಯಾಗಿ ಅಥವಾ ಬೇರೆಯಾಗಿ ಹೇಗೆ ಬೇಕಾದರೂ ಚುನಾವಣೆ ಎದುರಿಸಲಿ. ಅವರು ಲೋಕಸಭೆ ಚುನಾವಣೆಯಲ್ಲಿ ಜತೆಯಾಗಿ ಸ್ಪರ್ಧಿಸಿದಂತೆ ವಿಧಾನಸಭೆ ಮತ್ತು ಪಾಲಿಕೆ ಚುನಾವಣೆಗಳನ್ನೂ ಮಾಡಿದರೆ ನಮ್ಮೊಂದಿಗೆ ನೇರ ಹಣಾಹಣಿ ಆಗುತ್ತದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಕಾರ್ಯಕರ್ತರಿಗೆ ಅಧಿಕಾರ:
ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಗಳು, ನಾವು ಮಾಡಿರುವ ಕೆಲಸಗಳು ಜನರನ್ನು ತಲುಪಿದೆ. ಜತೆಗೆ ಗ್ಯಾರಂಟಿ ಸಮಿತಿ, ಸ್ಥಳೀಯ ಮಟ್ಟದಲ್ಲಿ ನಾಮನಿರ್ದೇಶನ ಸೇರಿ ವಿವಿಧ ಕ್ರಮಗಳಿಂದ ಕಾರ್ಯಕರ್ತರಿಗೆ ಈಗಾಗಲೇ ಅಧಿಕಾರ ನೀಡಿದ್ದೇವೆ. ಈವರೆಗೆ 20 ಜನರಿಗೆ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನ, 25 ಪದಾಧಿಕಾರಿಗಳು, 47 ಶಾಸಕರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಚುನಾವಣೆ ಸಮಯದಲ್ಲಿ ಟಿಕೆಟ್ ವಂಚಿತ ಕಾರ್ಯಕರ್ತರ ಪೈಕಿ 19 ಜನರಿಗೆ ಅಧ್ಯಕ್ಷ ಸ್ಥಾನ ನೀಡಿದ್ದೇವೆ ಎಂದು ತಿಳಿಸಿದರು.
