ರಾಮನಗರ: ನಾರಿ ಶಕ್ತಿ ವಂದನಾ ಅಧಿನಿಯಮ ಅರ್ಥಾತ್ ಮಹಿಳಾ ಮೀಸಲಾತಿ ವಿಧೇಯಕಕ್ಕೆ ಲೋಕಸಭೆಯಲ್ಲಿ ಸೋಲಾಗಲು ಕಾರಣವಾದ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟದ ವಿರುದ್ಧ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಐಸಿಹಾಸಿಕ ವಿಧೇಯಕವನ್ನು ಇಂಡಿಯಾ ಮೈತ್ರಿಕೂಟ ಸೋಲಿಸಿದೆ. ಸ್ತ್ರೀಯರ ಉನ್ನತಿಗೆ ಅಡ್ಡಗಾಲು ಹಾಕಿದ ವಿಪಕ್ಷಗಳನ್ನು ಕ್ಷಮಿಸಲ್ಲ. ರಾಜಕೀಯ ಜಿದ್ದಿಗೆ ಬಿದ್ದ ಸ್ತ್ರೀ ವಿರೋಧಿಗಳು ಬಿಲ್ ಸೋಲಿಸಿದ್ದಾರೆ. ಇದು ಮಹಿಳಾ ಮೀಸಲಾತಿ ಬಿಲ್ ಸೋಲಲ್ಲ, ದೇಶದ ಸೋಲು. ದೇಶದ ಜನತೆ ಎಂದಿಗೂ ಕಾಂಗ್ರೆಸ್ ಪಕ್ಷವನ್ನು ಕ್ಷಮಿಸುವುದಿಲ್ಲ ಎಂದು ಕಿಡಿಕಾರಿದರು.
ಕಾಂಗ್ರೆಸ್ನವರು ಮಹಿಳಾ ವಿರೋಧಿಗಳು. ಅವರು ಮಸೂದೆಯನ್ನು ಪಾಸ್ ಮಾಡಿಸಬೇಕಾಗಿತ್ತು. ಇದರಿಂದ ಮಹಿಳೆಯರಿಗೆ ಹೆಚ್ಚು ಪ್ರಾತಿನಿಧ್ಯ ಸಿಗುತ್ತಿತ್ತು. ಕಾಂಗ್ರೆಸ್‌ನವರ ಕುತಂತ್ರದಿಂದಾಗಿ ಮಸೂದೆಗೆ ಸೋಲಾಗಿದೆ ಎಂದು ಪ್ರತಿಭಟನಾಕಾರು ಟೀಕಿಸಿದರು.ಇಂಡಿಯಾ ಮೈತ್ರಿಕೂಟಕ್ಕೆ ನಾಚಿಕೆಯಾಗಬೇಕು:
ವಿಧಾನಸಭೆಗಳು ಹಾಗೂ ಸಂಸತ್ತಿನಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ನಾರಿಶಕ್ತಿ ವಂದನಾ ಮಸೂದೆಯನ್ನು ಲೋಕಸಭೆಯಲ್ಲಿ ಸೋಲಿಸಿರುವ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟಕ್ಕೆ ನಾಚಿಕೆಯಾಗಬೇಕು. ಮಹಿಳಾ ಮೀಸಲಾತಿ ವಿಧೇಯಕವನ್ನು ಬೆಂಬಲಿಸದೆ, ಕಾಂಗ್ರೆಸ್ ಪಕ್ಷ ಮಹಿಳಾ ವಿರೋಧಿ ಎಂಬುದನ್ನು, ಮಸೂದೆಗೆ ವಿರುದ್ಧ ಮತಚಲಾಯಿಸುವ ಮೂಲಕ ಸಾಬೀತು ಪಡಿಸಿದೆ ಎಂದು ಕಿಡಿಕಾರಿದರು.
ಬಿಜೆಪಿ ರಾಜ್ಯ ವಕ್ತಾರ ರುದ್ರದೇವರು ಮಾತನಾಡಿ, ಮಹಿಳಾ ಮೀಸಲಾತಿ ವಿರೋಧಿಸುವ ಮೂಲಕ ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟದ ವ್ಯಾಘ್ರ ಮುಖವಾಡ ಕಳಚಿದೆ. ಕಾಂಗ್ರೆಸ್ ಪಕ್ಷವು ಮಹಿಳೆಯರ ಪರವಾಗಿಲ್ಲ, ವಿರೋಧವಾಗಿದೆ ಎಂಬುದು ಇದರಿಂದ ಬಯಲಾಗಿದೆ ಎಂದರು.
ಪ್ರತಿಭಟನೆಯಲ್ಲಿ ಬಿಜೆಪಿ ಮಹಿಳಾ ಘಟಕದ ಪದಾಧಿಕಾರಿಗಳಾದ ಗೀತಾಂಜಲಿ, ಮಮತ, ಪೂರ್ಣಿಮಾ, ಫಾತೀಮಾ , ದೇವಿಕಾ, ಹೇಮಾವತಿ, ಚಂದ್ರಪ್ರಭಾ , ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಮುಖಂಡರಾದ ಬೊಮ್ಮೇಗೌಡ, ಕಾಳಯ್ಯ, ಎಸ್.ಆರ್.ನಾಗರಾಜ್, ಬಿ.ನಾಗೇಶ್ , ವಿ.ರಾಜು, ಚೇತನ್ ಕುಮಾರ್, ರಂಗಸ್ವಾಮಿ, ಸಿದ್ದು, ಶಿವಮುತ್ತು ಮತ್ತಿತರರು ಭಾಗವಹಿಸಿದ್ದರು.
ರಾಮನಗರದ ಐಜೂರು ವೃತ್ತದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.