ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಯಾವುದೇ ಸ್ಥಾನಮಾನಕ್ಕೆ ಆಸೆ ಪಟ್ಟು ಬಿಜೆಪಿಗೆ ಬಂದಿಲ್ಲ. ಲಾಭಿ ಮಾಡುವ ಅಭ್ಯಾಸ ನಮ್ಮ ಕುಟುಂಬದಲ್ಲೇ ಇಲ್ಲ ಎಂದು ಮಾಜಿ ಸಂಸದೆ ಸುಮಲತಾ ಅಂಬರೀಶ್ ಹೇಳಿದರು.ಬಿಜೆಪಿ ಪಕ್ಷದಲ್ಲಿ ಸೈಡ್ ಲೈನ್ ಆಗಿರುವ ವಿಚಾರವಾಗಿ ದೊಡ್ಡರಸಿನಕೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಸ್ಥಾನ ಮಾನ ಬೇಕಿದ್ದರೆ ನನ್ನ ಹೆಜ್ಜೆ ಬೇರೆ ರೀತಿ ಇರುತ್ತಿರಲಿಲ್ಲ. ಸ್ವತಂತ್ರವಾಗಿ ಸಂಸತ್ ಚುನಾವಣೆ ಸ್ಪರ್ಧೆ ವೇಳೆ ಎಂಎಲ್‌ಸಿ ಆಫರ್ ಇತ್ತು. ಅದನ್ನೆ ತಿರಸ್ಕರಿಸಿದವಳು. ಇದನ್ನು ಪತಿ ಅಂಬರೀಶ್ ಅವರಿಂದ ನಾವು ಕಲಿತಿದ್ದೇವೆ ಎಂದರು.
ನಾನು ಬಿಜೆಪಿಗೆ ಸೇರಿರೋದು ಮೌಲ್ಯಗಳು, ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ವಿಶ್ವಾಸ ಹಾಗೂ ಅವರ ನಾಯಕತ್ವದಲ್ಲಿ ದೇಶ ಇಷ್ಟೊಂದು ಅಭಿವೃದ್ಧಿಯಾಗುತ್ತಿರುವುದನ್ನು ನೋಡಿ ಎಂದು ಸ್ಪಷ್ಟಪಡಿಸಿದರು.ಕೆಲವರು ಲಾಭಿ ಮಾಡಿ ಅಧಿಕಾರ ಪಡೆಯುತ್ತಾರೆ. ನಾನು ಎಲ್ಲಿಯೂ ಹೋಗಿ ಅವಕಾಶಕ್ಕಾಗಿ ಲಾಭಿ ಮಾಡುವ ಅಭ್ಯಾಸವಿಲ್ಲ. ಬಿಜೆಪಿ ನನ್ನನ್ನು ಗುರುತಿಸಿ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನ ಕೊಡುತ್ತದೆ. ನಮಗೂ ಸಮಯ ಬಂದಾಗ ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಸಂಸದರ ಸ್ಥಾನದಲ್ಲಿರೋರು ಮಂಡ್ಯಕ್ಕೆ ಬರಬೇಕು. ಅದು ಅವರ ಕೆಲಸ. ನಾನು ಮಾಜಿ ಸಂಸದೆ ಅನ್ಕೊಂಡು ನಿತ್ಯ ಬರುವುದಕ್ಕೆ ಆಗಲ್ಲ. ಸಂಸದರಾದವರು ಅವರ ಕೆಲಸ ಮಾಡುತ್ತಾರೆ. ನನ್ನ ಅವಶ್ಯಕತೆ ಇದ್ದ ಕಡೆ ನಾನು ಬರುತ್ತೇನೆ. ಯಾವಾಗಲೂ ಕಾಣಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಬರೋಕೆ ಇಷ್ಟಪಡಲ್ಲ ಎಂದರು.ರಾಜ್ಯ ಕಾಂಗ್ರೆಸ್ ಸರ್ಕಾರದ ಎರಡುವರೆ ವರ್ಷದ ಆಡಳಿತದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಉಚಿತ ಉಚಿತ ಅಂತ ಹೇಳಿ ಒಂದೊಂದಾಗಿ ಅಗತ್ಯ ವಸ್ತುಗಳ ಏರಿಕೆ ಮಾಡಿದ್ದಾರೆ. ಡಿಸೆಂಬರ್‌ಗೆ ವಿದ್ಯುತ್ ದರ ಏರಿಕೆ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಜನರಿಗೆ ಸ್ಪಷ್ಟವಾಗಿ ಗೊತ್ತಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.