ಕನ್ನಡಪ್ರಭ ವಾರ್ತೆ ಮಂಗಳೂರು
ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ಸೋಮವಾರ ವಿಭಿನ್ನವಾಗಿ ಪ್ರತಿಭಟನೆ ನಡೆಸಲಾಯಿತು.ನಗರದ ಪಿವಿಎಸ್ ವೃತ್ತದಿಂದ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ವೃತ್ತದವರೆಗೆ ಕಾರನ್ನು ಹಗ್ಗದಿಂದ ಎಳೆದುಕೊಂಡು ಹೋಗುತ್ತಾ ಸಾರ್ವಜನಿಕರಲ್ಲಿ ಭಿಕ್ಷೆ ಬೇಡಿ, ಸ್ಥಳೀಯ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಖರೀದಿಸಿ ಕಾರಿಗೆ ತುಂಬಿಸಲಾಯಿತು.
ಇದೇ ವೇಳೆ ಸ್ಕೂಟರ್, ಬೈಕ್‌ಗಳನ್ನು ಕೂಡ ಕಾರ್ಯಕರ್ತರು ಪೆಟ್ರೋಲ್ ಬಂಕ್‌ವರೆಗೆ ತಳ್ಳಿಕೊಂಡು ಹೋಗಿ ಗಮನ ಸೆಳೆದರು. ‘ಚೆಂಬು ಚೆಂಬು ಪಂಡೆರ್.. ಒಟ್ಟೆತಿಪ್ಪಿ ಕೊರಿಯೆರ್’(ಚೊಂಬು ಚೊಂಬು ಅಂದರು..ಈಗ ತೂತಾದ ಚಿಪ್ಪು ಕೊಟ್ಟರು) ಇತ್ಯಾದಿ ಘೋಷಣೆಗಳು ಮೊಳಗಿದವು.ಇದಕ್ಕೂ ಮೊದಲು ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಸಂಸದ ಕ್ಯಾ.ಬ್ರಿಜೇಶ್ ಚೌಟ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜನಸಾಮ್ಯಾರ ಬದುಕಿಗೆ ಗ್ಯಾರಂಟಿ ಇಲ್ಲವಾಗಿದೆ. ಉಚಿತ ಗ್ಯಾರಂಟಿ ಭರವಸೆ ನೀಡಿ ಜನಸಾಮಾನ್ಯರ ಬದುಕಿಗೆ ಬಲವಾದ ಏಟು ನೀಡಿದೆ ಎಂದು ಹೇಳಿದರು.
ತೈಲ ದರ ಏರಿಕೆ ವಿರುದ್ಧ ಬಿಜೆಪಿ ವ್ಯಾಪಕ ಹೋರಾಟ ಹಮ್ಮಿಕೊಂಡಿದ್ದು, ಇಳಿಸುವವರೆಗೆ ಹೋರಾಟ ಮುಂದುವರಿಸಲಾಗುವುದು ಎಂದು ಹೇಳಿದ ಅವರು, ಪ್ರತಿ ವಸ್ತುವಿನ ದರ ಏರಿಕೆಯಾಗಿದ್ದು, ಜನತೆಗೆ ರಾಜ್ಯ ಸರ್ಕಾರ ಹೊರೆಯಾಗಿ ಪರಿಣಮಿಸಿದೆ. ಜತೆಗೆ ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣಕ್ಕೂ ಇಳಿದಿದೆ. ಈ ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮೋದಿ ಸರ್ಕಾರದ ಯೋಜನೆಗಳೇ ದೊಡ್ಡ ಗ್ಯಾರಂಟಿ ಎಂದರು.ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ರಾಜ್ಯದಲ್ಲಿರೋದು ಪೊಳ್ಳು ಭರವಸೆಯ ಸರ್ಕಾರ. ಜನತೆಯನ್ನು ಮರುಳು ಮಾಡಿ ಅಧಿಕಾರಕ್ಕೆ ಬಂದ ಬಳಿಕ ಇದೀಗ ಹಂತ ಹಂತವಾಗಿ ಜನರ ಮೇಲೆ ಹೊರೆ ಏರಿಸಲು ಶುರುಮಾಡಿದೆ. ಬಡವರ ಪರ ಎಂದು ಹೇಳಿ ಬಡವರನ್ನು ಲೂಟಿ ಮಾಡುವ ಸರ್ಕಾರ ಇದು ಎಂದು ಆರೋಪಿಸಿದರು.
ಶಾಸಕ ಡಿ.ವೇದವ್ಯಾಸ ಕಾಮತ್ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನಿಂದ ಕಂಗೆಟ್ಟ ಕಾಂಗ್ರೆಸ್ ಇದೀಗ ಜನರ ಮೇಲೆ ದ್ವೇಷ ಸಾಧಿಸಲು ಹೊರಟಿದೆ. ಸಿದ್ದರಾಮಯ್ಯ ಸರ್ಕಾರಕ್ಕೆ ಇದು ಶೋಭೆಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಶಾಸಕ ಹರೀಶ್ ಪೂಂಜ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಇದೀಗ ದರ ಏರಿಕೆಯ ಮೂಲಕ ಬಕ್ರೀದ್ ಹಬ್ಬದ ಉಡುಗೊರೆ ನೀಡಿದೆ. ರಾಜ್ಯವನ್ನು ದಿವಾಳಿ ಮಾಡಿದ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಸಾಧನೆ ಶೂನ್ಯ ಎಂದರು.
ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿದರು. ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮಾಜಿ ಮೇಯರ್‌ಗಳಾದ ಪ್ರೇಮಾನಂದ ಶೆಟ್ಟಿ, ಜಯಾನಂದ ಅಂಚನ್, ಉಪಮೇಯರ್ ಸುನೀತಾ, ಪ್ರಮುಖರಾದ ಕ್ಯಾ.ಗಣೇಶ್ ಕಾರ್ಣಿಕ್, ಡಾ. ಮಂಜುಳಾ ರಾವ್, ಪೂಜಾ ಪೈ, ಸುಮನಾ ಶರಣ್, ಕಿಶೋರ್ ಕುಮಾರ್ ಪುತ್ತೂರು, ಸಂತೋಷ್ ಕುಮಾರ್ ರೈ ಬೋಳಿಯಾರ್, ರವೀಂದ್ರ ಶೆಟ್ಟಿ ಉಳಿದೊಟ್ಟು, ಜಗದೀಶ ಶೇಣವ, ನಿತಿನ್ ಕುಮಾರ್, ವಿಕಾಸ್ ಪುತ್ತೂರು ಮತ್ತಿತರರು ಉಪಸ್ಥಿತರಿದ್ದರು.ಫೋಟೊ17ಬಿಜೆಪಿ1,2