ಕನ್ನಡಪ್ರಭ ವಾರ್ತೆ ಮಳವಳ್ಳಿ
ಬಿಜೆಪಿಯವರು ಅಂಬಾನಿ, ಅದಾನಿ ಕಿರಾಕಿಗಳು. ಅವರಿಗೆ ಧರ್ಮಾಧಾರಿತವಾಗಿ ಮಾತನಾಡುವುದನ್ನು ಬಿಟ್ಟರೆ ವಿಷಯ ಮತ್ತು ಅಭಿವೃದ್ಧಿ ವಿಚಾರವಾಗಿ ಮಾತನಾಡಲು ಬರುವುದಿಲ್ಲ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಟೀಕಿಸಿದರು.ಪಟ್ಟಣದ ಶೆಟ್ಟಹಳ್ಳಿ ಬಳಿ ಬಿ.ಎಂ.ಪಬ್ಲಿಕ್ ಸ್ಕೂಲ್ ಉದ್ಘಾಟನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಹುಡುಕುವುದು ಬಿಜೆಪಿಯ ಗುಣ ಎಂದು ಹಲಾಲ್ ಬಜೆಟ್ ಟೀಕೆಗೆ ತಿರುಗೇಟು ನೀಡಿದರು.ಬಿಜೆಪಿಯವರು ಯಾವ ವರ್ಗವನ್ನೂ ಪ್ರೀತಿಸಿದವರಲ್ಲ. ಧರ್ಮದ ಹೆಸರಿನಲ್ಲಿ ರಾಷ್ಟ್ರದ ಹೊಡೆಯಲು ಹೊರಟವರು. ವಿಷಯನೇ ಇಲ್ಲದೆ ಬಗ್ಗೆ ಪ್ರತಿಭಟನೆ ಮಾಡುತ್ತಾರೆ ಅಂದರೆ ಅದು ಅವರ ಬೌದ್ಧಿಕ ಮಟ್ಟ ತೋರಿಸುತ್ತದೆ ಎಂದರು.
ಬಿಜೆಪಿಯವರು ಗರ್ನರ್ ಭಾಷಣದಲ್ಲಿ ಸುಳ್ಳು ಹೇಳಿಸಿದ್ದೀರಿ ಅಂತ ಹೇಳಿದ್ದರು. ಆದರೆ, ಯಾವುದನ್ನು ಸುಳ್ಳು ಹೇಳಿಸಿದ್ದೀರಿ ಅಂತ ಹೇಳಲಿಲ್ಲ. ಅವರ ಟೀಕೆಗಳಿಗೆ ಸದನದಲ್ಲಿ ಉತ್ತರ ಕೊಡುತ್ತೇವೆ ಎಂದರು.ಬಜೆಟ್ ನಲ್ಲಿ ದಲಿತರಿಗೆ ಅನ್ಯಾಯ ಮಾಡಿದ್ದೀರಿ ಎಂಬ ಛಲವಾದಿ ನಾರಾಯಣಸ್ವಾಮಿ ಆರೋಪಕ್ಕೆ ನಾರಾಯಣಸ್ವಾಮಿ ಪರಿಶಿಷ್ಟ ಜನಾಂಗಕ್ಕೆ ವಾರಸುದಾರರಾಗಲು ಸಾದ್ಯವಿಲ್ಲ. ಮಾತಿನಲ್ಲಿ ಇತಿಮಿತಿ ಇಟ್ಟುಕೊಂಡು ಮಾತನಾಡಬೇಕು. ಮೇಲ್ಮನೆ ವಿರೋಧ ಪಕ್ಷದ ನಾಯಕನಾಗಿ ಮಾಡಿದ್ದಾರೆ. ಅದಕ್ಕೆ ಅವರು ಸಿದ್ದಾಂತಗಳನ್ನು ಬದಲಾಯಿಸಿಕೊಂಡು ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ನಾರಾಯಣಸ್ವಾಮಿ ಕಾಂಗ್ರೆಸ್‌ನಲ್ಲಿ ಇದ್ದಾಗ ಅವರ ಸಿದ್ಧಾಂತ ಏನಿತ್ತು. ಬಿಜೆಪಿಗೆ ಹೋದ ಮೇಲೆ ಅವರ ಸಿದ್ಧಾಂತ ಏನಾಯಿತು.ಮಾತನಾಡೋದಕ್ಕೆ ಹೋದರೆ ನಾನು ಬಹಳ ಮಾತನಾಡುತ್ತೇನೆ. ರಾಜಕೀಯವಾಗಿ ಆರೋಗ್ಯ ಪೂರ್ಣ ವ್ಯಕ್ತಿಗೆ ಉತ್ತರ ಕೊಡಬಹುದು. ಅವರು ರಾಜಕೀಯವಾಗಿ ಆರೋಗ್ಯ ಪೂರ್ಣ ವ್ಯಕ್ತಿಯಲ್ಲ. ಅವಕಾಶಕ್ಕಾಗಿ ಸಿದ್ಧಾಂತ ಬದಲಾಯಿಸಿಕೊಂಡು ಹೋದವರಿಗೆ ಉತ್ತರ ಕೊಡಲ್ಲ ಎಂದರು.
ಒಗ್ಗಟ್ಟಿನಿಂದ ಹೋಗುವಂತೆ ಸಿದ್ದು ಡಿಕೆಶಿಗೆ ಖರ್ಗೆ ಸಲಹೆ ನೀಡಿರುವುದು ಅನುಭವದ ಮಾತಾಗಿದೆ. ಅವರ ಸಲಹೆ ಸೂಚನೆ ಕಾಂಗ್ರೆಸಿಗರು ಮೀರಲ್ಲ. ಅವರ ಮಾತಿಗೆ ನಮ್ಮ ಸಹಮತ ಇದೆ ಎಂದರು.