ಬಿಜೆಪಿಯಿಂದ ಬರೀ ಜಾತಿ, ಧರ್ಮದ ರಾಜಕಾರಣ: ಶಾಸಕ ಶ್ರೀನಿವಾಸ ಮಾನೆ

KannadaprabhaNewsNetwork |  
Published : Apr 14, 2025, 01:16 AM IST
ಫೋಟೊ: 13ಎಚ್‌ಎನ್‌ಎಲ್2ಹಾನಗಲ್‌ನಲ್ಲಿ ನಡೆದ ಹಾನಗಲ್ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಬೂತ್‌ಮಟ್ಟದ ಅಧ್ಯಕ್ಷರು, ಕಾರ್ಯದರ್ಶಿಗಳ ಸಭೆಯಲ್ಲಿ ಶಾಸಕ ಶ್ರೀನಿವಾಸ ಮಾನೆ ಮಾತನಾಡಿದರು. | Kannada Prabha

ಸಾರಾಂಶ

ಸಣ್ಣಪುಟ್ಟ ವ್ಯತ್ಯಾಸ, ಭಿನ್ನಾಭಿಪ್ರಾಯಗಳನ್ನೆಲ್ಲ ಬದಿಗೆ ಸರಿಸಿ ಕಾಂಗ್ರೆಸ್ ಬೇರುಗಳನ್ನು ಸದೃಢಗೊಳಿಸಬೇಕಿದೆ. ಬಿಜೆಪಿ ಏನೇ ತಂತ್ರಗಳನ್ನು ಹೂಡಿದರೂ ಅವು ಫಲಿಸದಂತೆ ಪ್ರತಿತಂತ್ರ ಹೂಡಬೇಕಿದೆ.

ಹಾನಗಲ್ಲ: ಬಿಜೆಪಿ ಎಂದಿಗೂ ಯೋಜನೆ, ಕಾರ್ಯಕ್ರಮಗಳ ಹೆಸರಿನಲ್ಲಿ ರಾಜಕಾರಣ ಮಾಡುವುದಿಲ್ಲ. ಬದಲಿಗೆ ಧರ್ಮ, ಜಾತಿಗಳನ್ನು ಎಳೆದು ತರುತ್ತದೆ. ದ್ವೇಷ ಹರಡಿ ಲಾಭ ಗಿಟ್ಟಿಸಿಕೊಳ್ಳಲು ಯತ್ನಿಸುತ್ತದೆ. ಸಂವಿಧಾನದ ಮೇಲೆ ನಿಷ್ಠೆ, ನಂಬಿಕೆ ಇಟ್ಟಿರುವ ಕಾಂಗ್ರೆಸ್ ಶರಣರು, ಸೂಫಿಗಳು ಪ್ರತಿಪಾದಿಸಿದ ಮಾನವೀಯ ಧರ್ಮದ ಉಳಿವಿಗೆ ಹೋರಾಟ ನಡೆಸಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.ಇಲ್ಲಿನ ತಮ್ಮ ಜನಸಂಪರ್ಕ ಕಚೇರಿಯಲ್ಲಿ ನಡೆದ ಹಾನಗಲ್ಲ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಬೂತ್‌ ಮಟ್ಟದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಸಭೆಯಲ್ಲಿ ಮಾತನಾಡಿದರು.

ಬೆಂಕಿ ಹಚ್ಚಲು ಸಣ್ಣದೊಂದು ಕಿಡಿ ಸಾಕು. ಬೆಂಕಿಯನ್ನು ಆರಿಸಿ ಪರಿಸ್ಥಿತಿ ತಿಳಿಗೊಳಿಸಲು ಸಾಕಷ್ಟು ಸಮಯಾವಕಾಶ ಹಿಡಿಯಲಿದೆ. ಹಾಗಾಗಿ ಬೆಂಕಿ ಹಚ್ಚಲು ಅವಕಾಶ ಸಿಗದಂತೆ ನಾವೆಲ್ಲರೂ ಜಾಗರೂಕರಾಗಬೇಕಿದೆ.

