ಕನ್ನಡಪ್ರಭ ವಾರ್ತೆ ಕಮಲನಗರ
ಪಟ್ಟಣದ ಮಿನಿ ಬಸ್ ನಿಲ್ದಾಣದ ಹತ್ತಿರ ಹಮ್ಮಿಕೊಂಡಿದ್ದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಭಗವಂತ ಖೂಬಾ ಉದ್ಘಾಟಿಸಿ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯ ಯೋಜನೆಗಳನ್ನು ಗ್ರಾಮೀಣ ಪ್ರದೇಶದ ಜನರಿಗೂ ತಲಿಪಿಸುವ ನಿಟ್ಟಿನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಅಭಿಯಾನ ಕಾರ್ಯವೈಖರಿಯಿಂದ ಸಾರ್ವಜನಿಕರ ಭರವಸೆ ಹೆಚ್ಚಿದೆ ಎಂದರು.
ಸರ್ಕಾರದ ಯೋಜನೆಗಳ ಸೌಲಭ್ಯ ಪಡೆದ ಫಲಾನುಭವಿಗಳನ್ನು ಸಂಘಟಿಸುವುದು. ಈ ಯೋಜನೆಗಳಿಂದ ವಂಚಿತರಾದ ಫಲಾನುಭವಿಗಳಿಗೆ ಇದರ ಸೌಲಭ್ಯಗಳು ಸಿಗುವಂತೆ ಮಾಡುವ ಈ ಕಾರ್ಯಕ್ರಮವು ಯಶಸ್ವಿಗೊಳಿಸಬೇಕಾಗಿದೆ. ಅಧಿಕಾರಿಗಳು ಈ ಯೋಜನೆಗಳನ್ನು ಸಾರ್ವಜನಿಕರಿಗೆ ಸಮರ್ಪಕವಾಗಿ ತಲುಪಿಸುವ ಮೂಲಕ ಅರಿವು ಮೂಡಿಸುವಂತಾಗಬೇಕೆಂದು ಎಂದು ತಿಳಿಸಿದರು.ಮೋದಿ ಸರ್ಕಾರದಲ್ಲಿ ಸಂಸದನಾಗಿ 10 ವರ್ಷಗಳಲ್ಲಿ ಬೀದರ್ ಲೋಕಸಭೆ ಕ್ಷೇತ್ರದಲ್ಲಿ ಹೆದ್ದಾರಿ, ಸೋಲಾರ್ ಪಾರ್ಕ, ರೈಲ್ವೆ, ವಿಮಾನ ನಿಲ್ದಾಣ, ಸಿಪೆಟ್ ಕಾಲೇಜು ಮೊದಲಾದ ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವೆ. ನಮ್ಮ ಸರ್ಕಾರದ ಎಲ್ಲಾ ಯೋಜನೆಗಳು ಜನರ ಮನೆ ಬಾಗಿಲಿಗೆ ತಲುಪಿಸಿದ್ದೇನೆ. ನನ್ನ ಕಾರ್ಯವೈಖರಿಯನ್ನು ಮೆಚ್ಚಿ ಪ್ರಧಾನಿ ನರೇಂದ್ರ ಮೋದಿಯವರು ಕೇಂದ್ರದಲ್ಲಿ ಮಂತ್ರಿ ಸ್ಥಾನ ನೀಡಿದ್ದಾರೆ ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷರಾದ ಸುಶೀಲಾ ಮಹೇಶ ಸಜ್ಜನಶೆಟ್ಟಿ ಅಧ್ಯಕ್ಷತೆ ವಹಿಸಿದರು. ಎಸ್‌ಬಿಐ ಬ್ಯಾಂಕ್ ವ್ಯವಸ್ಥಾಪಕ ಸುಮಿತಕುಮಾರ, ನಬಾರ್ಡ್ ಬ್ಯಾಂಕಿನ ವ್ಯವಸ್ಥಾಪಕ ರಾಮರಾವ, ಕರ್ನಾಟಕ ಗ್ರಾಮೀಣ ಬ್ಯಾಂಕನ ವ್ಯವಸ್ಥಾಪಕ ಉದಯಕುಮಾರ, ಪೋಸ್ಟ್ ಕಚೇರಿಯ ವ್ಯವಸ್ಥಾಪಕ ಶಿಖರ ಬಾಬು, ಗ್ರಾಪಂ ಪಿಡಿಒ ರಾಜಕುಮಾರ ತಂಬಾಕೆ, ಮಾಜಿ ತಾಪಂ ಸದಸ್ಯ ನೀಲಕಂಠರಾವ ಕಾಂಬಳೆ, ಮುಖಂಡರಾದ ಗಣಪತರಾವ ಖೂಬಾ, ಬಸವರಾಜ ಪಾಟೀಲ್, ಮಾಧವರಾವ ಚಾಂಗೋಣೆ, ದೇವಾನಂದ ಪಾಟೀಲ್, ಈರಣ್ಣಾ ಕಾರಬಾರಿ ಹಾಗೂ ಅನೇಕರು ಇದ್ದರು.