ಮೋದಿ ಬಗ್ಗೆ ಖರ್ಗೆ ಹೇಳಿಕೆ ಖಂಡಿಸಿ ಬಿಜೆಪಿ ಕಿಡಿ

KannadaprabhaNewsNetwork |  
Published : Oct 27, 2026, 04:15 AM IST
BJP Protest Freedom Park  4 | Kannada Prabha

ಸಾರಾಂಶ

ಪ್ರಧಾನಿ ಮೋದಿ ಅವರ ದಿವಂಗತ ತಂದೆಯವರ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಕೀಳುಮಟ್ಟದ ಹೇಳಿಕೆ ಖಂಡಿಸಿ ರಾಜ್ಯ ಬಿಜೆಪಿ ನಾಯಕರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪ್ರಧಾನಿ ಮೋದಿ ಅವರ ದಿವಂಗತ ತಂದೆಯವರ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಕೀಳುಮಟ್ಟದ ಹೇಳಿಕೆ ಖಂಡಿಸಿ ರಾಜ್ಯ ಬಿಜೆಪಿ ನಾಯಕರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ನಾಯಕರು ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್‌ ಪಕ್ಷದ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ದೇಶದ ಜನರ ಕ್ಷಮೆಯಾಚಿಸುವಂತೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಆರ್‌.ಅಶೋಕ್‌, ದೇಶ ಮತ್ತು ರಾಜ್ಯದಲ್ಲಿ ಕಾಂಗ್ರೆಸ್‌ ಸರ್ವನಾಶವಾಗಲು ಅಪ್ಪ ಮಲ್ಲಿಕಾರ್ಜುನ ಖರ್ಗೆ ಮತ್ತು ಮಗ ಮರಿ ಖರ್ಗೆ ಸಾಕು. ದೇಶದಲ್ಲಿ ಎಲ್ಲೂ ಕಾಂಗ್ರೆಸ್‌ ಇಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬೈಯುವುದಕ್ಕಾದರೂ ಕಾಂಗ್ರೆಸ್‌ ಇರಲಿದೆ ಎಂದು ಭಾವಿಸಿದ್ದೆವು. ಆದರೆ, ಈ ಅಪ್ಪ-ಮಗನಿಂದ ಕಾಂಗ್ರೆಸ್‌ ಸರ್ವನಾಶ ಆಗಲಿದೆ. ಅರಳು-ಮರಳಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಜಪ ಮಾಡಿಕೊಂಡು ಇರಬೇಕಿತ್ತು. ಆದರೆ, ಅವರು ಪ್ರತಿ ದಿನ ಮೋದಿ ಅವರ ಜಪ ಮಾಡುತ್ತಿದ್ದಾರೆ. ಇವರು ಇಷ್ಟು ಕೀಳು ಮಟ್ಟಕ್ಕೆ ಹೋಗಬಾರದಿತ್ತು ಎಂದು ಕಿಡಿಕಾರಿದರು.

ನಡೆಯಲೂ ಆಗ್ತಿಲ್ಲ:

ಮಲ್ಲಿಕಾರ್ಜುನ ಖರ್ಗೆ ಅವರಿಗೆ ನಡೆಯಲು ಆಗುತ್ತಿಲ್ಲ. ಅದೇ ರೀತಿ ಕಾಂಗ್ರೆಸ್ ಪಕ್ಷಕ್ಕೂ ಸಹ ನಡೆಲಾಗುತ್ತಿಲ್ಲ. ಈ ನಡೆಯಲಾಗದ ಕಾಂಗ್ರೆಸ್ ಕಾಕ್ರೋಚ್ ಪಕ್ಷದ ಜೊತೆ ಹೋಗುತ್ತಿದೆ. ಈ ಹಿಂದೆ ರಾಷ್ಟ್ರೀಯ ಅಧ್ಯಕ್ಷರು ಇಷ್ಟು ಹೊಲಸಾಗಿ ಮಾತನಾಡಿರಲಿಲ್ಲ. ಮೋದಿ ಅವರು ಟೀ ಮಾರುತ್ತಿದ್ದರು ಎಂದು ಖರ್ಗೆ ಹೇಳಿದ್ದರು. ದೇಶದ ಜನ ಉಗಿದು ಉಪ್ಪು ಹಾಕಿದ್ದರಿಂದ ಅದನ್ನು ಬಿಟ್ಟರು.

