ಜಿಗಜಿಣಗಿಯನ್ನು ಬಿಜೆಪಿ ಸಿಎಂ ಮಾಡಲ್ಲ: ಎಸ್.ಎಂ.ಪಾಟೀಲ‌ ಗಣಿಹಾರ

KannadaprabhaNewsNetwork |  
Published : May 24, 2026, 03:00 AM IST
ಸಿಎಂ ಆಗುವ ಆಸೆಯಿಂದ ಜಿಗಜಿಣಗಿ ಟೀಕೆ ಮಾಡುತ್ತಿದ್ದಾರೆ: ಎಸ್.ಎಂ.ಪಾಟೀಲ‌ ಗಣಿಹಾರ | Kannada Prabha

ಸಾರಾಂಶ

ವಿಜಯಪುರ: ನಾಡಿನ ಜನತೆಗೆ ಗ್ಯಾರಂಟಿ ಕೊಟ್ಟು ಜನಮನ ಗೆದ್ದಿರುವ ಕಾಂಗ್ರೆಸ್ ಸರ್ಕಾರಕ್ಕೆ ಮೂರು ವರ್ಷಗಳು ತುಂಬಿದ ಹಿನ್ನೆಲೆ ಸಾಧನಾ ಸಮಾವೇಶವನ್ನು ಮಾಡಿಕೊಂಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಬಗ್ಗೆ ಹಾಗೂ ಸಾಧನೆಯ ಸರದಾರ ಸಿಎಂ ಸಿದ್ಧರಾಮಯ್ಯನವರ ಬಗ್ಗೆ ಕೇವಲವಾಗಿ ಮಾತನಾಡಿದ ವಿಜಯಪುರದ ಸಂಸದ ರಮೇಶ ಜಿಗಜಿಣಗಿಯವರು ವಿಫಲತೆಯ ಸರದಾರರು. ಪ್ರಧಾನಿ ನರೇಂದ್ರ ಮೋದಿಯವರು ಸುಳ್ಳಿನ ಸರದಾರರು ಎಂದು ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ‌ ಗಣಿಹಾರ ಲೇವಡಿ ಮಾಡಿದರು

ಕನ್ನಡಪ್ರಭ ವಾರ್ತೆ ವಿಜಯಪುರ

ನಾಡಿನ ಜನತೆಗೆ ಗ್ಯಾರಂಟಿ ಕೊಟ್ಟು ಜನಮನ ಗೆದ್ದಿರುವ ಕಾಂಗ್ರೆಸ್ ಸರ್ಕಾರಕ್ಕೆ ಮೂರು ವರ್ಷಗಳು ತುಂಬಿದ ಹಿನ್ನೆಲೆ ಸಾಧನಾ ಸಮಾವೇಶವನ್ನು ಮಾಡಿಕೊಂಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಬಗ್ಗೆ ಹಾಗೂ ಸಾಧನೆಯ ಸರದಾರ ಸಿಎಂ ಸಿದ್ಧರಾಮಯ್ಯನವರ ಬಗ್ಗೆ ಕೇವಲವಾಗಿ ಮಾತನಾಡಿದ ವಿಜಯಪುರದ ಸಂಸದ ರಮೇಶ ಜಿಗಜಿಣಗಿಯವರು ವಿಫಲತೆಯ ಸರದಾರರು. ಪ್ರಧಾನಿ ನರೇಂದ್ರ ಮೋದಿಯವರು ಸುಳ್ಳಿನ ಸರದಾರರು ಎಂದು ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ‌ ಗಣಿಹಾರ ಲೇವಡಿ ಮಾಡಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂಸದ ರಮೇಶ ಜಿಗಜಿಣಗಿ ಅವರು 40 ವರ್ಷಗಳ ಕಾಲ ಸುದೀರ್ಘವಾಗಿ ಶಾಸಕರು, ಸಚಿವರು, ಸಂಸದರಾಗಿದ್ದು ಏನೂ ಸಾಧನೆಯನ್ನೇ ಮಾಡಿಲ್ಲ. ಅಂತಹವರು ಸಿದ್ಧರಾಮಯ್ಯರ ಬಗ್ಗೆ ಕಟುವಾಗಿ ಟೀಕಿಸಿದ್ದು, ಸಂಸದರಿಗೆ ಯಾರನ್ನೂ ಟೀಕೆ ಮಾಡುವ ಅರ್ಹತೆಯೇ ಇಲ್ಲ ಎಂದರು.

