ಮಹಿಳೆಯರ ಬಗ್ಗೆ ಕಾಂಗ್ರೆಸ್ಸಿನಷ್ಟು ಕಾಳಜಿ ಬಿಜೆಪಿಗಿಲ್ಲ: ಶಿವರಾಜ ತಂಗಡಗಿ

KannadaprabhaNewsNetwork |  
Published : Apr 28, 2026, 02:00 AM IST
ಸಚಿವ ಶಿವರಾಜ ತಂಗಡಗಿ | Kannada Prabha

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ರಾಜರಂತೆ ವರ್ತಿಸುತ್ತಿದ್ದಾರೆ. ಅವರನ್ನು ಯಾರೂ ಪ್ರಶ್ನೆ ಮಾಡಬಾರದು. ಕೇವಲ ತಾವು ಹೇಳಿದ್ದನ್ನು ಕೇಳಬೇಕು ಎನ್ನುವ ಮನೋಧೋರಣೆ ಹೊಂದಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.

ಕೊಪ್ಪಳ: ಮಹಿಳೆಯರ ಬಗ್ಗೆ ಮತ್ತು ಮಹಿಳಾ ಮೀಸಲಾತಿಯ ಬಗ್ಗೆ ಕಾಂಗ್ರೆಸ್ಸಿಗೆ ಇರುವಷ್ಟು ಕಾಳಜಿ ಬಿಜೆಪಿಗಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2010ರಲ್ಲಿಯೇ ಕಾಂಗ್ರೆಸ್ ಮಹಿಳಾ ಮೀಸಲಾತಿ ಜಾರಿ ಮಾಡಿದಾಗ ಅದನ್ನು ವಿರೋಧಿಸಿದ್ದು ಇದೇ ಬಿಜೆಪಿ. ಈಗ ಮಹಿಳಾ ಮೀಸಲಾತಿ ಬಗ್ಗೆ ಮಾತನಾಡುತ್ತದೆ. 2023ರಲ್ಲಿಯೇ ಅನುಮೋದನೆಯಾಗಿರುವ ಮಹಿಳಾ ಮೀಸಲಾತಿ ಜಾರಿ ಮಾಡುವುದನ್ನು ಬಿಟ್ಟು ಈಗ ಮತ್ತೆ ಮಹಿಳಾ ಮೀಸಲಾತಿ ಕಾಯ್ದೆ ಜಾರಿ ಮಾಡಲು ಮುಂದಾಗಿದೆ. ಆದರೆ, ಇದೆಲ್ಲವೂ ನಾಟಕ ಎನ್ನುವುದು ಇಡೀ ದೇಶಕ್ಕೆ ಗೊತ್ತಿದೆ ಎಂದರು.

ಮಹಿಳಾ ಮೀಸಲಾತಿ ಜಾರಿ ಅವರಿಗೆ ಇಷ್ಟ ಇಲ್ಲ. ಅದಕ್ಕಾಗಿಯೇ ಅದರ ಜತೆಗೆ ಲೋಕಸಭಾ ಕ್ಷೇತ್ರಗಳನ್ನು ಹೆಚ್ಚಿಸುವ ವಿಷಯ ಸೇರ್ಪಡೆ ಮಾಡಿದ್ದಾರೆ. ಕೇವಲ ಚುನಾವಣೆ ಗಿಮಿಕ್, ಹೊರತು ನಿಜವಾದ ಕಳಕಳಿ ಇಲ್ಲ ಎಂದರು.