ಪುರಂದರದಾಸರು ಹೇಳಿದಂತೆ ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ ಎಂಬಂತೆ ಇವರದು ಪರರ ದೂಷಣೆ ಆಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಪಿನಾಯಿಲ್‌, ಹಾರ್ಪಿಕ್‌ನಿಂದ ಖರ್ಗೆ ಬಾಯಿ ಸ್ವಚ್ಛಗೊಳಿಸಬೇಕು:

ಮಲ್ಲಿಕಾರ್ಜುನ ಖರ್ಗೆ ಅವರು ಆಡಿರುವ ಮಾತುಗಳು ಕಾಂಗ್ರೆಸ್ ಪಕ್ಷದ ಹೀನ ಸಂಸ್ಕೃತಿ ತೋರಿಸುತ್ತದೆ. ಒಂದು ವೇಳೆ ಬಿಜೆಪಿಯವರು ನಿಮ್ಮ ಅಪ್ಪನ ಬಗ್ಗೆ ಹೇಳಿದ್ದರೆ ನೀವು ಏನು ಹೇಳುತ್ತಿದ್ದೀರಿ? ಉತ್ತರ ಪ್ರದೇಶದಲ್ಲಿ ಖರ್ಗೆ ಅವರು ಭಾಷಣ ಮಾಡಿದ ಸ್ಥಳ ಶುದ್ಧಗೊಳಿಸಿದ್ದು ಸುದ್ದಿಯಾಗಿತ್ತು. ಈಗ ಅದೇ ಖರ್ಗೆ ಅವರ ಬಾಯಿ ಯಾವುದರಿಂದ ಸ್ವಚ್ಛಗೊಳಿಸಬೇಕು? ಗೋಮೂತ್ರದ ಬದಲು ಪಿನಾಯಿಲ್, ಹಿಟ್, ಹಾರ್ಪಿಕ್ ಹಾಕಬೇಕು. ಮೋದಿ ನಾಲ್ಕನೇ ಬಾರಿ ಪ್ರಧಾನಿ ಆಗುತ್ತಿರುವುದಕ್ಕೆ ಅವರ ಮೇಲೆ ನಿಮಗೆ ಕೋಪ, ಹೊಟ್ಟೆ ಉರಿ ಇದ್ದು, ಸಹಿಸಲಾಗುತ್ತಿಲ್ಲ ಎಂದು ಕಿಡಿಕಾರಿದರು.

ರಾಹುಲ್‌ ದುರಂತ ನಾಯಕ-ಛಲವಾದಿ:

ಮಲ್ಲಿಕಾರ್ಜುನ ಖರ್ಗೆ ಅವರು ರಾಹುಲ್ ಗಾಂಧಿ ಅವರಂತಹ ದುರಂತ ನಾಯಕನ ಸಹವಾಸ ಮಾಡಿ ಪ್ರಧಾನಿ ಮೋದಿ ಅವರನ್ನು ಟೀಕಿಸಿ ಹೇಳಿಕೆ ನೀಡಿರುವುದು ಖಂಡನೀಯ. ಖರ್ಗೆ ಅವರಿಗೆ ಧಿಕ್ಕಾರ ಹೇಳಲೇಬೇಕು. ಕಾಂಗ್ರೆಸ್‌ ಅಧಿಕಾರ ಕಳೆದುಕೊಂಡ ಬಳಿಕ ಹತಾಶರಾಗಿ ನಾಲಿಗೆಗೆ ಇತಿಮಿತಿ ಇಲ್ಲದೆ ಮಾತನಾಡುತ್ತಿದ್ದಾರೆ. ಖರ್ಗೆ ಅವರೇ ನೀವು ಏಕೆ ಇಷ್ಟು ಕನಿಷ್ಟ ಮಟ್ಟಕ್ಕೆ ಇಳಿದಿದ್ದೀರಿ? ಯಾರ ಓಲೈಕೆಗೆ ಹೋಗುತ್ತಿದ್ದೀರಿ ಎಂದು ಪ್ರಶ್ನಿಸಿದರು.

ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿ ಅವರ ತಂದೆ ಕುರಿತು ಕೆಟ್ಟ ಭಾಷೆ ಬಳಸಿದ್ದು ಖಂಡನೀಯ. ಅವರು ತಮ್ಮ ಹೇಳಿಕೆ ಹಿಂಪಡೆದು ಬೇಷರತ್ ಕ್ಷಮೆ ಯಾಚಿಸಬೇಕು.

-ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಮಾಜಿ ಡಿಸಿಎಂ ಮಲ್ಲಿಕಾರ್ಜುನ ಖರ್ಗೆ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಮಾನ, ಮರ್ಯಾದೆ ಇದ್ದರೆ ಖರ್ಗೆ ಅವರು ದೇಶದ ಜನರ ಕ್ಷಮೆಯಾಚಿಸಬೇಕು.

-ಆರ್‌.ಅಶೋಕ್‌, ವಿರೋಧ ಪಕ್ಷದ ನಾಯಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬು ಬೆಳೆಗಾರರ ಸಭೆ ವಿಫಲ: ಪರಿಹಾರವಿಲ್ಲ
ಸವದತ್ತಿ ಯಲ್ಲಮ್ಮ ಕ್ಷೇತ್ರಕ್ಕೆ ₹215 ಕೋಟಿ ಅಭಿವೃದ್ಧಿ ಯೋಜನೆ!