ಧಾರವಾಡ:
ರಾಜ್ಯಪಾಲರು ಬಿಜೆಪಿ-ಜೆಡಿಎಸ್ ಕೈಗೊಂಬೆಯಾಗಿ ವರ್ತಿಸುತ್ತಿರುವುದು ಮುಡಾ ಹಗರಣ ಸೃಷ್ಟಿಸಿರುವುದರಿಂದಲೇ ಗೊತ್ತಾಗುತ್ತದೆ. ಅನವಶ್ಯಕವಾಗಿ ಮುಖ್ಯಮಂತ್ರಿಗಳನ್ನು ಈ ಹಗರಣದಲ್ಲಿ ಎಳೆದು ತಂದಿದ್ದು, ಕೂಡಲೇ ರಾಷ್ಟ್ರಪತಿಗಳು ರಾಜ್ಯಪಾಲರನ್ನು ವಜಾಗೊಳಿಸಬೇಕೆಂದು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಿದರು.
ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಮಾತನಾಡಿ, ತಮ್ಮ ಮೇಲಿನ ಆರೋಪಕ್ಕೆ ಸ್ವತಃ ತನಿಖಾ ಆಯೋಗ ರಚಿಸಿರುವ ದೇಶದಲ್ಲಿಯೇ ಏಕೈಕ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಎಂಬುದು ವಿರೋಧಪಕ್ಷಗಳಿಗೆ ಅರ್ಥವಾಗಬೇಕಿತ್ತು. ಈ ಹಿಂದೆಯೂ ಸಹ ಹಿಂದುಳಿದ ವರ್ಗಗಳ ನಾಯಕರಾದ ದಿ. ದೇವರಾಜ ಅರಸು, ದಿ. ಎಸ್. ಬಂಗಾರಪ್ಪ, ವೀರಪ್ಪ ಮೊಯ್ಲಿ, ದಿ. ಧರ್ಮಸಿಂಗ್ ಮತ್ತಿತರರ ವಿರುದ್ಧ ಇಂತಹುದೇ ಆಧಾರರಹಿತ ಷಡ್ಯಂತ್ರ ರೂಪಿಸಲಾಗಿತ್ತು. ಈಗ ಶೋಷಿತ ಸಮುದಾಯಗಳು ಬಹಳ ಜಾಗೃತವಾಗಿವೆ ಎಂಬುದನ್ನು ಮರೆತು, ಸಮಾಜವಾದದ ಹಿನ್ನೆಲೆಯಿಂದ ಬಂದಿರುವ ಸಿದ್ದರಾಮಯ್ಯನವರ ಮೇಲೆ ಷಡ್ಯಂತ್ರ ರೂಪಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇದು ರಾಷ್ಟ್ರಪತಿಗೆ ಕೊಡುತ್ತಿರುವ ಎಚ್ಚರಿಕೆಯ ಮನವಿ. ಇದಕ್ಕೆ ರಾಷ್ಟ್ರಪತಿ ಕ್ರಮ ತೆಗೆದುಕೊಳ್ಳದೇ ಹೋದಲ್ಲಿ ರಾಜ್ಯದ ಜನರು ದಂಗೆ ಎದ್ದರೆ ರಾಷ್ಟ್ರಪತಿ ಹಾಗೂ ಕೇಂದ್ರ ಸರ್ಕಾರವೇ ಹೊಣೆ ಎಂದು ಚಿಂಚೋರೆ ಎಚ್ಚರಿಸಿದರು.
ಈ ವೇಳೆ ಮುಖಂಡರಾದ ನಾಗರಾಜ ಗುರಿಕಾರ, ಆನಂದ ಮುಶಣ್ಣವರ, ಹನುಮಂತ ಕೊರವರ, ಪಿ.ಕೆ. ನೀರಲಕಟ್ಟಿ, ಆನಂದ ಜಾಧವ ಮತ್ತಿತರರು ಇದ್ದರು.