2ನೇ ಹಂತದ ವಕ್ಫ್‌ ಹೋರಾಟಕ್ಕೆ ಬಿಜೆಪಿ ರೆಬೆಲ್‌ ಟೀಂ ರೆಡಿ : ಜನವರಿ 4ರಂದು ಕಂಪ್ಲಿಯಲ್ಲಿ ಸಮಾವೇಶ

KannadaprabhaNewsNetwork |  
Published : Dec 29, 2024, 01:20 AM ISTUpdated : Dec 29, 2024, 05:04 AM IST
28ಎಚ್‌ಪಿಟಿ2- ಹೊಸಪೇಟೆಯ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ, ಮಾಜಿ ಶಾಸಕ ಕುಮಾರ ಬಂಗಾರಪ್ಪ ಇದ್ದರು. | Kannada Prabha

ಸಾರಾಂಶ

ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ ಜನವರಿ 4ರಂದು ವಕ್ಫ್ ಹೋರಾಟಕ್ಕಾಗಿ ಸಮಾವೇಶ ನಡೆಸಲಾಗುವುದು. ಹೈಕಮಾಂಡ್‌ ನಮಗೆ ಯಾವುದೇ ರೀತಿ ಕಡಿವಾಣ ಹಾಕಿಲ್ಲ. ಇಲ್ಲದಿದ್ದರೆ ನಾವು ಮಾಧ್ಯಮದ ಎದುರು ಬಂದು ಎರಡನೇ ಹಂತದ ಹೋರಾಟಕ್ಕಾಗಿ ಹೇಳಿಕೆ ನೀಡುತ್ತಿರಲಿಲ್ಲ ಎಂದು ಮಾಜಿ ಸಚಿವ ಕುಮಾರ ಬಂಗಾರಪ್ಪ ಹೇಳಿದರು.

ಹೊಸಪೇಟೆ: ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ ಜನವರಿ 4ರಂದು ವಕ್ಫ್ ಹೋರಾಟಕ್ಕಾಗಿ ಸಮಾವೇಶ ನಡೆಸಲಾಗುವುದು. ಹೈಕಮಾಂಡ್‌ ನಮಗೆ ಯಾವುದೇ ರೀತಿ ಕಡಿವಾಣ ಹಾಕಿಲ್ಲ. ಇಲ್ಲದಿದ್ದರೆ ನಾವು ಮಾಧ್ಯಮದ ಎದುರು ಬಂದು ಎರಡನೇ ಹಂತದ ಹೋರಾಟಕ್ಕಾಗಿ ಹೇಳಿಕೆ ನೀಡುತ್ತಿರಲಿಲ್ಲ ಎಂದು ಮಾಜಿ ಸಚಿವ ಕುಮಾರ ಬಂಗಾರಪ್ಪ ಹೇಳಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡನೇ ಹಂತದ ವಕ್ಫ್ ಹೋರಾಟಕ್ಕಾಗಿ ಬಸನಗೌಡ ಪಾಟೀಲ್‌ ಯತ್ನಾಳ್, ಪ್ರತಾಪ್ ಸಿಂಹ, ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ ಸೇರಿದಂತೆ ಅನೇಕ ನಾಯಕರು ಪ್ರವಾಸ ಮಾಡುತ್ತಿದ್ದೇವೆ. ಪ್ರಧಾನಿ ಮೋದಿಯವರು ವಕ್ಫ್‌ ವಿಚಾರದಲ್ಲಿಯೂ ಮಾತನಾಡಿದ್ದಾರೆ. ವಕ್ಫ್‌ ಕಾನೂನು ತಿದ್ದುಪಡಿಗೆ ಮುಂದಾಗಿದ್ದಾರೆ. ಇದಕ್ಕಾಗಿ ಜಂಟಿ ಸದನ ಸಮಿತಿ ರಚನೆ ಮಾಡಿದ್ದು, ಇದರ ಅಧ್ಯಕ್ಷರು ಕೂಡ ನಮ್ಮ ಕಾರ್ಯಕ್ಕೆ ಬೆನ್ನು ತಟ್ಟಿದ್ದಾರೆ ಎಂದರು.

2013ರಲ್ಲಿ ಕಾಂಗ್ರೆಸ್‌ ವಕ್ಫ್‌ ಕಾಯ್ದೆ ತಿದ್ದುಪಡಿ ಮಾಡಿದೆ. ವಕ್ಫ್ ಟ್ರಿಬ್ಯುನಲ್ ರಚನೆ ಮಾಡಿದೆ. ಸಚಿವ ಜಮೀರ್ ಅಹಮ್ಮದ್ ಖಾನ್‌ ಜಿಲ್ಲಾ ಅದಾಲತ್ ಮಾಡಿದ್ದಾರೆ. ಸರ್ಕಾರಿ, ಖಾಸಗಿ, ರೈತರ ಜಮೀನು ವಕ್ಫ್ ಆಸ್ತಿಯಲ್ಲಿ ಸೇರ್ಪಡೆ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲವೂ ರದ್ದು ಅಂತ ಹೇಳಿದ್ದಾರೆ. ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ ಎಂದರು.

