ಬಿಜೆಪಿ 400 ಸೀಟು ಗೆಲ್ಲುವುದು ಶತಸಿದ್ಧ: ಗೋವಿಂದ ಕಾರಜೋಳ

KannadaprabhaNewsNetwork | Updated : Apr 08 2024, 02:13 PM IST

ಸಾರಾಂಶ

ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಇದೊಂದು ಉತ್ತಮ ಅವಕಾಶ ಸಿಕ್ಕಿದೆ. ನಾವೆಲ್ಲರೂ ಮೈತ್ರಿ ಅಭ್ಯರ್ಥಿ ಗೆಲುವಿಗಾಗಿ ಶ್ರಮಿಸಬೇಕು

 ಹಿರಿಯೂರು :  ಅಕ್ಕಿ‌, ಬೇಳೆ, ರಾಗಿ, ಮೊಟ್ಟೆ ಕೊಡುತ್ತಿದ್ದೇವೆ ಎಂದು ಹೇಳುವ ಸಿದ್ದರಾಮಯ್ಯನವರಿಗೆ ಜನತೆಗೆ ಬೇಕಾಗಿರುವುದು ಶಿಕ್ಷಣ, ಕುಡಿಯುವ ನೀರು, ಮೂಲಭೂತ ಸೌಕರ್ಯ ಹಾಗೂ ಅಭಿವೃದ್ಧಿ ಎನ್ನುವುದು ಗೊತ್ತಿರಲಿ ಎಂದು ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳ ವ್ಯಂಗ್ಯವಾಡಿದರು.

ನಗರದ ತುಳಸಿ ನಾರಾಯಣರಾವ್ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಸಮನ್ವಯ ಸಮಿತಿ ಸಭೆ ಹಾಗೂ ಚುನಾವಣಾ ಪೂರ್ವ ಸಿದ್ಧತಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ದೇಶ ಅಭಿವೃದ್ಧಿ ಕಾಣಲಿಲ್ಲ. ದೀನ ದಲಿತರ ಉದ್ಧಾರವಾಗಲಿಲ್ಲ. ಕುಟುಂಬದ ಉದ್ಧಾರಕ್ಕಾಗಿ ಕಾಂಗ್ರೆಸ್ ರಾಜಕಾರಣ ಮಾಡಿಕೊಂಡು ಬಂದಿದೆ. ಇವರ ಸರ್ಕಾರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಲು ಸಾಧ್ಯವಾಗಲಿಲ್ಲ. ಈ ಕ್ಷೇತ್ರದಲ್ಲಿ ಕೆ.ಎಚ್. ರಂಗನಾಥ ಅವರನ್ನು ಹೀನಾಯವಾಗಿ ನಡೆಸಿಕೊಂಡರು. ಜೊತೆಗೆ ಕಾಂಗ್ರೆಸ್‌ನಲ್ಲಿದ್ದ ದಿವಂಗತ ಡಿ. ಮಂಜುನಾಥ್ ಅವರನ್ನು ಅವಮಾನದಿಂದ ನಡೆಸಿಕೊಂಡ ಹಿನ್ನೆಲೆಯಲ್ಲಿ ಅವರು ಜೆಡಿಎಸ್ ಸೇರಬೇಕಾಯಿತು ಎಂದರು.