ಪಂಚ ಗ್ಯಾರಂಟಿ ಸೇರಿದಂತೆ ಸಿದ್ದರಾಮಯ್ಯನವರ ಸರ್ಕಾರದ ಸಾಧನೆಗಳು ನೂರಾರು ಇವೆ. ಅದನ್ನು ನೋಡುವುದು ಬಿಟ್ಟು, ಕೇವಲ ಟೀಕೆಗಾಗಿ ಟೀಕೆ ಮಾಡಬಾರದು. ಏಳು ಬಾರಿ ಲೋಕಸಭಾ ಸದಸ್ಯರಾಗಿರುವ ಇವರು ಜಿಲ್ಲೆಗೆ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ತಿಳಿಸಬೇಕು ಎಂದು ಸವಾಲು ಹಾಕಿದ ಅವರು, ಹೇಗಾದರೂ ಮಾಡಿ ಸಂಸದ ರಮೇಶ ಜಿಗಜಿಣಗಿ ಅವರು ಸಿಎಂ ಆಗಬೇಕೆಂದು ಅವಸರಕ್ಕೆ ಬಿದ್ದು ಸಿದ್ಧರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ಬಗ್ಗೆ ಹೀಗೆ ಟೀಕೆ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಟೀಕೆ ಮಾಡಿದರೆ ನಾನು ಸಿಎಂ ಅಭ್ಯರ್ಥಿ ಆಗುತ್ತೇನೆ, 2028ಕ್ಕೆ ನನ್ನನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸುತ್ತಾರೆ ಎಂದುಕೊಂಡಿದ್ದಾರೆ. ನಮ್ಮ ಜಿಲ್ಲೆಯವರು ಸಿಎಂ ಆದರೆ ನಮಗೂ ಸಂತಸವೇ ಸರಿ. ಆದರೆ ಬಿಜೆಪಿಯವರು ಇವರನ್ನು ಯಾವ ಕಾಲಕ್ಕೂ ಸಿಎಂ ಮಾಡುವುದಿಲ್ಲ ಎಂದರು.

ವರ್ಷಕ್ಕೆ ಎರಡು ಕೋಟಿ ಉದ್ಯೋಗ ಕೊಡುತ್ತೇನೆ ಎಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಓರ್ವ ಸುಳ್ಳಿನ ಸರದಾರರಾಗಿದ್ದು, ಬಿಜೆಪಿ ಅಧಿಕಾರವಿರುವ ರಾಜ್ಯಗಳಲ್ಲೇ ಐದುಬಾರಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. ಬಿಜೆಪಿ ಆರ್‌.ಎಸ್.ಎಸ್ ಹಿನ್ನೆಲೆಯುಳ್ಳವರು ಅಪರಾಧ ಮಾಡಿದ್ದಾರೆ. ಇದು ವೈಫಲ್ಯ ಅಲ್ಲವೆ? ಇದರ ಬಗ್ಗೆ ಏನಾದರೂ ಕ್ರಮ ಕೈಗೊಳ್ಳಲಾಗಿದೆಯೇ ಎಂದು ಪ್ರಶ್ನಿಸಿದರು.

ಬಹು ಮುಖ್ಯವಾದ ರಫೇಲ್ ಹಗರಣವನ್ನೇ ಇವರು ಮುಚ್ಚಿ ಹಾಕಿದ್ದಾರೆ. ವಾರದಲ್ಲಿ ಎರಡೆರಡು ಬಾರಿ ಸಿಲಿಂಡರ್‌ ಬೆಲೆ ಏರಿಸಿದ್ದಾರೆ. ಪೆಟ್ರೋಲ್‌ ಬೆಲೆ ಏರಿಕೆಯಾಗಿದೆ. ಅಲ್ಲದೆ ದೇಶಕ್ಕೆ ಬಡತನ ಬರುತ್ತದೆ ಎಂದು ಸ್ವತಃ ಪ್ರಧಾನಿಗಳೇ ಜನರನ್ನು ಹೆದರಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ದೇಶದಲ್ಲಿ ಗರೀಬಿ (ಬಡತನ) ಹಟಾವೋ ಎಂಬ ಯೋಜನೆಯನ್ನೇ ಜಾರಿ ಮಾಡಿದ್ದರು ಎಂದು ಹೇಳಿದರು.

ನರೇಂದ್ರ ಮೋದಿ ಸರ್ಕಾರವು ಹಲವು ಉದ್ಯಮಿಗಳ ₹24 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದ್ದಾರೆ. ಇದರ ಹಿಂದಿನ ಉದ್ದೇಶವೇನು? ಎಲೆಕ್ಟ್ರಾಲ್ ಬಾಂಡ್ ಮೂಲಕ ಸಾವಿರಾರು ಕೋಟಿ ಹಣ ವಸೂಲಿ ಮಾಡಿದ್ದಾರೆ. ದೇಶದಲ್ಲಿ ಭಯೋತ್ಪಾದನೆ ಕಡಿಮೆ ಮಾಡುತ್ತೇವೆ ಎಂದು ಹೇಳಿ, 44 ಯೋಧರ ಮಾರಣಹೋಮ‌ದ ಕುರಿತು ತನಿಖೆಯೂ ಆಗಿಲ್ಲ. ಕ್ರಮ‌ ಆಗಿಲ್ಲ. ಪಹಲ್ಗಾಂನಲ್ಲಿ ದಾಳಿಯಾದಾಗ ಏನು ಮಾಡಿದಿರಿ? ನಿಮ್ಮಿಂದ ಇದುವರೆಗೂ ಅವರನ್ನು ಹಿಡಿಯಲಾಗಿಲ್ಲ ಎಂದು ಕಿಡಿ ಕಾರಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡರಾದ ಡಾ.ರವಿಕುಮಾರ ಬಿರಾದಾರ, ಫಯಾಜ್ ಕಲಾದಗಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೈಲಾದಷ್ಟು ಸಹಾಯ ಮಾಡಲು ಸಂಕಲ್ಪ ಮಾಡಿ: ಶಾಸಕ ಕಟಕಧೊಂಡ
ಸಾಲಹಳ್ಳಿಯಲ್ಲಿ ನಾಳೆ ಗುರ್ಲಾಪುರ ಮಾದರಿ ಹೋರಾಟ?