ರಾಜ್ಯದಲ್ಲಿ 65 ಸಾವಿರ ಆಸ್ತಿಗಳು ಇದ್ದು, 1.45 ಲಕ್ಷ ಎಕರೆ ಇದೆ. ಬಳ್ಳಾರಿ- ವಿಜಯನಗರ ಜಿಲ್ಲೆಯಲ್ಲೇ 3568 ಆಸ್ತಿಗಳಿವೆ. ಜೆಪಿಸಿ ಅಧ್ಯಕ್ಷರು ಕೂಡ ಪ್ರವಾಸ ಮಾಡಿದ್ದಾರೆ. ಪೂರ್ಣ ವರದಿ ಬರಲಿ ಎಂದಿದ್ದಾರೆ. ನಮ್ಮ ಕಾರ್ಯಕ್ಕೂ ಬೆನ್ನು ತಟ್ಟಿದ್ದಾರೆ. ವಕ್ಫ್ ವಿಚಾರದಲ್ಲಿ ನಾವು ಪ್ರವಾಸ ಮಾಡುತ್ತಿದ್ದೇವೆ ಎಂದರು.

ವಿಜಯೇಂದ್ರ ವಿಚಾರ ಬೇಡ:

ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಮಾತನಾಡಿ, ವಕ್ಫ್ ಬೋರ್ಡ್ ವಿಚಾರದಲ್ಲಿ ಎರಡನೇ ಹಂತದ ಹೋರಾಟ ಮಾಡುತ್ತೇವೆ. ಕಂಪ್ಲಿಯಲ್ಲಿ ಜನವರಿ 4ರಂದು ಸಮಾವೇಶ ಮಾಡುತ್ತೇವೆ. 6ನೇ ತಾರೀಖು ಹೋರಾಟ ಮಾಡುತ್ತೇವೆ. ಇನ್ನೊಮ್ಮೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸುತ್ತೇವೆ ಎಂದರು.

ವಕ್ಫ್ ವಿಚಾರದಲ್ಲಿ ಹಿಂದೂ- ಮುಸ್ಲಿಂ ಸಮುದಾಯದವರಿಗೆ ಅನ್ಯಾಯವಾಗಿದೆ. ವಕ್ಫ್ ಕಾಯ್ದೆ ಸಂಪೂರ್ಣವಾಗಿ ತೊಲಗಬೇಕು ಅಂತ ನಾವು ಹೋರಾಟ ಮಾಡುತ್ತೇವೆ. ಪಕ್ಷಾತೀತವಾಗಿ ನಾವು ಹೋರಾಟ ಮಾಡ್ತೇವೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರನೂ ಬರಲಿ, ಮಾಜಿ ಸಚಿವ ಆನಂದ್ ಸಿಂಗ್ ಕೂಡ ಬರಬಹುದು, ಕಾಂಗ್ರೆಸ್ ನಾಯಕರು ಕೂಡ ಬರಲಿ. ನಾವು ಪಕ್ಷಾತೀತವಾಗಿ ಹೋರಾಟ ಮಾಡುತ್ತಿದ್ದೇವೆ ಎಂದರು.

"ನಮ್ಮದು ಯತ್ನಾಳ್ ಬಣವಲ್ಲ, ಒಂದೇ ಬಣ, ಅದು ಬಿಜೆಪಿ ಬಣ. ನಾವು ಹೋರಾಟ ಮಾಡಿದ ಬಳಿಕ ಎಲ್ಲರೂ ಬಂದರು. ಜೆಪಿಸಿ ಸಮಿತಿ ಅಧ್ಯಕ್ಷರು ಕೂಡ ಬಂದರು. ಮಾಧ್ಯಮಗಳಲ್ಲಿ ಪ್ರತ್ಯೇಕ ಬಣ ಎಂದು ಬಿಂಬಿಸಲಾಗುತ್ತಿದೆ. ಬಿಜೆಪಿ ಕಚೇರಿಗಳಲ್ಲೂ ನಾವು ಮುಂದಿನ ದಿನಗಳಲ್ಲಿ ಸಭೆಗಳು ಮಾಡುತ್ತೇವೆ ಎಂದರು.

ಮಾಣಿಪ್ಪಾಡಿ ವರದಿ ಬಗ್ಗೆ ನನಗೆ ಗೊತ್ತಿಲ್ಲ. ಸಿಎಂ ₹150 ಕೋಟಿ ಲಂಚಾವತಾರದ ಬಗ್ಗೆ ಮಾಡಿದ ಆರೋಪದ ಬಗ್ಗೆಯೂ ನನಗೆ ಗೊತ್ತಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿಚಾರ ಸದ್ಯ ಪ್ರಸ್ತಾಪ ಮಾಡಬೇಡಿ. ಈಗ ವಕ್ಫ್‌ ಹೋರಾಟದ ಬಗ್ಗೆ ಮಾತ್ರ ಪ್ರಶ್ನೆ ಕೇಳಿ ಎಂದರು.

ಸಿ.ಟಿ. ರವಿ, ಮುನಿರತ್ನ ಅವರಿಗೆ ನೈತಿಕ ಬೆಂಬಲ ನೀಡುತ್ತೇವೆ. ರಾಜಕಾರಣದಲ್ಲಿ ಎಲ್ಲವೂ ಎದುರಿಸಬೇಕು, ತನಿಖೆ ನಡೆಯುತ್ತಿದೆ. ಸಿ.ಟಿ. ರವಿ ಅವರ ಜೊತೆಗೆ ನಾನು ಮಾತನಾಡಿರುವೆ. ಈ ಎರಡು ಪ್ರಕರಣದ ಬಗ್ಗೆ ತನಿಖೆಯಿಂದ ಎಲ್ಲವೂ ತಿಳಿಯಲಿದೆ ಎಂದರು.

ನಗರಸಭೆ ಅಧ್ಯಕ್ಷ ರೂಪೇಶ್‌ ಕುಮಾರ, ಮುಖಂಡರಾದ ಶ್ರೀನಾಥ್‌, ಜಂಬಯ್ಯ ನಾಯಕ, ತಾರಿಹಳ್ಳಿ ಜಂಬುನಾಥ ಮತ್ತಿತರರಿದ್ದರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