ಸಣ್ಣಪುಟ್ಟ ವ್ಯತ್ಯಾಸ, ಭಿನ್ನಾಭಿಪ್ರಾಯಗಳನ್ನೆಲ್ಲ ಬದಿಗೆ ಸರಿಸಿ ಕಾಂಗ್ರೆಸ್ ಬೇರುಗಳನ್ನು ಸದೃಢಗೊಳಿಸಬೇಕಿದೆ. ಬಿಜೆಪಿ ಏನೇ ತಂತ್ರಗಳನ್ನು ಹೂಡಿದರೂ ಅವು ಫಲಿಸದಂತೆ ಪ್ರತಿತಂತ್ರ ಹೂಡಬೇಕಿದೆ. ಕಾಂಗ್ರೆಸ್‌ನಿಂದ ಮಾತ್ರ ಜನಕಲ್ಯಾಣ ಸಾಧ್ಯವಿದೆ. ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯಬಲ್ಲ ಶಕ್ತಿ ಕೇವಲ ಕಾಂಗ್ರೆಸ್ಸಿಗಷ್ಟೇ ಇದೆ. ಹಾಗಾಗಿ ಕೆಳಹಂತದಲ್ಲಿ ಸದಾ ಶಕ್ತಿ ತುಂಬುತ್ತಿರುವ ಕಾರ್ಯಕರ್ತರು ವಾಸ್ತವ ಅರಿತು ಜನಜಾಗೃತಿ ಮೂಡಿಸಬೇಕಿದೆ ಎಂದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ ಮರಗಡಿ ಮಾತನಾಡಿ, ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಶಾಸಕ ಶ್ರೀನಿವಾಸ ಮಾನೆ ಶಕ್ತಿ ತುಂಬುತ್ತಿದ್ದಾರೆ. ವ್ಯವಸ್ಥಿತ ಕಚೇರಿ ತೆರೆದು ಜನರ ದೂರು, ದುಮ್ಮಾನಗಳಿಗೆ ಸ್ಪಂದಿಸುತ್ತಿದ್ದಾರೆ. ವಾರದಲ್ಲಿ ಕನಿಷ್ಠ ಮೂರ್ನಾಲ್ಕು ದಿನ ಕ್ಷೇತ್ರದಲ್ಲಿಯೇ ಲಭ್ಯರಿದ್ದು ಸರ್ವತೋಮುಖ ಅಭಿವೃದ್ಧಿಗೆ ಕಾಳಜಿ ವಹಿಸಿದ್ದಾರೆ ಎಂದರು.

ಘಂಟಿ ಆಂಜನೇಯ ಜಾತ್ರಾ ಮಹೋತ್ಸವ

ಶಿಗ್ಗಾಂವಿ: ತಾಲೂಕಿನ ಹಾಳನೆಲ್ಲೂರ ಗ್ರಾಮದ ಘಂಟಿ ಆಂಜನೇಯ ಜಾತ್ರಾ ಮಹೋತ್ಸವ ಹಾಗೂ ಹನುಮ ಜಯಂತಿ ಅಂಗವಾಗಿ ಆಂಜನೇಯ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.ಹನುಮ ದೇವರ ಮೂರ್ತಿಗೆ ರುದ್ರಾಬಿಷೇಕ, ಕುಂಕುಮಾರ್ಚನೆ, ಹೋಮ, ಭಜನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಹಾವೇರಿ ಕಲಾವಿದ ಶಿವಬಸವ ಬಣಕಾರ, ಜಗದೀಶ ಹುರಳಿ ಹಾಗೂ ತವರಮೆಳಳ್ಳಿ ಜಾನಪದ ಕಲಾ ತಂಡದಿಂದ ಭಕ್ತಿಗೀತೆ, ಜಾನಪದ ಗೀತೆಗಳ ಗಾಯನ ಮನರಂಜಿಸಿತು.

ಬಾಪುಗೌಡ ಪಾಟೀಲ, ನಿಂಗನಗೌಡ ಪಾಟೀಲ, ಕುಮಾರ ಉಂಕಿ, ರವಿ ನರೇಗಲ್ಲ, ಮಲ್ಲಿಕಾರ್ಜುನ ನರೇಗಲ್ಲ, ನಟರಾಜ ಮಾಮ್ಲೆದೇಸಾಯಿ, ಮಲ್ಲೇಶ ಯಲಿಗಾರ, ಉಮೇಶ ಚಿಲ್ಲೂರ, ಬಸವರಾಜ ಚಿಲ್ಲೂರ, ವೀರಣ್ಣ ಯಲಿಗಾರ, ಮುದಕಪ್ಪ ಹುಚ್ಚಯ್ಯನವರಮಠ ಇದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