ಸಾಂಸ್ಕೃತಿಕ ಕಾಯ್ದೆ: ರಾಜ್ಯದಲ್ಲಿ ಸಾಂಸ್ಕೃತಿಕ ಕಾಯ್ದೆ ಜಾರಿ ಮಾಡಬೇಕು ಎನ್ನುವ ದಿಸೆಯಲ್ಲಿ ಪ್ರಯತ್ನ ನಡೆದಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

ಸ್ಥಳೀಯರನ್ನೇ ಗಮನದಲ್ಲಿಟ್ಟುಕೊಂಡು, ಅವರಿಗೆ ಆದ್ಯತೆ ನೀಡಬೇಕು ಎನ್ನುವ ಕಾರಣಕ್ಕಾಗಿ ಮತ್ತು ಸಾಂಸ್ಕೃತಿಕ ವಲಯದಲ್ಲಿಯೂ ಸ್ಥಳೀಯರ ಆದ್ಯತೆ ನೀಡಲು ಈ ಕಾನೂನು ಜಾರಿಗೆ ತರಲಾಗುತ್ತದೆ ಎಂದರು.

ಈಗಲೇ ಯಾವುದರಲ್ಲಿ ಎಷ್ಟು ಪಾಲು, ಹೇಗೆ ಎನ್ನುವುದನ್ನು ವಿವರಿಸಲು ಸಾಧ್ಯವಿಲ್ಲ. ಅದರ ಸಿದ್ಧತೆ ನಡೆದಿದ್ದು, ಪರಾಮರ್ಶೆ ಮಾಡಿ, ಸೂಕ್ತವಾಗಿರುವ ಅಂಶಗಳನ್ನೊಳಗೊಂಡು ಸಾಂಸ್ಕೃತಿಕ ಕಾಯ್ದೆ ಜಾರಿ ಮಾಡಲಾಗುವುದು ಎಂದರು.ಚೇತನ್‌ ಹೇಳಿಕೆಗೆ ಆಕ್ಷೇಪ: ಡಾ. ರಾಜಕುಮಾರ ಬಗ್ಗೆ ಮಾತನಾಡುವ ಯೋಗ್ಯತೆ ಚೇತನ್ ಅವರಿಗಿಲ್ಲ ಎಂದು ಸಚಿವ ಶಿವರಾಜ ತಂಗಡಗಿ ಆಕ್ಷೇಪಿಸಿದರು.

ನಟ ಚೇತನ್ ಅವರಿಗೆ ಗೊತ್ತಿಲ್ಲ. ಡಾ. ರಾಜಕುಮಾರ ಅವರು ಕೊಡುಗೆ, ಅವರ ಹೋರಾಟ, ಗೋಕಾಕ ಚಳವಳಿ, ಅಷ್ಟೇ ಯಾಕೆ? ಅವರು ಅನ್ಯ ಭಾಷೆಯ ಸಿನಿಮಾಗಳಿಗೆ ಎಷ್ಟೇ ಕರೆದರೂ ಹೋಗಿಲ್ಲ. ಅವರು ತೋರಿದ ಕನ್ನಡ ಪ್ರೀತಿಯನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಅವರಿಗೆ 2.5 ಎಕರೆಯಲ್ಲ, ಹತ್ತು ಎಕರೆ ಕೊಟ್ಟರೂ ಕಡಿಮೆಯೇ ಎಂದರು.

ಇತರ ನಟರಿಗೂ ಆದ್ಯತೆ ನೀಡಬೇಕು ಎನ್ನುವುದನ್ನು ನಾನು ಒಪ್ಪುತ್ತೇನೆ. ಹಾಗಂತ ಡಾ. ರಾಜಕುಮಾರ ಅವರ ಕುರಿತು ಪ್ರಶ್ನೆ ಮಾಡುವುದಲ್ಲ. ನಾನು ಸಹ ವಿಷ್ಣುವರ್ಧನ ಅವರ ಅಭಿಮಾನಿ. ಸರ್ಕಾರ ಯಾವ ಯಾವ ನಟರಿಗೆ ಏನೇನು ಮಾಡಬೇಕು ಎನ್ನುವುದನ್ನು ಮಾಡುತ್ತಾ ಬಂದಿದೆ ಎಂದರು.