ಪ್ರಧಾನಿ ನರೇಂದ್ರ ಮೋದಿ ಯವರು ಗುಜರಾತ್ ನಲ್ಲಿ ಸಿಎಂ ಆಗಿ, ದೇಶದ ಪ್ರಧಾನಿಯಾಗಿ ಕಳಂಕ ರಹಿತ ಆಡಳಿತ ನಡೆಸಿದ್ದಾರೆ. ಈಗಾಗಲೇ ಅನೇಕ ಸರ್ವೆ ನಡೆಸಿದ್ದು 400ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುವುದು ಸೂರ್ಯ ಚಂದ್ರರಷ್ಟೇ ಸತ್ಯವಾಗಿದೆ. ಕಳೆದ ಹತ್ತು ವರ್ಷಗಳ ಕೇಂದ್ರ ಬಿಜೆಪಿ ಸರ್ಕಾರದ ಆಡಳಿತ ಹಾಗೂ ಹಿಂದೆ ಇದ್ದ ರಾಜ್ಯ ಬಿಜೆಪಿ ಸರ್ಕಾರದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಮಾತನಾಡಿ ದೇಶದ ಹಿತ ದೃಷ್ಟಿಯಿಂದ ಈ ಚುನಾವಣೆ ಮಹತ್ವದ್ದಾಗಿದೆ. ಕಳೆದ 2019ರಲ್ಲಿ 25 ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿತ್ತು. ಈ ಬಾರಿ ಚುನಾವಣೆಯಲ್ಲಿ 28 ಕ್ಕೆ 28 ಕ್ಷೇತ್ರದಲ್ಲೂ ಗೆಲ್ಲಲು ಗುರಿ ಹೊಂದಿದ್ದು ಒಂದು ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲ್ಲಲು ಬಿಡಬಾರದು ಎಂದರು.

ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರು ಕಡಿಮೆ ಅವಧಿಯ ಪ್ರಧಾನಿ ಆಡಳಿತದಲ್ಲಿ ಅನೇಕ ಜನಪರ ಯೋಜನೆಗಳನ್ನ ಜನರಿಗೆ ನೀಡಿದ್ದಾರೆ. ಬಿ.ಎಸ್. ಯಡಿಯೂರಪ್ಪ 45 ವರ್ಷ ಕಾಲ ರೈತರ ಪರವಾಗಿ ಕೆಲಸ ಮಾಡಿದ್ದಾರೆ. ಕೇಂದ್ರ ಸರ್ಕಾರದಿಂದ ರಾಜ್ಯದ ರೈತರಿಗೆ 6 ಸಾವಿರ, ರಾಜ್ಯ ಸರ್ಕಾರದಿಂದ 4 ಸಾವಿರ ಹಣ ನೀಡಿ ರೈತರ ಅಭಿವೃದ್ಧಿಗೆ ಶ್ರಮಿಸಲಾಗಿದೆ ಎಂದು ಹೇಳಿದರು.

ದೇಶದಲ್ಲಿ ಬಿಜೆಪಿ ಆಡಳಿತಕ್ಕೆ ಬರುವ ಮುನ್ನ ಜಮ್ಮುಕಾಶ್ಮೀರದಲ್ಲಿ ದಿನನಿತ್ಯ ಕಾಳಗ ನಡೆಯುತ್ತಿತ್ತು. ಇತ್ತೀಚೆಗಷ್ಟೇ ಬೆಂಗಳೂರಿನ ರಾಮೇಶ್ವರಂ ಕೆಫೆ ನಲ್ಲಿ ಬಾಂಬ್ ಸ್ಫೋಟ ಆಗಿದೆ. ಎಲ್ಲೆಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ ಅಲ್ಲೆಲ್ಲ ಘರ್ಷಣೆ ನಡೆಯುತ್ತಿವೆ. ಆದರೆ ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ದೇಶದ ಜನರು ನೆಮ್ಮದಿ ಜೀವನ ನಡೆಸುತ್ತಿದ್ದಾರೆ ಎಂದರು.

ವಿಧಾನ ಪರಿಷತ್ ಸದಸ್ಯ ವೈಎ. ನಾರಾಯಣಸ್ವಾಮಿ ಮಾತನಾಡಿ, ಈ ಚುನಾವಣೆ ಮಹತ್ವದ್ದಾಗಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ದುರಹಂಕಾರದ ಸಿಎಂ ಆಗಿದ್ದಾರೆ. ಚೀಲ ಸಿದ್ದರಾಮಯ್ಯನದು, ಅದರೊಳಗೆ ಇರುವ ಅಕ್ಕಿ ಮೋದಿಯವರದು ಎಂದು ಲೇವಡಿ ಮಾಡಿದರು.

ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದ ಗೋವಿಂದ ಕಾರಜೋಳ ಅವರು ಹಿರಿಯೂರಿನ ಧರ್ಮಪುರ ಕೆರೆ ಸೇರಿ ನೀರಾವರಿ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ. ಅದರ ಯಶಸ್ಸು ಹಿಂದೆ ಇದ್ದ ಶಾಸಕರಿಗೆ ಸೇರುವುದಿಲ್ಲ ಎಂದು ಮಾಜಿ ಶಾಸಕಿ ಪೂರ್ಣಿಮಾ ಹೆಸರು ಹೇಳದೇ ಟಾಂಗ್ ನೀಡಿದರು.

ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪರಾಜಿತ ಅಭ್ಯರ್ಥಿ ಎಂ ರವೀಂದ್ರಪ್ಪ ಮಾತನಾಡಿ ಜಿಲ್ಲೆಯ ಸಮಗ್ರ ನೀರಾವರಿ ಹಾಗೂ ರೈತರ ಅಭಿವೃದ್ಧಿಗೆ ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರನ್ನು ಗೆಲ್ಲಿಸಬೇಕು. ಅದರಲ್ಲೂ ಹಿರಿಯೂರು ಕ್ಷೇತ್ರದಲ್ಲಿ ಹೆಚ್ಚು ಮತ ನೀಡಲು ಶ್ರಮಿಸಬೇಕು. ಮೈತ್ರಿ ಅಭ್ಯರ್ಥಿ ಗೆದ್ದರೆ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆಯನ್ನು ಜಾರಿಗೆ ತರಲಿದ್ದಾರೆ ಎಂದರು.

ಮಾಜಿ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ. ಯಶೋಧರ ಮಾತನಾಡಿ, ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದೇವೆ. 70 ವರ್ಷಗಳ ಕಾಲ ದೇಶದಲ್ಲಿ ಆಡಳಿತ ನಡೆಸಿ ದೇಶವನ್ನು ಸರ್ವನಾಶ ಮಾಡಿದಂತಹ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಇದೊಂದು ಉತ್ತಮ ಅವಕಾಶ ಸಿಕ್ಕಿದೆ. ನಾವೆಲ್ಲರೂ ಮೈತ್ರಿ ಅಭ್ಯರ್ಥಿ ಗೆಲುವಿಗಾಗಿ ಶ್ರಮಿಸಬೇಕು. ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಒಂದೇ ತಾಯಿ ಮಕ್ಕಳಂತೆ ಮತದಾರರ ಮನೆ ಬಾಗಿಲಿಗೆ ತೆರಳಿ ಮತ ಹಾಕಿಸಿ ಪ್ರಧಾನಿ ಕೈ ಬಲಪಡಿಸೋಣ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಲೋಕಸಭಾ ಕ್ಷೇತ್ರದ ಉಸ್ತುವಾರಿ ಎಸ್. ಲಿಂಗಮೂರ್ತಿ, ಮಾಜಿ ಶಾಸಕ ಪಾವಗಡ ತಿಮ್ಮರಾಯಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ ಜಯಣ್ಣ, ತಾಲೂಕು ಅಧ್ಯಕ್ಷ ಹನುಮಂತರಾಯಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಎ. ಮುರುಳಿ, ಸಿದ್ದಾರ್ಥ್ ತಿಪ್ಪಾರೆಡ್ಡಿ, ಮಾಜಿ ಜಿಪಂ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ, ಜೆಜೆ ಹಳ್ಳಿ ಮಂಜುನಾಥ್, ಬಿಜೆಪಿ ಮುಖಂಡ ಎನ್. ಆರ್. ಲಕ್ಷ್ಮೀಕಾಂತ್, ಬಿಜೆಪಿ ತಾಲೂಕು ಅಧ್ಯಕ್ಷ ವಿ. ವಿಶ್ವನಾಥ್, ವಕೀಲ ಶಿವಶಂಕರ್, ಶಿವಪ್ರಸಾದ್ ಗೌಡ, ಮಾಜಿ ಜಿಪಂ ಸದಸ್ಯೆ ರಾಜೇಶ್ವರಿ ಮುಂತಾದವರು ಉಪಸ್ಥಿತರಿದ್ದರು.

Share this article