ಕನ್ನಡಪ್ರಭ ವಾರ್ತೆ ಮಡಿಕೇರಿ
ಪೊನ್ನಂಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಏನೇ ಮಾಡಿದರೂ ಪರ ವಿರೋಧ ಇರುವಂತಹದ್ದೇ. ಒಳ್ಳೆಯ ಉದ್ದೇಶ ಇಟ್ಟುಕೊಂಡು ನಾವು ಸಮೀಕ್ಷೆ ಮಾಡಿಸುತ್ತಿದ್ದೇವೆ. ನಾವು ಜಾತಿ ಜನಗಣತಿ ಮಾಡುತ್ತಿಲ್ಲ. ಜಾತಿ ಗಣತಿ ಮಾಡುತ್ತಿರುವುದು ಕೇಂದ್ರ ಸರ್ಕಾರ. ಜಾತಿ ಗಣತಿ ಬೇಡ ಎಂದು ಬಿಜೆಪಿಯವರ ನಿಲುವಾಗಿದ್ದರೆ ಅವರು ವಿರೋಧ ಮಾಡಲಿ. ಕೇಂದ್ರಕ್ಕೆ, ಮೋದಿಯವರಿಗೆ ಬಿಜೆಪಿಯವರು ಬರೆಯಲಿ. ಜಾತಿ ಗಣತಿ ಬೇಡ ಎಂದು ಬರೆಯಲಿ. ಯಾವುದೇ ಕಾರ್ಯಕ್ರಮ ಮಾಡುವುದಾದರೂ ಒಂದು ವೈಜ್ಞಾನಿಕ ಅಂಕಿ ಅಂಶ ಬೇಕು. ಯಾವ ಸಮುದಾಯದ ಜನರ ಸ್ಥಿತಿ ಹೇಗಿದೆ ಎಂದು ತಿಳಿದುಕೊಳ್ಳಬೇಕಾಗಿದೆ. ಆಧುನಿಕ ಯುಗದಲ್ಲಿ ಇದ್ದು ನಾವು ವೈಜ್ಞಾನಿಕವಾಗಿ ತಿಳಿದುಕೊಳ್ಳಬೇಕು. ಅದು ಬಿಟ್ಟು ಮುಖ್ಯಮಂತ್ರಿಯವರ ಮೇಲೆ ಸುಮ್ಮನೆ ಗೂಬೆ ಕೂರಿಸಬಾರದು. ಬಿಜೆಪಿಯವರಿಗೆ ಬೇರೆ ಕೆಲಸವಿಲ್ಲ. ಎಲ್ಲದರಲ್ಲೂ ಸುಮ್ಮನೆ ಗೊಂದಲ ಸೃಷ್ಟಿಸುತ್ತಾರೆ. ಯಾವುದನ್ನು ಸರಿಯಾಗಿ ನಡೆಯಲು ಬಿಡುವುದಿಲ್ಲ. ವಿರೋಧ ವ್ಯಕ್ತಪಡಿಸುವುದಿದ್ದರೆ ಪಡಿಸಲಿ. ಆದರೆ ಸುಮ್ಮನೆ ಕಥೆ ಕಟ್ಟಿ ಗೊಂದಲ ಸೃಷ್ಟಿಸಬಾರದು ಎಂದರು.
ಮಾಹಿತಿ ಕೊರತೆ ಇರಬಹುದು:ವಿಜಯೇಂದ್ರ ಅವರಿಗೆ ಎಷ್ಟು ಜ್ಞಾನ ಇದೆಯೋ ಗೊತ್ತಿಲ್ಲ. ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರಿದ್ದಾರೆ. ಸರಿಯಾಗಿ ತಿಳಿದುಕೊಳ್ಳಲಿ. ಅವರಿಗೆ ಮಾಹಿತಿ ಕೊರತೆ ಇರಬಹುದು. ಹಿಂದೆ ಕಾಂತರಾಜ ಸರ್ವೇ ವರದಿಯನ್ನು ಇವರ ಸರ್ಕಾರವೇ ಒಪ್ಪಿಕೊಳ್ಳಲಿಲ್ಲವೆ? ಅದನ್ನು ಒಪ್ಪಿಕೊಂಡು ಜಯಪ್ರಕಾಶ್ ಹೆಗ್ಡೆ ಅವರನ್ನು ನೇಮಿಸಲಿಲ್ಲವೆ? ವರದಿ ಆಧಾರದಲ್ಲಿ ಜಯಪ್ರಕಾಶ್ ಹೆಗ್ಡೆ ವರದಿ ಕೊಟ್ಟರು. ಅದರ ಮೇಲೆ ಬಿಜೆಪಿಯವರು ಆ್ಯಕ್ಟ್ ಮಾಡಿದರು. ಅಂದ ಮೇಲೆ ಕಾಂತರಾಜ ವರದಿಯನ್ನು ಬಿಜೆಪಿಯವರು ಒಪ್ಪಿಕೊಂಡಂತೆ ಆಯ್ತಲ್ಲ. ಅದು ಕೂಡ ಇದೇ ಸರ್ವೇ ಅಲ್ಲವೆ? ಎಂದು ಪ್ರಶ್ನಿಸಿದರು.
ಸಮಾಜದಲ್ಲಿ ಗೊಂದಲ ಇರಬೇಕು ಮತ್ತು ಸಿದ್ದರಾಮಯ್ಯನವರು ಹಿಂದೂ ವಿರೋಧಿ ಅಂತ ತೋರಿಸಬೇಕು ಅಷ್ಟೇ. ಹಿಂದೂ ವಿರೋಧಿ ಅಂತ ಬಿಂಬಿಸುವುದೇ ಒಂದಂಶದ ಕಾರ್ಯಕ್ರಮ ಅವರದು. ಸರ್ವೇಯನ್ನು ಒಮ್ಮೆ ಹೋಗಿ ನೋಡಿ ಏನೇನು ಪ್ರಶ್ನೆ ಕೇಳಿದ್ದಾರೆ. ಅವರ ಶಿಕ್ಷಣ ಏನು ಉದ್ಯೋಗ ಏನು ಆರ್ಥಿಕ ಸ್ಥಿತಿಗತಿ ಏನು ?
ನಿಷ್ಪಕ್ಷಪಾತವಾದ ತನಿಖೆ:
ಎಸ್ಐಟಿಯಲ್ಲಿ ಯಾವುದೇ ಗೊಂದಲವಿಲ್ಲ. ಈಗ ಎಲ್ಲರೂ ಸುಮ್ಮನಾಗಿದ್ದಾರೆ. ಯಾರು ತಪ್ಪು ಮಾಡಿದ್ದಾರೋ ಅವರ ಮೇಲೆ ಎಸ್ಐಟಿ ಕ್ರಮ ತೆಗೆದುಕೊಳ್ಳುತ್ತದೆ. ಅಲ್ಲಿ ಯಾವುದಾದರೂ ಗೊಂದಲಗಳಿದ್ದರೆ ಎಲ್ಲವನ್ನು ತನಿಖೆ ಮಾಡುತ್ತಿದ್ದಾರೆ. ಇನ್ನೊಂದು ಕಡೆಯಿಂದ ಮಾಹಿತಿ ಬಂದರೆ ಅದನ್ನು ಕೂಡ ತನಿಖೆ ಮಾಡುತ್ತಿದ್ದಾರೆ. ಎಸ್ಐಟಿಯ ಪೂರ್ಣ ವರದಿ ಹೊರ ಬರಲಿ. ನಾವು ಸುಮ್ಮನೆ ಏನೇನೋ ಮಾತನಾಡುವುದು ಬೇಡ ಎಂದರು.