ಡಾ. ರಾಜಕುಮಾರ ಅವರು ಇದ್ದಿದ್ದರೆ ಕೇಳುತ್ತಿರಲಿಲ್ಲ ಎಂದು ಚೇತನ್ ಹೇಳಿದ್ದಾರೆ. ಆದರೆ, ಅವರು ಕೇಳುವುದಲ್ಲ. ಅವರು ಎಂದೂ ಕೇಳುವವರು ಅಲ್ಲ. ನಮ್ಮ ನಾಡಿನ ಹಿರಿಮೆಯಾಗಿದ್ದಕ್ಕೆ ನಾವು ಅವರನ್ನು ಗೌರವಿಸಬೇಕು ಎಂದರು.ನಾನು ಶಿಸ್ತಿನ ಶಿಪಾಯಿ-ಶಿವರಾಜ ತಂಗಡಗಿ: ನಾನು ರಾಜಕೀಯ ಮಾತನಾಡುವುದಿಲ್ಲ. ಹೈಕಮಾಂಡ್ ಸೂಚನೆ ಇರುವುದರಿಂದ ನಾನು ಯಾವುದೇ ಕಾರಣಕ್ಕೂ ರಾಜಕೀಯ ಮಾತನಾಡುವುದಿಲ್ಲ, ನಾನು ಪಕ್ಷದ ಶಿಸ್ತಿನ ಸಿಪಾಯಿ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

ಮುಖ್ಯಮಂತ್ರಿ ಐದು ವರ್ಷ ಮುಂದುವರಿಯುತ್ತಾರೆ ಎನ್ನುವ ಕುರಿತಾಗಲಿ, ಡಿ.ಕೆ. ಶಿವಕುಮಾರ ಅವರು ಮುಖ್ಯಮಂತ್ರಿ ಆಗುತ್ತಾರೆ ಎನ್ನುವ ಕುರಿತಾಗಲಿ ಮಾತನಾಡುವಷ್ಟು ದೊಡ್ಡವನು ನಾನಲ್ಲ. ಪಕ್ಷದ ಅಣತಿಯಂತೆ ನಾನು ಕಾರ್ಯನಿರ್ವಹಿಸುತ್ತೇನೆ. ಪಕ್ಷ ಈಗ ಯಾವುದೇ ಬೆಳವಣಿಗೆ ಕುರಿತು ಮಾತನಾಡದಂತೆ ಹೇಳಿರುವುದರಿಂದ ನಾನು ಏನು ಮಾತನಾಡುವುದಿಲ್ಲ ಎಂದು ಸುದ್ದಿಗಾರರ ಪ್ರಶ್ನೆ ಉತ್ತರಿಸಿದರು.

ಸಚಿವರು ಯಾರು ಬೇಕಾದರೂ ಆಗಬಹುದು. ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಸಹ ಆಗಬಹುದು. ಹಾಗೆ ಶಿವರಾಜ ತಂಗಡಗಿ ಅವರು ಮುಂದುವರಿಯಬಹುದು. ಇದ್ಯಾವುದು ನಮ್ಮ ಕೈಯಲ್ಲಿ ಇಲ್ಲ. ಶಾಸಕರಾಗಿ ಆಯ್ಕೆಯಾಗಿರುವವರು ಹಿರಿತನದ ಆಧಾರದಲ್ಲಿ ಸಚಿವರಾಗಲು ಎಲ್ಲರೂ ಅರ್ಹರು ಇರುತ್ತಾರೆ. ಆದರೆ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರ ಮಾತಿಗೆ ಕೌಂಟರ್ ಕೊಡುವಷ್ಟು ದೊಡ್ಡವನು ನಾನಲ್ಲ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಾ. ಅಂಬೇಡ್ಕರ್‌ ಸಮಾನತೆ ನೀಡಿದ ಮಹಾ ನಾಯಕ: ರಾಘವೇಂದ್ರ ಹಿಟ್ನಾಳ
ಕುಡಿಯುವ ನೀರಿನ ಸಮಸ್ಯೆಯಾದರೆ ಅಧಿಕಾರಿಗಳೇ ಹೊಣೆ: ಶಿವರಾಜ ತಂಗಡಗಿ