ಪೆಟ್ರೋಲ್ ₹3, ಡೀಸೆಲ್ ₹3.50 ಹೆಚ್ಚಳ । ರಾಜ್ಯ ಕಾಂಗ್ರೆಸ್ ಸರ್ಕಾರ ವಿರುದ್ಧ ಮನವಿ ಸಲ್ಲಿಕೆ
ಕನ್ನಡ ಪ್ರಭ ವಾರ್ತೆ, ಮೊಳಕಾಲ್ಮೂರುಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಇಲ್ಲಿನ ಬಿಜೆಪಿ ಕಚೇರಿ ಆವರಣದಿಂದ ಗುರುವಾರ ಮುಖ್ಯ ರಸ್ತೆಯ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿ ತಾಲೂಕು ಆಡಳಿತ ಸೌಧಕ್ಕೆ ಆಗಮಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆಯ ವಿರುದ್ಧ ಮನವಿ ಸಲ್ಲಿಸಿದರು.ಗ್ಯಾರಂಟಿಗಳ ಗುಂಗಿನಲ್ಲಿ ಸ್ಥಾಪಿತವಾದ ಪೂರ್ಣ ಬಹುಮತದ ಸರ್ಕಾರಕ್ಕೆ ಒಂದು ವರ್ಷದ ಸಂಭ್ರಮದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿ ರಾಜ್ಯದ ಜನತೆಗೆ ಹೊಸದೊಂದು ಹೊರೆ ಹೊರೆಸಿ ಸಂಭ್ರಮಿಸುತ್ತಿದೆ. ರಾಜ್ಯದಲ್ಲಿ ಗ್ಯಾರಂಟಿ ಫಲಾನುಭವಿಗಳು ಸಂತಸದಲ್ಲಿರಬೇಕಿತ್ತು ಆದರೆ ಬೆಲೆ ಏರಿಕೆಗಳಿಂದ ಬೇಸತ್ತು ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ನಂತರ ರಾಜ್ಯದಲ್ಲಿ ಪೆಟ್ರೋಲ್-ಡೀಸಲ್ ಮೇಲಿನ ಸುಂಕ ಕ್ರಮವಾಗಿ ₹3 ಮತ್ತು ₹3.50 ಹೆಚ್ಚಳ ಮಾಡಿ ಗ್ಯಾರಂಟಿಗಳಿಗೆ ಹಣ ಹೊಂದಿಸುವಲ್ಲಿ ವಿದ್ಯುತ್, ಬಸ್ ಪ್ರಯಾಣ, ಹಾಲು-ಮೊಸರು, ಸರ್ಕಾರಿ ನೊಂದಣಿ ಕಾರ್ಯ, ಮದ್ಯ, ಬಿತ್ತನೆ ಬೀಜ ಬೆಲೆ ಏರಿಕೆ ಆಗಿವೆ. ಈಗ ಮತ್ತೆ ಅದೇ ನೆಪ ಒಡ್ಡಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಮಾಡಿ ಸಾಮಾನ್ಯ ಜನರಿಗೆ ಹಾಗೂ ಕೃಷಿಕರು, ವ್ಯಾಪಾರಸ್ಥರು, ಮತ್ತು ಕಿರು ಉದ್ಯಮಿಗಳಿಗೆ ಆರ್ಥಿಕ ಭಾರವನ್ನುಂಟುಮಾಡಿದ್ದಾರೆ ಎಂದು ಆರೋಪಿಸಿದರು.15 ಕ್ಕೂ ಹೆಚ್ಚು ಬಾರಿ ಬಜೆಟ್ ಮಂಡಿಸಿದ ಆರ್ಥಿಕ ತಜ್ಞರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ತಕ್ಷಣ ''''''''ಗ್ಯಾರಂಟಿ''''''''ಗಳಿಗೆ ಸಂಪನ್ಮೂಲ ಹೊಂದಿಸಲು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದರೂ, ಇಂದು ಬೆಲೆ ಏರಿಕೆ ಮಾಡಿ ಆ ಮಾತನ್ನು ಸುಳ್ಳಾಗಿಸಿ ಕಾಂಗ್ರೆಸ್ ನುಡಿದಂತೆ ನಡೆಯದ ಸರ್ಕಾರ ಎಂಬುದನ್ನು ಸಾಬೀತುಪಡಿಸಿ ರಾಜ್ಯವನ್ನು ದಿವಾಳಿ ಅಂಚಿಗೆ ತಂದಿದ್ದಾರೆ. ಸಚಿವರು ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದ್ದು ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಹಿಂದೆಂದೂ ಕಂಡರಿಯದಷ್ಟು ಕೊಲೆ ಅತ್ಯಾಚಾರ ನಡೆಯುತ್ತಿವೆ ಎಂದು ಆರೋಪಿಸಿದರು.
