ಕನ್ನಡಪ್ರಭ ವಾರ್ತೆ ಕುಣಿಗಲ್ ನನ್ನನ್ನು ಸೋಲಿಸುವ ಉದ್ದೇಶದಿಂದ ಬಿಜೆಪಿ ಮತ್ತು ಜೆಡಿಎಸ್ ಒಂದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಆರೋಪಿಸಿದ್ದಾರೆ ಕುಣಿಗಲ್ ಪಟ್ಟಣದ ಖಾಸಗಿ ಸಮುದಾಯ ಭವನದ ಆವರಣದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಕಳೆದ ಮೂರು ಬಾರಿ ಸಂಸದನಾಗಿ ಈ ಕ್ಷೇತ್ರದಲ್ಲಿ ಕಾರ್ಯನಿರ್ವ ಹಿಸಿದ್ದೇನೆ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಸಮಸ್ಯೆಗಳನ್ನು ಬಗೆಹರಿಸಿದ್ದೇನೆ. ನನ್ನ ಅಭಿವೃದ್ಧಿ ಸಹಿಸದ ಹಲವಾರು ಬೇರೆ ಪಕ್ಷದ ಶಾಸಕರು ವಿಧಾನಸಭೆಯಲ್ಲಿ ನನ್ನ ಬಗ್ಗೆ ಪ್ರಶ್ನಿಸಿದ್ದಾರೆ. ಕುಣಿಗಲ್ ತಾಲೂಕಿಗೆ 25 ವರ್ಷಗಳಿಂದ ಅನ್ಯಾಯವಾಗಿದ್ದು ಅದನ್ನು ಸರಿಪಡಿಸಲು ನಾನು ಕಾರ್ಯನಿರ್ವಹಿಸುವುದರ ಜೊತೆಗೆ 950 ಕೋಟಿ ರು.ವೆಚ್ಚದಲ್ಲಿ ಸಂಪರ್ಕ ಕಾಲುವೆಯನ್ನು ಅನುಷ್ಠಾನ ಮಾಡಿ ಕಾಮಗಾರಿ ಪ್ರಾರಂಭಿಸಿದ್ದೇನೆ ಎಂದರು.
ಕೇಂದ್ರಕ್ಕೆ ಕೊಟ್ಟ ತೆರಿಗೆ ಹಣವನ್ನು ವಾಪಸ್ ಕೊಡಲು ಆಗದೆ ನನ್ನನ್ನು ದೇಶದ್ರೋಹಿ ಎಂದು ಬಿಂಬಿಸುತ್ತಿರುವ ಬಿಜೆಪಿಗರು ಅನ್ಯ ರಾಜ್ಯಗಳಲ್ಲೂ ಕೂಡ ನನ್ನ ಪ್ರಚಾರ ಮಾಡುತ್ತಿದ್ದಾರೆ. ಎರಡು ಪಕ್ಷದವರಿಗೆ ಅತ್ಯಂತ ಭಯವಿದೆ. ಮಹಿಳೆಯರಿಗೆ ನಾವು ನೀಡಿರುವ ಸೌಲತ್ತುಗಳನ್ನು ಮನವರಿಕೆ ಮಾಡಕೊಡಬೇಕು. ಪ್ರತಿ ಮನೆಗಳಿಗೆ ಹೋಗಿ ಮತ ಕೇಳಿ. ನೀವು ಒಂದು ವಾರ ನನಗೋಸ್ಕರ ಕೆಲಸ ಮಾಡಿದರೆ ನಾನು 5 ವರ್ಷ ನಿಮಗೋಸ್ಕರ ದುಡಿಯುತ್ತೇನೆ ಎಂದರು,
ಕುಣಿಗಲ್ ತಾಲೂಕಿನಲ್ಲಿ ಅಣ್ಣ-ತಮ್ಮಂದಿರು ನನ್ನಿಂದ ಬೇರೆ ಆಗಿಲ್ಲ. ಅವರವರ ರಾಜಕೀಯ ಲಾಭಕ್ಕಾಗಿ ಬೇರೆ ಆಗಿದ್ದರೆ ಅವರು ಒಂದಾದರೂ ಕೂಡ ನಮಗೆ ಯಾವುದೇ ಭಯವಿಲ್ಲ.ಕುಣಿಗಲ್ ಶಾಸಕ ಡಾ.ರಂಗನಾಥ್ ಮಾತನಾಡಿ, ಕೋವಿಡ್ ಸಮಯದಲ್ಲೂ ಕೂಡ ನಮ್ಮ ಜೊತೆ ಇದ್ದು ಕೆಲಸ ಮಾಡಿದ ಸಂಸದರು ಡಿಕೆ ಸುರೇಶ್. ಅವರಿಂದ ನಮಗೆ ಆದಷ್ಟು ಒಳ್ಳೆಯ ಕೆಲಸಗಳು ಆಗಿದೆ. ಅದಕ್ಕಾಗಿ ಅವರನ್ನು ನಾವು ತಪ್ಪದೆ ಗೆಲ್ಲಿಸಬೇಕೆಂದರು,