ಗ್ಯಾರಂಟಿಗಳ ಭರವಸೆಯಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನೀತಿಗಳಿಂದಾಗಿ ಸಾಮಾನ್ಯ ಜನರ ಬದುಕು ಆತಂತ್ರಕ್ಕೆ ಸಿಲುಕಿದೆ. ಜನರ ಹಿತ ಕಾಯಬೇಕಾದ ಸರ್ಕಾರ ಬೆಲೆ ಏರಿಕೆಯ ಬರೆ ಎಳೆದಿದ್ದಾರೆ. ಈ ಕೂಡಲೇ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಆದೇಶವನ್ನು ಹಿಂಪಡೆದು ರಾಜ್ಯದ ಕೃಷಿಕರ ಮಧ್ಯಮ ವರ್ಗದವರ, ವ್ಯಾಪಾರಸ್ಥರ ಸಣ್ಣ ಉದ್ದಿಮೆದಾರರ ಹಿತ ಕಾಪಾಡಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ, ಮಂಡಲ ಅಧ್ಯಕ್ಷ ಡಾ.ಪಿ.ಎಂ.ಮಂಜುನಾಥ, ಜೆಡಿಎಸ್ ಮುಖಂಡ ವೀರಭದ್ರಪ್ಪ, ಕ್ಷೇತ್ರ ಅಧ್ಯಕ್ಷ ಕರಿಬಸಪ್ಪ, ನಾಯಕನಹಟ್ಟಿ ಮಂಡಲ ಬಿಜೆಪಿ ಅಧ್ಯಕ್ಷ ರಾಮರೆಡ್ಡಿ, ಮೊಗಲಹಳ್ಳಿ ಶ್ರೀರಾಮರೆಡ್ಡಿ, ಮಂಡಲ ಕಾರ್ಯದರ್ಶಿ ಪ್ರಭಾಕರ್, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಲಕ್ಷ್ಮಣ, ಸದಸ್ಯರಾದ ಮಂಜಣ್ಣ, ತಿಪ್ಪೇಸ್ವಾಮಿ, ಟಿ.ಟಿ.ರವಿ ಕುಮಾರ್, ಯುವ ಮೋರ್ಛಾ ಹರೀಶ್ ಕಡೆ ತೋಟ, ದೇವಸಮುದ್ರ ಎಸ್.ಆರ್. ಪರಮೇಶ್ವರಪ್ಪ, ಕೋನಸಾಗರ ಮಹೇಶ್, ಸೂರಮ್ಮನಹಳ್ಳಿ ನಾಗರಾಜ, ತಿಮ್ಲಾಪುರ ಮೂರ್ತಿ, ಡಿಶ್ ರಾಜು, ಚನ್ನಗಾನ ಹಳ್ಳಿ ಮಲ್ಲೇಶ್, ಸೂಲೇನಹಳ್ಳಿ ದರ್ಶನ್ ಕುಮಾರ್, ಸಿದ್ದಾರ್ಥ, ಕಿರಣ್ ಗಾಯಕ ವಾಡ್ ಇದ್ದರು.